ಅಂಕೋಲಾ : ಬೋಟಿನ ಕೋಲ್ಡ್ ಸ್ಟೋರೇಜ್ ಕ್ಲೀನ್ ಮಾಡುತ್ತಿದ್ದ ವೇಳೆ ಸಂಭವಿಸಿದ ಆಕಸ್ಮಿಕ ಅವಘಡದಲ್ಲಿ ಓರ್ವ ಕಾರ್ಮಿಕ ಉಸಿರುಗಟ್ಟಿ ಅಸ್ವಸ್ಥಗೊಂಡು ಬಿದ್ದಾಗ , ಆತನನ್ನು ಎತ್ತುಕೊಂಡು ಬರಲು ಹೋದ ಇನ್ನೋರ್ವನೂ ಅಸ್ವಸ್ಥನಾದಾಗ , ಬೋಟಿನಲ್ಲಿದ್ದ ಇತರರು ಸೇರಿ ಅವರಿಬ್ಬರನ್ನು ಕೋಲ್ಡ್ ಸ್ಟೋರೇಜ್ ನಿಂದ ಹೊರಗೆ ತಂದು ಅಂಬುಲೆನ್ಸ್ ಮೂಲಕ ಆಸ್ಪತ್ರೆಗೆ ಸಾಗಿ ಸಿದ್ದರಾದರೂ , ತೀವ್ರ ಅಸ್ವಸ್ಥಗೊಂಡಿದ್ದ ಒರ್ವ ಮೃತ ಪಟ್ಟರೆ , ಇನ್ನೋರ್ವನನ್ನು ಹೆಚ್ಚಿನ ಚಿಕಿತ್ಸೆಗಾಗಿ ಜಿಲ್ಲಾ ಆಸ್ಪತ್ರೆಗೆ ಸಾಗಿಸಲಾಗಿದೆ.
ಬೆಲೇಕೇರಿಯ ವ್ಯಕ್ತಿಯೋರ್ವರ ಬೋಟಿನಲ್ಲಿ ಈ ಆಕಸ್ಮಿಕ ಅವಘಡ ಸಂಭವಿಸಿದೆ . ಈ ಬೋಟಿನಲ್ಲಿ ಕೆಲಸಕ್ಕೆ ಇದ್ದ ಛತ್ತೀಸ್ ಗಡ ಮೂಲದ ರಾಕೇಶ ನಾಗ ತಂದೆ ಬಿಲ್ವಾರಾಮ (25) ಎಂಬಾತನೇ ಮೃತ ದುರ್ದೈವಿ. ಈತನು ಅಕ್ಟೋಬರ್ 9 ರಂದು ಬೋಟಿನ ಕೋಲ್ಡ್ ಸ್ಟೋರೇಜ್ ನಲ್ಲಿ ಇಳಿದು ಕ್ಲೀನ್ ಮಾಡಲು ಹೋದಾಗ ಉಸಿರುಗಟ್ಟಿ ಅಸ್ವಸ್ಥನಾಗಿ ಬಿದ್ದಾಗ ,ಅದೇ ಬೋಟಿನಲ್ಲಿ ಕೆಲಸ ಮಾಡುತ್ತಿದ್ದ ಅವಿನಾಶ ನು , ರಾಕೇಶನಿಗೆ ಎತ್ತುಕೊಂಡು ಬರಲು ಹೋದಾಗ ಆತ ಸಹ ಅಸ್ವಸ್ಥ ಗೊಂಡ ಎನ್ನಲಾಗಿದೆ.
