ಅಣಬೆ ತರಲು ಹೋಗಿ ತಡರಾತ್ರಿವರೆಗೂ ಅಲೆದಾಡಿದ ಮಹಿಳೆ: ದಾರಿ ತಪ್ಪಿಸಿದ ದಾಟುಬಳ್ಳಿ ! ಮರೆವಿನ ಬಳ್ಳಿ ದಾಟಿದರೆ ಏನಾಗುತ್ತದೆ?
ಕಾರವಾರ: ಆ ಮಹಿಳೆ ಅಣಬೆ ತರುವುದಕ್ಕಾಗಿ ಅರಣ್ಯಕ್ಕೆ ಹೋಗಿದ್ದಳು. ಮಧ್ಯಾಹ್ನ ಕಾಡಿಗೆ ಹೋದವರು ಸಂಜೆಯಾದರೂ ಮನೆಗೆ ಬಂದಿರಲಿಲ್ಲ. ಮೊಬೈಲ್ ಗೆ ಕರೆ ಮಾಡಿದ್ರೂ ನಾಟ್ ರೀಚೆಬಲ್ ಎಂದು ಬರುತ್ತಿತ್ತು. ಹೀಗಾಗಿ ಆತಂಕಗೊoಡ ಮನೆಯವರು ಅರಣ್ಯ ಸಿಬ್ಬಂದಿಗೆ ಮತ್ತು ಪೊಲೀಸರಿಗೆ ಮಾಹಿತಿ ನೀಡಿದರು. ಮಹಿಳೆಯ ಮೊಬೈಲ್ ನೆಟ್‌ವರ್ಕ್ ಟ್ರ್ಯಾಕ್ ಮಾಡಿದ ಪೊಲೀಸರು, ಆ ಸ್ಥಳಕ್ಕೆ ತೆರಳಿದರೂ ಅಲ್ಲಿ ಮಹಿಳೆ ಇರಲಿಲ್ಲ.
ಮತ್ತೆ ಮೊಬೈಲ್ ಲೊಕೇಶನ್ ಟ್ಯಾಕ್ ಮಾಡಿ, ಹುಡುಕಾಟ ನಡೆಸಿದಾಗ ಮಹಿಳೆ ಪತ್ತೆಯಾದಳು. ಅಷ್ಟೊತ್ತಿಗಾಗಲೇ ರಾತ್ರಿ 11 ಗಂಟೆಯಾಗಿತ್ತು. ತುಂಬಾ ಗಾಳಿ ಮಳೆ ಇದ್ದದ್ದರಿಂದ ಸ್ವಲ್ಪಮಟ್ಟಿಗೆ ಅಸ್ವಸ್ಥಗೊಂಡಿದ್ದಳು ಮಹಿಳೆ. ಕೊನೆಗೂ ಅಣಬೆ ತರುವುದಕ್ಕಾಗಿ ಕಾಡಿಗೆ ಹೋಗಿ ದಾರಿತಪ್ಪಿದ ಮಹಿಳೆಯನ್ನು ಅರಣ್ಯ ಸಿಬ್ಬಂದಿ ಹಾಗೂ ಪೊಲೀಸರು , ಕಾರ್ಯಾಚರಣೆ ನಡೆಸಿ ರಕ್ಷಿಸಿದರು. ಆದ್ರೆ, ದಾರಿ ತಪ್ಪಲು ಅದೊಂದು ಬಳ್ಳಿ ಕಾರಣವಾಗಿತ್ತು ಎಂಬುದನ್ನ ಮಹಿಳೆ ವಿವರಿಸಿದ್ದಾಳೆ.
ಏನಿದು ದಾಟುಬಳ್ಳಿ? ಬಿಳಿ ದಾರದಂತಿರುವ ಈ ಜೀವಿಗೆ ಗ್ರಾಮೀಣ ಭಾಗದಲ್ಲಿ ಸಾಮಾನ್ಯವಾಗಿ ದಾಟುಬಳ್ಳಿ ಅಥವಾ ಮರೆವಿನ ಬಳ್ಳಿ ಎಂದು ಕರೆಯುತ್ತಾರೆ. ಕಾಡಿಗೆ ಹೋದ ವೇಳೆ ಈ ದಾಟುಬಳ್ಳಿ ದಾಟಿದರೆ ದಾರಿ ತಪ್ಪುತ್ತದೆ. ಮರಳಿ ಮನೆಗೆ ಬರಲು ದಿಕ್ಕುತೋಚದಂತೆ ಆಗುತ್ತದೆ ಎಂಬುದು ಗ್ರಾಮೀಣ ಹಳ್ಳಿ ಭಾಗದ ಜನರ ನಂಬಿಕೆ. ಈ ವಿರಳ ಜೀವಿ ಮಳೆಗಾಲದಲ್ಲಿ ಮಾತ್ರ ಕಾಣಸಿಗುತ್ತದೆ. ಅಷ್ಟು ಗಮನಕೊಟ್ಟಿ ನೋಡಿದ್ರೆ ಮಾತ್ರ ಇದು ಕಾಣಿಸುತ್ತದೆ.
ಅಣಬೆ ತರಲು ಕಾಡಿಗೆ ಹೋದಾಗ ಇದೇ ದಾಟುಬಳ್ಳಿಯನ್ನು ದಾಟಿದ್ದಾಳೆ. ಹೀಗಾಗಿ ದಾರಿ ತಪ್ಪಿದೆ ಎಂದು ಮಹಿಳೆ ಹೇಳಿಕೊಂಡಿದ್ದಾಳೆ. ಈ ಘಟನೆ ನಡೆದಿರೋದು ಉತ್ತರಕನ್ನಡ ಜಿಲ್ಲೆಯ ಅಂಬಿಕಾನಗರದಲ್ಲಿ. ಸ್ಥಳೀಯವಾಗಿ ದಾಟುಬಳ್ಳಿ ಎಂದು ಕರೆಯುವ ಜೀವಿಗೆ ಇಂಗ್ಲಿಷ್‌ನಲ್ಲಿ ಹಾರ್ಸ್ಹೇರ್ ಅಥವಾ ಗಾರ್ಡಿಯನ್ ಎನ್ನುತ್ತಾರೆ.
ಬ್ಯೂರೋ ರಿಪೋರ್ಟ್ ವಿಸ್ಮಯ ನ್ಯೂಸ್