ಅನುದಾನ ಬಿಡುಗಡೆಯಾಗಿ 2 ವರ್ಷ ಆಯ್ತು : ಇನ್ನು ಕಾಮಗಾರಿಯೇ ಆರಂಭವಾಗಿಲ್ಲ

ಅನುದಾನ ಬಿಡುಗಡೆಯಾಗಿ 2 ವರ್ಷ ಆಯ್ತು : ಇನ್ನು ಕಾಮಗಾರಿಯೇ ಆರಂಭವಾಗಿಲ್ಲ ಆಕ್ರೋಶಗೊಂಡ ಸಾರ್ವಜನಿಕರಿಂದ ಕ್ರಮಕ್ಕೆ ಆಗ್ರಹಿಸಿ ಪುರಸಭೆಗೆ ಮನವಿ

ಭಟ್ಕಳ: ತಾಲೂಕಿನ ಪುರಸಭೆ ವ್ಯಾಪ್ತಿಯಲ್ಲಿ ನಗರೋತ್ಥಾನ ಯೋಜನೆಯಲ್ಲಿ ಮಂಜೂರಾದ ಕಾಮಗಾರಿಗಳನ್ನು ಸೂಕ್ತ ಸಮಯದಲ್ಲಿ ಮುಗಿಸದೆ ವಿಳಂಬ ನೀತಿಯನ್ನು ಅನುಸರಿಸುತ್ತಿರುವ ಹಾಗೂ ಈಗಾಗಲೇ ಮಾಡಿರುವ ಕಾಮಗಾರಿಗಳು ಕಳಪೆ ಗುಣಮಟ್ಟದ್ದಾಗಿರುವ ಕಾರಣದಿಂದಾಗಿ ಗುತ್ತಿದಾರರರ ವಿರುದ್ದ ಸೂಕ್ತ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಸಾರ್ವಜನಿಕರು ಪುರಸಭೆ ಮುಖ್ಯಾಧಿಕಾರಿ ನೀಲಕಂಠ ಮೇಸ್ತರವರಿಗೆ ಮನವಿ ಪತ್ರ ನೀಡಿದರು.

ನೇಮಕಾತಿ: ನಬಾರ್ಡ್ ನಲ್ಲಿ 108 ಉದ್ಯೋಗಾವಕಾಶ: SSLC ಆದವರು ಅರ್ಜಿ ಸಲ್ಲಿಸಬಹುದು

ನಗರೋತ್ಥಾನ ಯೋಜನೆಯಡಿಯಲ್ಲಿ ಸೋನಾರಕೇರಿ ಯಿಂದ ಆಸರಕೇರಿ ರಸ್ತೆಗೆ ಡಾಂಬರಿಕರಣ ಮಾಡಲು ಅನುದಾನ ಬಿಡುಗಡೆಯಾಗಿ 2 ವರ್ಷ ಕಳೆದರು ಕಾಮಗಾರಿ ಪ್ರಾರಂಭಿಸಿಲ್ಲ. ಇದರಿಂದಾಗಿ ಸಾರ್ವಜನಿಕರಿಗೆ ಹದಗೆಟ್ಟು ಹೋದ ರಸ್ತೆಯಲ್ಲಿ ಓಡಾಟ ದುಸ್ತರವಾಗಿದೆ. 

ಆಸರಕೇರಿಯಲ್ಲಿ ಈ ಹಿಂದೆ ನಿರ್ಮಾಣ ಮಾಡಿದ ಕಾಂಕ್ರೀಟ್ ರಸ್ತೆಯೂ ತೀರಾ ಕಳಪೆಮಟ್ಟದಲ್ಲಿದೆ. ಒಳಚರಂಡಿ ನವೀಕರಣ ಕಾಮಗಾರಿಯೂ ಅವೈಜ್ಞಾನಿಕವಾಗಿ, ಕಳಪೆ ಗುಣಮಟ್ಟದಲ್ಲಿ ನಿರ್ಮಾಣ ಮಾಡಿದ್ದರಿಂದ ಮಳೆಗಾಲದ ಸಂದರ್ಭದಲ್ಲಿ ಒಳಚರಂಡಿಯಿಂದ ನೀರು ಹೊರಬಂದು ರಸ್ತೆಯ ಮೇಲೆ ಹರಿಯುವುದಲ್ಲದೆ ಅಕ್ಕಪಕ್ಕದ ಕುಡಿಯುವ ನೀರಿನ ಬಾವಿಗಳಿಗೂ ಸೇರಿ ನೀರು ಮಲಿನಗೊಳ್ಳುತ್ತಿದೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ವೆಂಕಟೇಶ ನಾಯ್ಕ, ಶ್ರೀಕಾಂತ ನಾಯ್ಕ, ಪಾಂಡು ನಾಯ್ಕ ಮತ್ತಿತರರು ಹಾಜರಿದ್ದರು.

ವಿಸ್ಮಯ ನ್ಯೂಸ್ ಈಶ್ವರ ನಾಯ್ಕ, ಭಟ್ಕಳ

Exit mobile version