ಕೂಡಲೇ ಬೋಟಿನಲ್ಲಿದ್ದ ಇತರರು ಸೇರಿ ,ರಾಕೇಶ್ ಮತ್ತು ಅವಿನಾಶ್ ಇವರನ್ನು ಕೋಲ್ಡ್ ಸ್ಟೋರೇಜ್ ನಿಂದ ಹೊರಗೆ ತಂದು ಉಪಚರಿಸಿ ನಂತರ ಅಂಬುಲೆನ್ಸ್ ಮೂಲಕ ತಾಲೂಕ ಸರ್ಕಾರಿ ಆಸ್ಪತ್ರೆಗೆ ಕರತಂದಿದ್ದಾರೆ. ಪರೀಕ್ಷಿಸಿದ ವೈದ್ಯರು ರಾಕೇಶ ಈಗಾಗಲೇ ಮೃತಪಟ್ಟಿದ್ದನ್ನು ಖಚಿತಪಡಿಸಿದ್ದಾರೆ. ಅಸ್ವಸ್ಥಗೊಂಡಿದ್ದ ಅವಿನಾಶ ಈತನಿಗೆ ಹೆಚ್ಚಿನ ಚಿಕಿತ್ಸೆಗಾಗಿ ಜಿಲ್ಲಾ ಆಸ್ಪತ್ರೆ ಕಾರವಾರಕ್ಕೆ ದಾಖಲಿಸಿದ್ದಾರೆ.ಕಾನೂನು ಕ್ರಮಗಳನ್ನು ಕೈಗೊಂಡು , ರಾಕೇಶನ ಮೃತ ದೇಹವನ್ನು ವಿಮಾನದ ಮೂಲಕ ವಾರಸುದಾರರಿಗೆ ತಲುಪಿಸುವ ವ್ಯವಸ್ಥೆ ಮಾಡಲಾಗಿದ್ದು ,ಸಾಮಾಜಿಕ ಕಾರ್ಯಕರ್ತ ವಿಜಯಕುಮಾರ ನಾಯ್ಕ , ಬೆಲೇಕೇರಿಯ ಮೀನುಗಾರ ಮುಖಂಡರಾದ ಪ್ರಮೋದ ಬಾನಾವಳಿ ಕರ , ಸಚಿನ ಅಸ್ನೋಟಿಕರ , ಹಾಗೂ ಸ್ಥಳೀಯ ಬೋಟ್ ಮಾಲಕರು ಇತರೆ ಪ್ರಮುಖರು ಪೋಲಿಸ್ ಇಲಾಖೆ ಮತ್ತು ಮೃತನ ಕುಟುಂಬಸ್ಥರಿಗೆ ಸಹಕರಿಸಿದರು.
ಕಳೆದ 1-2 ತಿಂಗಳ ಹಿಂದಷ್ಟೇ ಸಮುದ್ರ ಮೀನುಗಾರಿಕೆ ಆರಂಭವಾಗಿದ್ದು ನಾನಾ ಕಾರಣಗಳಿಂದ ಕೆಲ ಅವಘಡಗಳು ಸಂಭವಿಸುತ್ತಲೇ ಇದೆ . ಪ್ರಮುಖ ಮೀನುಗಾರಿಕಾ ಸ್ಥಳವಾಗಿರುವ ಬೆಲೆ ಕೇರಿಯಲ್ಲಿಯಂತೂ ಕೆಲ ಮೂಲಭೂತ ಸೌಕರ್ಯಗಳ ಕೊರತೆ , ಅಸ್ವಚ್ಚತೆ ,ಕೆಲವರ ನಿರ್ಲಕ್ಷದಿಂದ ಅವಘಡ ಮತ್ತು ಪ್ರಾಣ ಹಾನಿ ಸಂಭವಿಸುತ್ತಿರುವ ಕುರಿತು ಸಾರ್ವಜನಿಕರು ಖೇದ ವ್ಯಕ್ತಪಡಿಸುತ್ತಿದ್ದಾರೆ. ಅಷ್ಟೇ ಅಲ್ಲದೇ ಇಲ್ಲಿಯ ಹಳೆಯ ಕಟ್ಟಡ ಒಂದು ಈಗಲೋ ಆಗಲೋ ಎಂಬಂತೆ ಮುರಿದು ಬೀಳುವ ಸ್ಥಿತಿಯಲ್ಲಿದ್ದು ,ಗಾಳಿ ಮಳೆ ಮತ್ತಿತರ ಸಂದರ್ಭಗಳಲ್ಲಿ ಇಲ್ಲಿ ಅಪಾಯ ಸಂಭವಿಸುವ ಸಾಧ್ಯತೆ ಹೆಚ್ಚಿದ್ದು ,ಯಾವುದೇ ಅನಾಹುತ ಆಗುವ ಮುನ್ನ ಸಂಬಂಧಿತ ಇಲಾಖೆಗಳು ಎಚ್ಚೆತ್ತುಕೊಂಡು ಸೂಕ್ತ ಮುಂಜಾಗ್ರತೆ ಮತ್ತು ಕ್ರಮ ತೆಗೆದುಕೊಳ್ಳಬೇಕೆನ್ನುವುದು ಸ್ಥಳೀಯರ ಆಗ್ರಹವಾಗಿದೆ.
ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