ಮಣ್ಣಲ್ಲಿ ಮಣ್ಣಾದ ಅರ್ಜುನ್: ಕುಟುಂಬಸ್ಥರ ಆಕ್ರಂದನ : ಶೋಕ ಸಾಗರದ ಜೊತೆ ಜನಸಾಗರ

ಅಂಕೋಲಾ : ಜುಲೈ 16ರಂದು ಸಂಭವಿಸಿದ್ದ ಭೀಕರ ಗುಡ್ಡ ಕುಸಿತ ದುರಂತದ ಬಳಿಕ ನಾಪತ್ತೆಯಾಗಿದ್ದ 11 ಜನರಲ್ಲಿ, ಅತಿ ಹೆಚ್ಚಾಗಿ ಕೇಳಿ ಬಂದಿದ್ದು ಕೇರಳ ಮೂಲದ ಅರ್ಜುನ್ ಎಂಬ ಚಾಲಕನ ಹೆಸರಾಗಿತ್ತು.ಈ ನಡುವೆ ಎಂಟು ಮಂದಿ ಮೃತ ದೇಹವಾಗಿ ಪತ್ತೆಯಾಗಿದ್ದರಾದರೂ , ಕೇರಳ ಮೂಲದ ಅರ್ಜುನ್,ಸ್ಥಳೀಯರಾದ ಜಗನ್ನಾಥ್,ಗಂಗೆ ಕೊಳ್ಳದ ಲೋಕೇಶ್ ಶೋಧ ಕಾರ್ಯ ಮುಂದುವರೆದಿತ್ತು.

ಅರ್ಜುನ್ ಲಾರಿಯಲ್ಲಿ ಏನೆಲ್ಲಾ ಸಿಕ್ಕಿತು : ಶಿರೂರು ಗುಡ್ಡ ಕುಸಿತದ ಬಳಿಕವೂ ರಿಂಗಣಿಸಿತ್ತೇ ಮೊಬೈಲ್ ?

ಕೊನೆಗೂ ಅರ್ಜುನ್ ತನ್ನ ಬೆಂಜ್ ಲಾರಿಯಲ್ಲಿಯೇ ಮೃತ ದೇಹವಾಗಿ,ಗಂಗಾವಳಿ ನದಿಯಲ್ಲಿ ಪತ್ತೆಯಾಗಿದ್ದ.ವಾಹನ ಸಮೇತ ಆತನ ಮೃತ ದೇಹದ ಭಾಗಗಳನ್ನು ಮೇಲೆತ್ತಿ,ಕಾರವಾರ ಜಿಲ್ಲಾ ಆಸ್ಪತ್ರೆ ಶವಗಾರಕ್ಕೆ ಸಾಗಿಸಿ,ಅಲ್ಲಿ ಡಿಎನ್ಎ ಪರೀಕ್ಷೆಗೆ ಒಳಪಡಿಸಲಾಗಿತ್ತು. ತದನಂತರ ಕಾನೂನು ಕ್ರಮಗಳನ್ನು ಮುಗಿಸಿ, ಮೃತ ದೇಹವನ್ನು ಅಂಬುಲೆನ್ಸ್ ಮೂಲಕ ಕೇರಳಕ್ಕೆ ಸಾಗಿಸಲಾಗಿತ್ತು.

ಈಗ ಅರ್ಜುನ್ ಮೃತ ದೇಹ ತಲುಪಿಸಲು, ಸ್ವತಃ ಸೈಲ್ ಅವರೇ ಬಂದಿರುವುದು ಕೇರಳಿಗರಿಗೆ ಉತ್ತರ ಕನ್ನಡಿಗನ ಬಗ್ಗೆ ಮತ್ತಷ್ಟು ಹೆಮ್ಮೆ ಹಾಗು ಅಭಿಮಾನ ಹೆಚ್ಚಿಸುವಂತಾಯಿತು. ದುಃಖದ ಮಡುವಿನಲ್ಲಿರುವ ಅರ್ಜುನನ ಮಡದಿ ಕೃಷ್ಣ ಪ್ರಿಯಾ, ಮಗ ಐವಾನ್,ಹಾಗೂ ಕುಟುಂಬಸ್ಥರನ್ನು ಪ್ರೀತಿಯಿಂದ ಸಂತೈಸಿದ ಶಾಸಕ ಸತೀಶ ಸೈಲ್,ಪ್ರಕೃತಿ ಮತ್ತು ವಿಧಿ ಆಟದ ಮುಂದೆ ನಮ್ಮಿಂದ ಏನು ಮಾಡಲು ಸಾಧ್ಯವಿಲ್ಲ, ಆದರೆ ಮಾನವೀಯ ನೆಲೆಯಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡಿದ ತೃಪ್ತಿ ನನಗಿದೆ.

