Important
Trending

ಕಳ್ಳಾಟದಲ್ಲೇ ಸಂತೋಷವಾಗಿರುವ ಪೊಲೀಸ್ ? ಅಕ್ರಮ ಗೋವಾ ಸರಾಯಿ ಸಾಗಾಟ ಪ್ರಕರಣ: ಕಾರು ಸಮೇತ ಆರೋಪಿಗಳು ವಶಕ್ಕೆ

ಅಂಕೋಲಾ: ಕಾರಿನಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ ಸುಮಾರು 81ಸಾವಿರ ಮೌಲ್ಯದ ಗೋವಾ ರಾಜ್ಯದಲ್ಲಿ ತಯಾರಾದ ವಿವಿಧ ಬ್ರಾಂಡುಗಳ ಸರಾಯಿ ಬಾಟಲಿಗಳನ್ನು ಅಂಕೋಲಾ ಪೊಲೀಸರು (ಕೆ.ಎ 42 ಎಂ 2190 ನೋಂದಣಿ ಸಂಖ್ಯೆಯ ಸ್ವಿಪ್ಟ್ ಕಾರಿನೊಂದಿಗೆ ) ವಶಪಡಿಸಿಕೊಂಡಿದ್ದು , ಪ್ರಕರಣ ದಾಖಲಿಸಿ ಕಾನೂನು ಕ್ರಮ ಮುಂದುವರೆಸಿದ್ದಾರೆ.

ಮಂಡ್ಯ ಜಿಲ್ಲೆಯ ಪಾಂಡವಪುರ ನಿವಾಸಿಗಳಾದ ದಿವಾಕರ್. ಇ ಆರ್ ಕೃಷ್ಣಯ್ಯ (33) ಮತ್ತು ಮಾದೇವ ಕೃಷ್ಣಪ್ಪ(40) ಎಂಬ ಆರೋಪಿತರಿಂದ 31080 ರೂಪಾಯಿ ಮೌಲ್ಯದ 750 ಎಂ.ಎಲ್ ನ ರಾಯಲ್ ಸ್ಟಾಗ್ ವಿಸ್ಕಿಯ 30 ಬಾಟಲುಗಳು, 28380 ರೂಪಾಯಿ ಮೌಲ್ಯದ ಮೆನ್ಶನ್ ಹೌಸ್ ಪ್ರೆಂಚ್ ಬ್ರಾಂದಿಯ 84 ಬಾಟಲ್ ಗಳು, 10200 ರೂಪಾಯಿ ಮೌಲ್ಯದ 750 ಎಂ.ಎಲ್ ಇಂಪೀರಿಯಲ್ ಬ್ಲೂ ವಿಸ್ಕಿಯ 30 ಬಾಟಲ್ ಗಳು, 3740 ರೂಪಾಯಿ ಮೌಲ್ಯದ 750 ಎಂ.ಎಲ್ ನ ಮೆಕ್ ಡವಲ್ ನಂ 1 ವಿಸ್ಕಿಯ 11 ಬಾಟಲ್ ಗಳು, 5760 ರೂಪಾಯಿ ಮೌಲ್ಯದ 180 ಎಂ.ಎಲ್ ಮೆನ್ಶನ್ ಹೌಸ್ ಬ್ರಾಂದಿಯ 72 ಬಾಟಲ್ ಗಳು, 920 ರೂಪಾಯಿ ಮೌಲ್ಯದ 2 ಲೀಟರ್ ನ ರಾಯಲ್ ಸ್ಟಾಗ್ 1 ಬಾಟಲ್, 825 ರೂಪಾಯಿ ಮೌಲ್ಯದ ಮೆನ್ಶನ್ ಹೌಸ್ 1 ಲೀಟರ್ ಹೀಗೆ ಒಟ್ಟು 80905 ರೂಪಾಯಿ ಮೌಲ್ಯದ ಗೋವಾ ಸರಾಯಿ ವಶಪಡಿಸಿಕೊಳ್ಳಲಾಗಿದೆ.

