ಕಾರವಾರ: ಅದು ನಗರವ್ಯಾಪ್ತಿಯಲ್ಲಿರುವ ಮೂಲಭೂತ ಸೌಲಭ್ಯ ವಂಚಿತ ಕುಗ್ರಾಮ. ಭಾರತ ಅಮೃತಮಹೋತ್ಸವ ಆಚರಿಸಿಕೊಂಡಿದ್ದರೂ ಕೂಡ ಈ ಗ್ರಾಮಕ್ಕೆ ಕನಿಷ್ಠ ಮೂಲಭೂತ ಸೌಕರ್ಯಗಳಲ್ಲಿ ಒಂದಾದ ರಸ್ತೆ ಇಲ್ಲದೆ ಇಂದು ನಿತ್ಯ ನರಕ ಅನುಭವಿಸಬೇಕಾಗಿದೆ. ಕಳೆದ ಎರಡು ದಿನದ ಹಿಂದೆ ಅನಾರೋಗ್ಯದಿಂದ ಮೃತಪಟ್ಟಿದ್ದ ವ್ಯಕ್ತಿಯೋರ್ವರ ಮೃತದೇಹವನ್ನು ರಸ್ತೆ ಇಲ್ಲದ ಕಾರಣಕ್ಕೆ ಕಟ್ಟಿಗೆಯಲ್ಲಿಯೇ ಕಂಬಳಿ ಜೋಲಿ ಮಾಡಿಕೊಂಡು ಊರಿಗೆ ಸಾಗಿಸಿದ್ದು, ಇಲ್ಲಿನ ಜ್ವಲಂತ ಸಮಸ್ಯೆಗೆ ಉತ್ತಮ ಉದಾಹರಣೆ.
ಉದ್ಯೋಗ: ನ್ಯೂ ಇಂಡಿಯಾ ಅಶ್ಯೂರೆನ್ಸ್ ಕಂಪನಿ ಲಿಮಿಟೆಡ್ ನೇಮಕಾತಿ: ಪದವಿ ಆದವರು ಅರ್ಜಿ ಸಲ್ಲಿಸಿ
ಉತ್ತರಕನ್ನಡ ಜಿಲ್ಲೆಯ ಕಾರವಾರದ ಗುಡ್ಡಳ್ಳಿಯ ಜನ ಇಂತಹದೊoದು ಕರುಣಾಜನಕ ಸ್ಥಿತಿಯಲ್ಲಿ ಕಾಲ ಕಳೆಯುತ್ತಿದ್ದಾರೆ. ಅಷ್ಟಕ್ಕೂ ಇದ್ಯಾವುದೋ ದೂರದ ಹಳ್ಳಿಯ ಪರಿಸ್ಥಿತಿಯಲ್ಲ. ಬದಲಿಗೆ ನಗರಸಭೆ ವ್ಯಾಪ್ತಿಯಲ್ಲಿರುವ ಗ್ರಾಮ ಅಂದ್ರೆ ನೀವು ನಂಬ್ಲೇಬೇಕು. ಹೌದು, ಕಾರವಾರ ನಗರಸಭೆಯ ವಾರ್ಡ್ ನಂ.31ರ ಕುಗ್ರಾಮ ಗುಡ್ಡಳ್ಳಿಗೆ ತೆರಳಲು ಸೂಕ್ತ ರಸ್ತೆ ವ್ಯವಸ್ಥೆ ಇಲ್ಲ. ಗ್ರಾಮದ ನಿವಾಸಿ ರಾಮಾ ಮೊನ್ನಾ ಗೌಡಾ(75) ಅನಾರೋಗ್ಯದ ಹಿನ್ನಲೆ ಕಾರವಾರ ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದರು. ಅ
ದರೆ ಚಿಕಿತ್ಸೆಗೆ ಸ್ಪಂದಿಸದೇ ರಾಮಾ ಗೌಡಾ ಹೃದಯಾಘಾತದಿಂದ ಮೃತಪಟ್ಟಿದ್ದು, ಕುಟುಂಬಸ್ಥರು ಅಂಬ್ಯುಲೆನ್ಸ್ ಮೂಲಕ ಗುಡ್ಡದ ಕೆಳಗಿನವರೆಗೆ ಮೃತದೇಹವನ್ನ ಕೊಂಡೊಯ್ದರು. ಬಳಿಕ ಅಲ್ಲಿಂದ ಗುಡ್ಡೆಹಳ್ಳಿಗೆ ರಸ್ತೆ ಇಲ್ಲದ ಕಾರಣ ಗ್ರಾಮಸ್ಥರು ಸೇರಿ ಮೃತದೇಹವನ್ನ ದೊಡ್ಡ ಕಟ್ಟಿಗೆಗೆ ಕಂಬಳಿಯಲ್ಲಿ ಸುತ್ತಿ ಹಗ್ಗದಿಂದ ಕಟ್ಟಿಕೊಂಡು ಸುಮಾರು 4 ಕಿಮೀ ದೂರ ಹೊತ್ತುಕೊಂಡೇ ಗುಡ್ಡ ಹತ್ತಿದ್ದಾರೆ.