ಸ್ಥಳೀಯರು ಮತ್ತು ನಮ್ಮ ಸರ್ಕಾರಗಳು ಎಲ್ಲರನ್ನೂ ಒಂದೇ ದೃಷ್ಟಿಯಿಂದ ನೋಡಿವೆ. ಭಗವಂತ ನಿಮಗೆ ಅರ್ಜುನನ ಅಗಲುವಿಕೆಯ ನೋವು ಹಾಗೂ ದುಃಖ ಸಹಿಸುವ ಶಕ್ತಿ ಕರುಣಿಸಲಿ ಮತ್ತು ಅರ್ಜುನನ ಆತ್ಮಕ್ಕೆ ಚಿರಶಾಂತಿ ಕರುಣಿಸಲಿ ಎಂದು ಪ್ರಾರ್ಥಿಸುವುದಾಗಿ ತಿಳಿಸಿ,ವೈಯಕ್ತಿಕ ನೆಲೆಯಲ್ಲಿಯೂ ಧನಸಹಾಯದ ನೆರವು ನೀಡಿದ್ದಲ್ಲದೇ ಸರ್ಕಾರದ ವತಿಯಿಂದ ಅರ್ಜುನ್ ಕುಟುಂಬಕ್ಕೆ 5 ಲಕ್ಷ ರೂ ಪರಿಹಾರ ಧನದ ಚೆಕ್ ವಿತರಿಸಿ,ಮತ್ತೊಮ್ಮೆ ಸಾಂತ್ವನ ಹೇಳಿ, ಅರ್ಜುನನ ಮುದ್ದು ಕಂದಮ್ಮನ ಆಯುಷ್ಯ ಆರೋಗ್ಯ ಹಾಗೂ ಭವಿಷ್ಯಕ್ಕೆ ಹರಸಿ , ಅರ್ಜುನ ಕುಟುಂಬಸ್ಥರನ್ನು ಪ್ರೀತಿಯಿಂದ ಮಾತನಾಡಿಸಿದರು.

ಸೈಲ್ ಅವರ ಬಗ್ಗೆ ಕೇಳಿ ತಿಳಿದಿದ್ದ,ಟಿವಿ ಮಾಧ್ಯಮಗಳಲ್ಲಿಯೂ ನೋಡಿದ್ದ,ಹಾಗೂ ಕೆಲ ಸದಸ್ಯರು ನೇರವಾಗಿ ಭೇಟಿಯಾಗಿದ್ದು,ಅವೆಲ್ಲ ಕಾರಣಗಳಿಂದ ಭಾವುಕರಾದ ಅರ್ಜುನ್ ಕುಟುಂಬಸ್ಥರು,ಕುಟುಂಬದ ಪರವಾಗಿ ಕೃತಜ್ಞತೆ ಸಲ್ಲಿಸುತ್ತಿರುವುದು,ನೋಡುಗರ ಕಣ್ಣಾಲಿಗಳು ಒದ್ದೆಯಾಗುವಂತಿತ್ತು.

ಒಟ್ಟಿನಲ್ಲಿ ಕಾರವಾರದಿಂದ ಅರ್ಜುನ್ ಮೃತದೇಹವನ್ನು ಕೇರಳ ತಲುಪಿಸಿದ ಶಾಸಕ ಸೈಲ್, ಕೇರಳಿಗರ ಹೃದಯದಲ್ಲಿ ಜನನಾಯಕನಾಗಿ ಅರ್ಜುನ್ ಹೆಸರಿನೊಂದಿಗೆ ತಮ್ಮದೇ ಛಾಪು ಮೂಡಿಸಿ,ಉತ್ತರ ಕನ್ನಡ ಜಿಲ್ಲೆ ಹಾಗೂ ಕನ್ನಡ ನಾಡಿನ ಜನರ ಪರವಾಗಿ ಸೈಲ್ ತಮ್ಮ ಹೃದಯ ಶ್ರೀಮಂತಿಕೆಯನ್ನು,ಕೇರಳಗರಿಗೆ ತೋರ್ಪಡಿಸಿದಂತಾಗಿದೆ.ಅಲ್ಲಿನ ಧಾರ್ಮಿಕ ಪದ್ಧತಿಯ ಪ್ರಕಾರ ಅರ್ಜುನನ ಸಂಸ್ಕಾರ ನೆರವೇರಿಸಲಾಗಿದ್ದು,ಕೇರಳ ಮಂಜೇಶ್ವರ ಶಾಸಕ ಅಶ್ರಫ್ ಸೇರಿದಂತೆ ಇತರೆ ಕೆಲ ಶಾಸಕರು, ಎಂಪಿ ರಾಘವನ್ ಮತ್ತಿತರ ಪ್ರಮುಖರಿದ್ದರು. ಕೇರಳ ಸರ್ಕಾರ ಹಾಗೂ ಜನತೆಯ ಪರವಾಗಿ ಶಾಸಕ ಸೈಲ್ ಅವರನ್ನು ಮುಕ್ತ ಕಂಠದಿಂದ ಶ್ಲಾಘಿಸಲಾಯಿತು .

ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ

Exit mobile version