ಬಾರ್ಡೋಲಿಯಲ್ಲಿ ಮೊಳಗಿದ ಕನ್ನಡದ ಕಹಳೆ : ಅಂಕೋಲಾದಲ್ಲಿ ಸಂಭ್ರಮದ ಕರ್ನಾಟಕ ರಾಜ್ಯೋತ್ಸವ.

ಅಂಕೋಲಾ: ತಾಲೂಕ ಮಟ್ಟದ ಕನ್ನಡ ರಾಜ್ಯೋತ್ಸವವನ್ನು ಪಟ್ಟಣ ವ್ಯಾಪ್ತಿಯಲ್ಲಿ ಅತ್ಯಂತ ಸಡಗರ ಸಂಭ್ರಮದಿಂದ
ಆಚರಿಸಲಾಯಿತು. ಪಟ್ಟಣದ ಜೈಹಿಂದ್ ಹೈಸ್ಕೂಲ್ ಮೈದಾನದಲ್ಲಿ ತಹಶೀಲ್ಧಾರ ಬಿ ಅನಂತ ಶಂಕರ ಅವರು ಕನ್ನಡ ಭುವನೇಶ್ವರಿಗೆ ಪುಷ್ಪಾರ್ಚನೆ ಮಾಡಿ , ದೀಪ ಬೆಳಗಿ ಭವ್ಯ ಮೆರವಣಿಗೆಗೆ ಚಾಲನೆ ನೀಡಿದರು.

ತಾಲೂಕಿನ ವಿವಿಧ ಶಾಲೆಗಳ ಮಕ್ಕಳು ವಾದ್ಯ ಘೋಷಗಳೊಂದಿಗೆ ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಆಕರ್ಷಕ ಮೆರವಣಿಗೆ ನಡೆಸಿದರು.
ಕನ್ನಡ ನಾಡಿನ ಅರಸರು , ರಾಣಿಯರು , ಕವಿಗಳು, ರಾಷ್ಟ್ರ ನಾಯಕರು , ಸಾಹಿತಿಗಳು, ಸೇರಿದಂತೆ ವಿವಿಧ ವೇಷ ಭೂಷಣಗಳೊಂದಿಗೆ ಮೆರವಣಿಗೆಯ ಕಳೆ ಹೆಚ್ಚಿಸಿದರು.

ಸ್ಥಳೀಯ ಹಾಗೂ ನಾಡಿನ ಸಂಸ್ಕೃತಿ ಬಿಂಬಿಸುವ ಯಕ್ಷಗಾನ, ಸುಗ್ಗಿ ಕುಣಿತ, ಕರಡಿ ವೇಷ, ಹುಲಿ ಕುಣಿತ, ನವಿಲು ನೃತ್ಯ, ಬೇಡರ ವೇಷ, ಕಂಸಾಳೆ ಕುಣಿತ, ಜಾಂಜ್ ಮತ್ತಿತರ ವಾದ್ಯಗಳ ಪ್ರದರ್ಶನ ಮೆರವಣಿಗೆಯಲ್ಲಿ ಗಮನ ಸೆಳೆಯಿತು. ಪದ್ಮಶ್ರೀ ಪುರಸ್ಕೃತರಾದ
ಸಾಲು ಮರದ ತಿಮ್ಮಕ್ಕ, ಸುಕ್ರಿ ಗೌಡ, ಸೂಲಗಿತ್ತಿ ನರಸಮ್ಮನವರ ಸ್ತಬ್ಧ ಚಿತ್ರ ಗಮನ ಸೆಳೆಯಾದರೂ ,ತಾಲೂಕಿನವರೇ ಆದ ಪದ್ಮಶ್ರೀ ತುಳಸಿ ಗೌಡ ಅವರ ಚಿತ್ರವನ್ನು ಪ್ರದರ್ಶಿಸದಿರುವುದಕ್ಕೆ ಕೆಲವರು ಬೇಸರ ವ್ಯಕ್ತಪಡಿಸಿದಂತಿತ್ತು. ಐಹೊಳೆಯ ಶಿಲಾ ವೈಭವ, ಬಾದಾಮಿ, ಕಿತ್ತೂರು ಕೋಟೆ, ಶೃಂಗೇರಿ ಶಾರದಾ ಪೀಠ ಮೊದಲಾದ ಸ್ತಬ್ಧ ಚಿತ್ರಗಳು ಕನ್ನಡದ ಕಂಪು ಬೀರಿದವು. ಕೆಲ ಪೌರಾಣಿಕ , ಸಾಮಾಜಿಕ ,ಪರಿಸರ ಪೂರಕ ಮತ್ತಿತರ ರೂಪಕ ಹಾಗು ಸ್ತಬ್ದ ಚಿತ್ರಗಳು ಕಣ್ಮನ ಸೂರೆಗೊಂಡವು.

