ಯಲ್ಲಾಪುರ : ರಾ. ಹೆ 63 ರ ಹುಬ್ಬಳ್ಳಿ ಅಂಕೋಲಾ ಮಾರ್ಗ ಮಧ್ಯೆ ಯಲ್ಲಾಪುರ ಪೊಲೀಸ್ ಠಾಣಾ ವ್ಯಾಪ್ತಿಯ ಅರೇಬೈಲ್ ಘಾಟ್ ಬಳಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ , ಪ್ರಪಾತಕ್ಕೆ ಬಿದ್ದ ಲಾರಿಯಲ್ಲಿದ್ದ ಸುಮಾರು 9 ಜನರು ಸ್ಥಳದಲ್ಲಿ ಮೃತಪಟ್ಟರೆ , 14 ಕ್ಕೂ ಹೆಚ್ಚು ಜನರು ಗಾಯ ನೋವು ಕೊಂಡಿದ್ದಾರೆ ಎನ್ನಲಾಗಿದ್ದು ,ಈ ಕುರಿತು ನಿಖರ ಮಾಹಿತಿ ತಿಳಿದು ಬರಬೇಕಿದೆ.
ಹಾವೇರಿ ಜಿಲ್ಲೆಯ ಶಿಗ್ಗಾಂವ – ಸವಣೂರು ಕಡೆಯಿಂದ ಉತ್ತರ ಕನ್ನಡದ ಕುಮಟಾ ಸಂತೆ ವ್ಯಾಪಾರಕ್ಕಾಗಿ , ಹಣ್ಣು -ತರಕಾರಿ ಮಾರಾಟಗಾರರು ಮಾಲು ಸಮೇತ ಒಂದೇ ಲಾರಿಯಲ್ಲಿ ಬರುತ್ತಿದ್ದಾಗ ದಾರಿ ಮಧ್ಯೆ ಈ ದುರಂತ ಸಂಭವಿಸಿದೆ.
ಬೇರೊಂದು ವಾಹನ ಡಿಕ್ಕಿಪಡಿಸಿ ಇಲ್ಲವೇ ಅದಾವುದೋ ಕಾರಣದಿಂದ ಚಾಲಕ ವಾಹನದ ಮೇಲಿನ ತನ್ನ ನಿಯಂತ್ರಣ ಕಳೆದುಕೊಂಡು ,ಅರೇಬೈಲ್ ಘಾಟ್ ಬಳಿ ಲಾರಿಯು ಹೆದ್ದಾರಿ ಅಂಚಿನ, ಇಳಿಜಾರಿನಲ್ಲಿ ಪಲ್ಟಿಯಾಗುತ್ತ ಬಹುದೂರ ಸಾಗಿ ನುಜ್ಜು ಗುಜ್ಜಾಗಿದ್ದು ,ಲಾರಿಯಲ್ಲಿದ್ದವರು ಕೆಲವರು ಸಿಡಿದು ಬಿದ್ದರೆ , ಹಣ್ಣು ತರಕಾರಿ ಬಾಕ್ಸ್ ಗಳು ಚೆಲ್ಲಾಪಿಲ್ಲಿಯಾಗಿ ಬಿದ್ದವು ಎನ್ನಲಾಗಿದೆ.
ಈ ಭೀಕರ ದುರಂತದಲ್ಲಿ 9 ಜನರು ಸ್ಥಳದಲ್ಲಿಯೇ ಮೃತಪಟ್ಟಿದ್ದು , 14ಕ್ಕೂ ಹೆಚ್ಚು ಗಾಯಾಳುಗಳನ್ನು ಚಿಕಿತ್ಸೆಗಾಗಿ ಯಲ್ಲಾಪುರ ತಾಲೂಕ ಆಸ್ಪತ್ರೆಗೆ ದಾಖಲಿಸಲಾಗಿದೆ ಏನ್ನಲಾಗಿದೆ. ಈ ಲಾರಿಯಲ್ಲಿ ಸುಮಾರು 28 ರಿಂದ 30 ಜನರು ಇದ್ದರು ಎನ್ನಲಾಗಿದ್ದು ಸಾವು ನೋವಿನ ಸಂಖ್ಯೆ ಮತ್ತಷ್ಟು ಹೆಚ್ಚುವ ಸಾಧ್ಯತೆ ಕೇಳಿ ಬಂದಿದೆ.ಯಲ್ಲಾಪುರ ಪೊಲೀಸರು ಸ್ಥಳ ಪರಿಶೀಲಿಸಿ ಕಾನೂನು ಕ್ರಮ ಮುಂದುವರೆಸಿದ್ದಾರೆ.
ಅಪಘಾತದ ಘಟನೆ ಹಾಗೂ ಸಾವು -ನೋವಿನ ಕುರಿತು ಪೊಲೀಸರಿಂದ ಹೆಚ್ಚಿನ ಮತ್ತು ಅಧಿಕೃತ ಮಾಹಿತಿ ತಿಳಿದು ಬರಬೇಕಿದೆ. ಲಾರಿ ಹಾಗೂ ಇತರೆ ಸರಕು ಸಾಗಾಟ ವಾಹನಗಳಲ್ಲಿ ಮಿತಿಮೀರಿದ ಸರಕು ಸಾಮಾನು ಹಾಗೂ ಜನರ ಸಾಗಾಟವೇ ಇಂತಹ ದುರಂತಕ್ಕೆ ಕಾರಣವಾಗುತ್ತಿದೆ ಎನ್ನಲಾಗಿದ್ದು ,ಇನ್ನು ಮುಂದಾದರೂ ಸಂಬಂಧಿತ ಇಲಾಖೆಗಳು ಸಂಚಾರಿ ನಿಯಮ ಪಾಲನೆ ಹಾಗೂ ಜನರ ಪ್ರಾಣ ಸುರಕ್ಷತೆ ದೃಷ್ಟಿಯಿಂದ ನಿಯಮ ಉಲ್ಲಂಘಿಸುವವರ ವಿರುದ್ಧ, ಕೆಲ ಕಟ್ಟು ನಿಟ್ಟಿನ ಕ್ರಮಗಳನ್ನು ಕೈಗೊಳ್ಳಬೇಕೆಂಬ ಮಾತು ಪ್ರಜ್ಞಾವಂತ ವಲಯದಿಂದ ಕೇಳಿಬಂದಿದೆ.
ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