ಇನ್ನು ಅರಣ್ಯ ಪ್ರದೇಶವನ್ನೊಳಗೊಂಡು ಗುಡ್ಡದ ತುದಿಯಲ್ಲಿರುವ ಗುಡ್ಡಳ್ಳಿ ಪ್ರವಾಸಿಗರ ಪಾಲಿನ ಫೇವರೇಟ್ ಸ್ಪಾಟ್ ಆಗಿದೆ. ರಜಾ ದಿನಗಳಲ್ಲಿ ಪ್ರತಿನಿತ್ಯವೂ ಚಾರಣಿಗರು ಟ್ರೆಕ್ಕಿಂಗ್ ಮಾಡಿಕೊಂಡು ಈ ಹಳ್ಳಿಗೆ ಭೇಟಿ ನೀಡುತ್ತಾರೆ. 100ಕ್ಕೂ ಹೆಚ್ಚು ಜನರು ಇರುವ ಊರಿಗೆ ತೆರಳಲು ಸಮರ್ಪಕ ರಸ್ತೆ ಇಲ್ಲ. ಹೀಗಾಗಿ ಗ್ರಾಮದಲ್ಲಿ ಯಾರೇ ಅನಾರೋಗ್ಯಕ್ಕೆ ಒಳಗಾದರೂ ಜೋಲಿ ಕಟ್ಟಿಕೊಂಡು ಆಸ್ಪತ್ರೆಗೆ ಸಾಗಿಸಬೇಕಾಗಿದೆ.
ಅದೆಷ್ಟೋ ಜನರು ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯದಲ್ಲಿಯೇ ಸಾವನ್ನಪ್ಪಿದ್ದು ಮಳೆಗಾಲದಲ್ಲಂತೂ ಸಮಸ್ಯೆ ಹೇಳತೀರದಾಗಿದೆ ಎನ್ನುತ್ತಾರೆ ಗ್ರಾಮಸ್ಥರು. ಮಾಜಿ ಶಾಸಕಿ ರೂಪಾಲಿ ನಾಯ್ಕ ಅವಧಿಯಲ್ಲಿ 1.5 ಕಿ.ಮೀ ರಸ್ತೆ ನಿರ್ಮಾಣಕ್ಕೆ ಅನುದಾನ ನೀಡಲಾಗಿದೆ. ಆದರೆ ಗುತ್ತಿಗೆದಾರರ ನಿರ್ಲಕ್ಷ್ಯದಿಂದ ಇನ್ನೂ ಕೂಡ ಆಗಿಲ್ಲ. ಪಿಡಬ್ಲ್ಯೂಡಿ ಇಲಾಖೆ ವಿಚಾರಿಸಿದಾಗ ಗುತ್ತಿಗೆದಾರರು ಮಳೆಗಾಲ ಮುಗಿದ ಬಳಿಕ ಕಾಮಗಾರಿ ಪ್ರಾರಂಭಿಸುವುದಾಗಿ ಹೇಳುತ್ತಿದ್ದಾರೆ. ಸದ್ಯ ಮಂಜೂರಿಯಾದ ಕಾಮಗಾರಿಯನ್ನ ಗುತ್ತಿಗೆದಾರರು ಪ್ರಾರಂಭಿಸದೇ ಇದ್ದಲ್ಲಿ ಕ್ರಮ ಕೈಗೊಳ್ಳುತ್ತೇವೆ ಅಂತಾರೇ ನಗರಸಭಾ ಅಧ್ಯಕ್ಷ.
ಒಟ್ಟಾರೇ ಭಾರತ ಡಿಜಿಟಲ್ ಯುಗದತ್ತ ದಾಪುಗಾಲಿಡುತ್ತಿರುವ ಸಂದರ್ಭದಲ್ಲೂ ಇನ್ನೂ ಸಹ ರಸ್ತೆಯೇ ಇಲ್ಲದ ಕುಗ್ರಾಮಗಳು ಇರೋದು ನಿಜಕ್ಕೂ ದುರಂತವೇ. ಇನ್ನಾದ್ರೂ ಸಂಬAಧಪಟ್ಟವರು ಇತ್ತ ಗಮನಹರಿಸಿ ಗ್ರಾಮಕ್ಕೆ ರಸ್ತೆ ವ್ಯವಸ್ಥೆ ಕಲ್ಪಿಸಿಕೊಡಲು ಮುಂದಾಗಲೀ ಅನ್ನೋದೇ ನಮ್ಮ ಆಶಯ.
ವಿಸ್ಮಯ ನ್ಯೂಸ್, ಕಾರವಾರ