ಅಂಕೋಲಾ: ರಾಜ್ಯ ಚುನಾವಣಾ ಆಯೋಗವು ರಾಜ್ಯದ ವಿವಿಧ ಜಿಲ್ಲೆಗಳ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಹಾಗೂ ಕೆಲ ಗ್ರಾ.ಪಂಗಳಲ್ಲಿ ವಿವಿಧ ಕಾರಣಗಳಿಂದ ತೆರವಾಗಿರುವ ಸ್ಥಾನಗಳಿಗೆ ಉಪ ಚುನಾವಣೆ ನಡೆಸುವಂತೆ ಆದೇಶ ಹೊರಡಿಸಿತ್ತು. ಇದೇ ವೇಳೆ ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ಪುರಸಭೆಯ ತೆರವಾಗಿರುವ ಒಂದು ಸ್ಥಾನಕ್ಕೆ ಚುನಾವಣೆ ಪ್ರಕ್ರಿಯೆ ಚುರುಕುಗೊಳಿಸಿದೆ. ಒಟ್ಟೂ 23 ಸದಸ್ಯ ಬಲದ ಅಂಕೋಲಾ ಪುರಸಭೆಯ ವಾರ್ಡ್ ನಂಬರ್ 14 ರ ಸದಸ್ಯರಾಗಿದ್ದ ಜಗದೀಶ ಮಾಸ್ತರ ಎಂದೇ ಗುರುತಿಸಿಕೊಂಡಿದ್ದ ಜಗದೀಶ್ ನಾಯಕ ಅವರು ಅನಾರೋಗ್ಯದ ಕಾರಣ ಕಳೆದ ಫೆಬ್ರುವರಿಯಲ್ಲಿ ಅಕಾಲಿಕ ನಿಧನರಾಗಿದ್ದರು. ಈ ಹಿನ್ನಲೆಯಲ್ಲಿ ತೆರವಾದ ಆ ಸ್ಥಾನಕ್ಕೆ ಉಪ ಚುನಾವಣೆ ನಡೆಯಲಿದೆ.
ತೆರವಾಗಿರುವ ಸ್ಥಾನಕ್ಕೆ ಚುನಾವಣೆ ಸಂಬಂಧಿಸಿದಂತೆ ನವೆಂಬರ್ 4 ರಂದು ಜಿಲ್ಲಾಧಿಕಾರಿಗಳು ಅಧಿಸೂಚನೆ ಹೊರಡಿಸಿದ್ದು ನಾಮಪತ್ರ ಸಲ್ಲಿಸುವ ಪ್ರಕ್ರಿಯೆ ಆರಂಭವಾಗಿತ್ತು. ಈ ವೇಳೆ ಬಿಜೆಪಿಯ ಅಭ್ಯರ್ಥಿಯಾಗಿ ಮಂಗೇಶ ಗೌಡ ,ಕಾಂಗ್ರೆಸ್ ಅಭ್ಯರ್ಥಿಯಾಗಿ ನಾಗಪ್ಪ ಗೌಡ ಮತ್ತು ಪಕ್ಷೇತರರಾಗಿ ನಾಗರಾಜ ಗೌಡ ಸೇರಿ ಒಟ್ಟು ಮೂವರು ಅಭ್ಯರ್ಥಿಗಳು ತಮ್ಮ ಉಮೇದುವಾರಿಕೆಯನ್ನು ಸಲ್ಲಿಸಿದ್ದರಾದರೂ ,ನಾಗರಾಜ ಗೌಡ ಅವರು ತಮ್ಮ ಉಮೇದುವಾರಿಕೆ ಹಿಂಪಡೆದಿದ್ದು ,ಅಂತಿಮವಾಗಿ ಕಾಂಗ್ರೆಸ್ಸಿನ ನಾಗಪ್ಪ ರಾಕು ಗೌಡ ಮತ್ತು ಬಿಜೆಪಿಯಿಂದ ಮಂಗೇಶ ಸೋಮು ಗೌಡ ಅವರು ಅಂತಿಮ ಚುನಾವಣಾ ಕಣದಲ್ಲಿದ್ದು ಇವರಿಬ್ಬರ ನಡುವೆ ನೇರ ಹಣಾಹಣಿ ನಡೆಯಲಿದೆ. ನವೆಂಬರ್ 23 ರಂದು ಬೆಳಿಗ್ಗೆ 7 ರಿಂದ ಸಂಜೆ 5 ಗಂಟೆ ವರೆಗೆ ಹುಲಿ ದೇವರವಾಡದ ಸರಕಾರಿ ಕಿ.ಪ್ರಾ ಶಾಲೆಯಲ್ಲಿ ಮತದಾನ ನಡೆಯಲಿದ್ದು, ನವೆಂಬರ್ 26 ರಂದು ಮತಗಳ ಎಣಿಕೆ ನಡೆಯಲಿದೆ.
