ಅಂಕೋಲಾ: ರಾಜ್ಯ ಚುನಾವಣಾ ಆಯೋಗವು ರಾಜ್ಯದ ವಿವಿಧ ಜಿಲ್ಲೆಗಳ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಹಾಗೂ ಕೆಲ ಗ್ರಾ.ಪಂಗಳಲ್ಲಿ ವಿವಿಧ ಕಾರಣಗಳಿಂದ ತೆರವಾಗಿರುವ ಸ್ಥಾನಗಳಿಗೆ ಉಪ ಚುನಾವಣೆ ನಡೆಸುವಂತೆ ಆದೇಶ ಹೊರಡಿಸಿದೆ. ಇದೇ ವೇಳೆ ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ಪುರಸಭೆಯ ಮತ್ತು ಯಲ್ಲಾಪುರ ಪಟ್ಟಣ ಪಂಚಾಯತಿಯಲ್ಲಿ ತೆರವಾಗಿರುವ ತಲಾ ಒಂದು ಸ್ಥಾನಕ್ಕೆ ಚುನಾವಣೆ ಪ್ರಕ್ರಿಯೆ ನಡೆಯಲಿದೆ.
ನಿಯಂತ್ರಣ ತಪ್ಪಿ ಮುಗುಚಿದ ಟ್ಯಾಂಕರ್! ಚಾಲಕ ಪ್ರಾಣಾಪಾಯದಿಂದ ಪಾರು
ಒಟ್ಟೂ 23 ಸದಸ್ಯ ಬಲದ ಅಂಕೋಲಾ ಪುರಸಭೆಯ ವಾರ್ಡ್ ನಂಬರ್ 14 ರ ಸದಸ್ಯರಾಗಿದ್ದ ಜಗದೀಶ ನಾಯಕ (ಜಗದೀಶ ಮಾಸ್ತರ ) ಅವರು ಅನಾರೋಗ್ಯದ ಕಾರಣ ಕಳೆದ ಫೆಬ್ರುವರಿಯಲ್ಲಿ ಅಕಾಲಿಕ ನಿಧನರಾಗಿದ್ದ ಹಿನ್ನಲೆಯಲ್ಲಿ ತೆರವಾದ ಆ ಸ್ಥಾನಕ್ಕೆ ಉಪ ಚುನಾವಣೆ ನಡೆಯಲಿದೆ.
ತೆರವಾಗಿರುವ ಸ್ಥಾನಕ್ಕೆ ಚುನಾವಣೆ ಸಂಬಂಧಿಸಿದಂತೆ ನವೆಂಬರ್ 4 ರಂದು ಜಿಲ್ಲಾಧಿಕಾರಿಗಳು ಅಧಿಸೂಚನೆ ಹೊರಡಿಸಲಿದ್ದು ನಾಮಪತ್ರ ಸಲ್ಲಿಸುವ ಪ್ರಕ್ರಿಯೆ ಆರಂಭವಾಗಲಿದೆ. ನವೆಂಬರ್ 11 ನಾಮಪತ್ರ ಸಲ್ಲಿಸುವ ಕೊನೆಯ ದಿನವಾಗಿದ್ದು, ನವೆಂಬರ್ 12 ರಂದು ನಾಮಪತ್ರಗಳ ಪರಿಶೀಲನೆ ನಡೆಯಲಿದೆ.
ನವೆಂಬರ್ 14 ರವರೆಗೆ ಉಮೇದುವಾರಿಕೆಯನ್ನು ಹಿಂಪಡೆಯಲು ಅವಕಾಶವಿದ್ದು ಚುನಾವಣೆಯ ಅಗತ್ಯತೆ ಇದ್ದರೆ ನವೆಂಬರ್ 23 ರಂದು ಬೆಳಿಗ್ಗೆ 7 ರಿಂದ ಸಂಜೆ 5 ಗಂಟೆ ವರೆಗೆ ಮತದಾನ ನಡೆಯಲಿದ್ದು ಮರು ಮತದಾನದ ಅಗತ್ಯತೆ ಇದ್ದರೆ ನವೆಂಬರ್ 25 ರಂದು ಮತದಾನ ನಡೆಸಲಾಗುವುದು. ನವೆಂಬರ್ 26 ರಂದು ಮತಗಳ ಎಣಿಕೆ ನಡೆಯಲಿದೆ.