ತಾ ಪಂ . ಕಾರ್ಯನಿರ್ವಹಣ ಅಧಿಕಾರಿ ಸುನಿಲ್.ಎಂ, ಪುರಸಭೆ ಮುಖ್ಯಾಧಿಕಾರಿ ಎಚ್. ಅಕ್ಷತಾ, ಕ್ಷೇತ್ರ ಶಿಕ್ಷಣಾಧಿಕಾರಿ ಮಂಗಳಲಕ್ಷ್ಮೀ ಪಾಟೀಲ್,ದೈಹಿಕ ಶಿಕ್ಷಣ ಪರಿವೀಕ್ಷಕ ಮಂಜುನಾಥ್ ನಾಯಕ , ಪುರಸಭೆ ಅಧ್ಯಕ್ಷ ಸೂರಜ್ ನಾಯ್ಕ, ಉಪಾಧ್ಯಕ್ಷರು ಸೇರಿದಂತೆ ಕೆಲ ಹಾಲಿ ಸದಸ್ಯರು , ಅಧಿಕಾರಿಗಳು , ಕಸಾಪ ಅಧ್ಯಕ್ಷ ಗೋಪಾಲಕೃಷ್ಣ ನಾಯಕ, ಕಾರ್ಯದರ್ಶಿ ಜಗದೀಶ ನಾಯಕ ಹೊಸ್ಕೇರಿ, ಸ್ಥಳೀಯ ಸಂಸ್ಥೆಗಳ ಕೆಲ ಹಾಲಿ ಹಾಗೂ ಮಾಜಿ ಸದಸ್ಯರು, ಕನ್ನಡಪರ ಸಂಘಟನೆಗಳ ಪ್ರಮುಖರು ,ಸಾಮಾಜಿಕ ಕಾರ್ಯಕರ್ತರು ,ಕನ್ನಡ ಅಭಿಮಾನಿಗಳು ,ವಿವಿಧ ಇಲಾಖೆಗಳ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ,ಸಾರ್ವಜನಿಕರು ಮತ್ತಿತರರು ಉಪಸ್ಥಿತರಿದ್ದರು. ಮೆರವಣಿಗೆಯಲ್ಲಿ ಪಾಲ್ಗೊಂಡ ವಿದ್ಯಾರ್ಥಿಗಳಿಗೆ ಸಿಹಿ ವಿತರಿಸಲಾಯಿತು.

ಪುರಸಭೆ ವತಿಯಿಂದ ಪಟ್ಟಣದ ಪ್ರಮುಖ ರಸ್ತೆಗಳ ಅಂಚಿಗೆ ಕನ್ನಡ ಬಾವುಟ ಹಾಕಿ ಹಾಗೂ ಜೈ ಹಿಂದ್ ಸರ್ಕಲ್ಲಿಗೆ ಬಣ್ಣ ಬಳಿದು ಶೃಂಗಾರ ಮಾಡಿ ,ಸ್ವಚ್ಛತೆ ಮತ್ತಿತರ ಜಾಗೃತಿ ಫಲಕ ಅಳವಡಿಸಿ ಶೃಂಗರಿಸಲಾಗಿತ್ತು.ಪುರಸಭೆಯ ಈ ಕಾರ್ಯಕ್ಕೆ ಪ್ರಮುಖರಾದ ಪ್ರಕಾಶ್ ಕುಂಜಿ , ವಿಜಯಕುಮಾರ್ ನಾಯ್ಕ ,ಮಂಜುನಾಥ್ ವಿ ನಾಯ್ಕ ಮತ್ತಿತರರು ಮೆಚ್ಚುಗೆ ಸೂಚಿಸಿದರು. ಇತ್ತೀಚಿಗೆ ಅಂಕೋಲಾದಲ್ಲಿ ನಡೆದಿದ್ದ ಉತ್ಸವವೊಂದರ ಅಮ್ಯೂಸ್ ಮೆಂಟ್ ಪಾರ್ಕ್ , ಅಂಗಡಿ ಮಳಿಗೆಗಳನ್ನು ತೆರವುಗೊಳಿಸಿಕೊಂಡು ಹೋಗಲು ಅತೀವ ವಿಳಂಬ ಮಾಡಿದ್ದರಿಂದ ,ಮೈದಾನದ ಸ್ವಚ್ಛತೆಗೆ ಪುರಸಭೆಯ ಪೌರಕಾರ್ಮಿಕರು ಮತ್ತು ಸಿಬ್ಬಂದಿಗಳು ತಮ್ಮ ಮನೆಯ ಹಬ್ಬವನ್ನು ಮರೆತು ಹಗಲು ರಾತ್ರಿ ಎನ್ನದೇ ಸ್ವಚ್ಛತೆಗೆ ಶ್ರಮಿಸಿ ಮಾದರಿಯದರು.

ಪಟ್ಟಣದಲ್ಲಿ ದೀಪಾವಳಿಯ ಸಂಭ್ರಮದೊಂದಿಗೆ ರಾಜ್ಯೋತ್ಸವದ ಸಂಭ್ರಮವು ಕಳೆಗಟ್ಟಿತ್ತು.ತಾಲೂಕಿನ ಗ್ರಾಮಾಂತರ ಭಾಗದಲ್ಲಿಯೂ ಕರ್ನಾಟಕ ರಾಜ್ಯೋತ್ಸವವನ್ನು ಅದ್ದೂರಿಯಾಗಿ ಆಚರಿಸಿ ಕನ್ನಡ ನಾಡು ನುಡಿಯ ಮಹತ್ವ ಸಾರಿ ಹೇಳಲಾಯಿತು. ರಥಸಂಚಲನ ಮೆರವಣಿಗೆಯಲ್ಲಿ ಪ್ರಾಥಮಿಕ ಹಾಗೂ ಮಧ್ಯಮಿಕ ವಿಭಾಗದ ತಲಾ 3 ಶಾಲೆಗಳಿಗೆ ಬಹುಮಾನ ವಿತರಿಸಲಾಯಿತು.ಕರ್ನಾಟಕ ಸಂಘದ ವತಿಯಿಂದಲೂ ಸ್ಪರ್ಧೆ ಏರ್ಪಡಿಸಿ ಬಹುಮಾನ ವಿತರಿಸಿ ಪ್ರೋತ್ಸಾಹಿಸಲಾಯಿತು.

ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ

Exit mobile version