ಹಾಲಿ ಚಾಲ್ತಿಯಲ್ಲಿರುವ ವಿಧಾನಸಭಾ ಮತದಾರರ ಪಟ್ಟಿಯನ್ವಯ ಚುನಾವಣೆ ನಡೆಸಲು ಸೂಚಿಸಲಾಗಿದ್ದು ಹುಲಿದೇವರ ವಾಡ ಮತ್ತು ಆನಂದಗಿರಿ ಕ್ಷೇತ್ರ ವ್ಯಾಪ್ತಿಯ 333 ಗಂಡು ಮತ್ತು 355 ಹೆಣ್ಣು ಸೇರಿ ಒಟ್ಟೂ 688 ಮತದಾರರಿದ್ದಾರೆ. ಆಡಳಿತ ರೂಢ ಬಿಜೆಪಿ ಪಕ್ಷ ಮಾಜಿ ಶಾಸಕ ರೂಪಾಲಿ ನಾಯ್ಕ ನೇತೃತ್ವದಲ್ಲಿ ಈಗಿರುವ ತನ್ನ ಸದಸ್ಯತ್ವ ಬಲವನ್ನು ಹೆಚ್ಚಿಸಿಕೊಳ್ಳಲು ಹೆಚ್ಚಿನ ಪ್ರಯತ್ನ ಮುಂದುವರಿಸಿದಂತಿದೆ. ಸ್ಥಳೀಯ ನಾಯಕರು ಕಾರ್ಯಕರ್ತರು ಇದಕ್ಕೆ ಸಾತ್ ನೀಡುತ್ತಿದ್ದಾರೆ.
ಇದೇ ವೇಳೆ ಸ್ಥಳೀಯ ಯುವ ಮುಖಂಡ ನಾಗಪ್ಪ ಗೌಡ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಿ ಎದುರಾಳಿಗೆ ತೀವ್ರ ಪೈಪೋಟಿ ನೀಡುತ್ತಿದ್ದು ಗೆಲುವಿಗಾಗಿ ಎರಡು ಪಕ್ಷಗಳ ಅಭ್ಯರ್ಥಿಗಳು ಅಂತಿಮ ಹಂತದ ಕಸರತ್ತು ಮುಂದುವರಿಸಿದ್ದಾರೆ.ಕೃಷಿ ಇಲಾಖೆಯ ಹಿರಿಯ ಅಧಿಕಾರಿ ಶ್ರೀಧರ ನಾಯ್ಕ ಚುನಾವಣಾ ಅಧಿಕಾರಿಯಾಗಿ ಮತ್ತು ಕಿರಿಯ ಅಧಿಕಾರಿ ಆರ್ ವಿ ನಾಯಕ ಉಪಚುನಾವಣಾ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದು ಕಂದಾಯ ಮತ್ತಿತರ ಇಲಾಖೆಗಳ ಅಧಿಕಾರಿ ಹಾಗೂ ಸಿಬ್ಬಂದಿಗಳು ಸುಸೂತ್ರ ಚುನಾವಣೆಗೆ ಸಿದ್ಧತೆ ಮುಂದುವರಿಸಿದ್ದಾರೆ.ಗುಟ್ಟು ಬಿಡದ ಮತದಾರರಿಂದಾಗಿ ವಾರ್ಡ್ ನಂಬರ್ 14ರಲ್ಲಿ ಈಗಿರುವ ಕಡಿಮೆ ಅವಧಿಗೆ ಪಾರುಪತ್ಯ ಯಾರು ಸ್ಥಾಪಿಸುತ್ತಾರೆ ಎಂದು ಕಾದು ನೋಡಬೇಕಿದೆ .
ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