ಉಪ ಚುನಾವಣೆ ನಡೆಯಲಿರುವ ನಗರ ಸ್ಥಳೀಯ ಸಂಸ್ಥೆಗಳ ವಾರ್ಡುಗಳ ವ್ಯಾಪ್ತಿಯಲ್ಲಿ ನವೆಂಬರ್ 4 ರಿಂದ ನವೆಂಬರ್ 26ರ ವರೆಗೆ ನೀತಿ ಸಂಹಿತೆ ಜಾರಿ ಇರಲಿದ್ದು ಹಾಲಿ ಚಾಲ್ತಿಯಲ್ಲಿರುವ ವಿಧಾನಸಭಾ ಮತದಾರರ ಪಟ್ಟಿಯನ್ವಯ ಚುನಾವಣೆ ನಡೆಸಲು ಸೂಚಿಸಲಾಗಿದೆ. ಸರಿಸುಮಾರು ಇದೇ ವೇಳೆ ರಾಜ್ಯ ಹಾಗೂ ಉತ್ತರ ಕನ್ನಡ ಜಿಲ್ಲೆಯ ವಿವಿಧ ತಾಲೂಕುಗಳ ಕೆಲ ಗ್ರಾಮ ಪಂಚಾಯತಗಳಲ್ಲಿ ವಿವಿಧ ಕಾರಣಗಳಿಂದ ಖಾಲಿ ಇರುವ ,ತೆರವಾಗಿರುವ ಸದಸ್ಯ ಸ್ಥಾನಗಳಿಗೆ ಉಪಚುನಾವಣೆ ನಡೆಸಲು ಚುನಾವಣಾ ವೇಳಾಪಟ್ಟಿಯನ್ನು ಘೋಷಿಸಲಾಗಿದೆ. ಜೋಯಿಡಾ ತಾಲೂಕಿನ (ಕಾತೇಲಿ – ಕುಂಬಾರ ವಾಡಾ ) , ದಾಂಡೇಲಿ (ಅಂಬಿಕಾನಗರ),ಶಿರಸಿ (ಬಿಸಲಕೊಪ್ಪ ಮತ್ತು ಹುತ್ತುಗಾರ),ಮುಂಡಗೋಡ (ಹುನಗುಂದ ),ಹಳಿಯಾಳ (ಬೆಳವಟಗಿ ಮತ್ತು ಜನಗಾ), ಹೊನ್ನಾವರ (ಮಾಗೋಡ ),ಭಟ್ಕಳ (ಶಿರಾಲಿ ),ಸಿದ್ದಾಪುರ(ದೊಡ್ಮನೆ) ,ಕುಮಟ (ಹನೇಹಳ್ಳಿ), ಅಂಕೋಲಾ (ಸಗಡಗೇರಿ), ಕಾರವಾರ (ಚಿತ್ತಾಕುಲ ) ಗ್ರಾಮ ಪಂಚಾಯತಿಗಳ ತಲಾ ಒಂದು ಸ್ಥಾನಕ್ಕೆ ಉಪ ಚುನಾವಣೆ ನಡೆಯಲಿದ್ದು , ಈ ಕುರಿತು ನವಂಬರ್ 6 -20 24 ರಿಂದ ಆದಿ ಸೂಚನೆ ಹೊರಡಿಸಿ ,ಇತರೆ ಪ್ರಕ್ರಿಯೆಗಳನ್ನು ನಡೆಸಿ ,26 – 11 -2024 ರಂದು ಚುನಾವಣಾ ಪ್ರಕ್ರಿಯೆಯನ್ನು ಮುಕ್ತಾಯಗೊಳಿಸುವಂತೆ ಸೂಚಿಸಲಾಗಿದೆ.
ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