ಆರೋಪಿತರು ಕೆ.ಎ 42 ಎಂ 2190 ನೋಂದಣಿ ಸಂಖ್ಯೆಯ ಸ್ವಿಪ್ಟ್ ಕಾರಿನಲ್ಲಿ ಗೋವಾ ಸರಾಯಿ ಸಾಗಿಸುತ್ತಿದ್ದ ಸಂದರ್ಭದಲ್ಲಿ ಬೆಲೇಕೇರಿ ಕ್ರಾಸ್ ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನಗಳ ತಪಾಸಣೆ ನಡೆಸುತ್ತಿದ್ದ ಅಂಕೋಲಾ ಪೊಲೀಸರು ,ಹಿರಿಯ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಸರಾಯಿ ಸಾಗಾಟ ಪತ್ತೆ ಹಚ್ಚಿದ್ದು ಆರೋಪಿತರ ಮೇಲೆ ಕರ್ನಾಟಕ ಅಬಕಾರಿ ಕಾಯಿದೆ ಅಡಿಯಲ್ಲಿ ಪ್ರಕರಣ ದಾಖಲಿಸಲು ಕ್ರಮಗಳನ್ನು ಕೈಗೊಂಡಿದ್ದಾರೆ. ಗೋವಾ ಸರಾಯಿ ಅಕ್ರಮ ಸಾಗಾಟ ಹಾಗೂ ಮಾರಾಟದ ಹಿಂದೆ ಆಕಾಶ್ ಎನ್ನುವ ಇನ್ನೋರ್ವ ವ್ಯಕ್ತಿಯ ಹೆಸರೂ ಕೇಳಿಬಂದಿದ್ದು ಆತನ ಪತ್ತೆ ಕಾರ್ಯವೂ ನಡೆಯ ಬೇಕಿದೆ.

ಒಟ್ಟಾರೆಯಾಗಿ ಅಕ್ರಮ ಗೋವಾ ಸರಾಯಿ ಸಾಗಾಟ ಜಾಲದಲ್ಲಿ ಸಂತೋಷ ಲಮಾಣಿ ಎನ್ನುವ ಪೊಲೀಸ್ ಪೇದೆಯ ಶಾಮೀಲಾತಿ ಹೆಚ್ಚಾಗಿ ಕಂಡು ಬರುತ್ತಿದ್ದು ,ಈ ಹಿಂದೆಯೂ ಗೋಕರ್ಣದಲ್ಲಿ ಇಂಥಹುದೇ ಅಕ್ರಮ ದಂಧೆಯಲ್ಲಿ ತೊಡಗಿಕೊಂಡು ಸಿಕ್ಕಿಬಿದ್ದು ಅಮಾನತ್ ಆಗಿದ್ದ. ತದ ನಂತರವೂ ತನ್ನ ಅಡ್ನಾಡಿ ದಂಧೆ ಬಿಡದೇ , ಕಳ್ಳಾಟ ಆಡಲು ಹೋಗಿ ಮತ್ತೆ ತಮ್ಮದೇ ಇಲಾಖೆಯವರ ಕೈಗೆ ಸಿಕ್ಕಿ ಬಿದ್ದಿದ್ದಾನೆ.

ಪೊಲೀಸ್ ಕಾನ್ಸಟೇಬಲ್ ಸಂತೋಷ ಲಮಾಣಿ ,ಕಾರಿನಲ್ಲಿಯೇ ಅಕ್ರಮವಾಗಿ ಗೋವಾ ಸರಾಯಿ ಸಾಗಾಟ ನಡೆದಿತ್ತು ಎನ್ನಲಾಗಿದ್ದು ಇವರು ಜಿಲ್ಲೆ ಹಾಗೂ ಅಕಪಕ್ಕದ ಇತರೆ ಜಿಲ್ಲೆಯಲ್ಲೂ ಕಳ್ಳ ದಂಧೆ ನಡೆಸುತ್ತಿದ್ದರೇ ? ಬಿಗುಗೊಂಡ ಚೆಕ್ ಪೋಸ್ಟ್ ನಲ್ಲಿ ಇವರ ವಾಹನ ಸರಾಯಿ ತುಂಬಿ ಬರುವುದು ಹೇಗೆ ? ಅಥವಾ ಸರಾಯಿ ಸಾಗಾಟಕ್ಕೆ ಬದಲಿ ಮಾರ್ಗ ಅನುಸರಿಸುತ್ತಿದ್ದರೇ ? ಎಂಬಿತ್ಯಾದಿ ವಿಷಯಗಳ ಕುರಿತು ಪೊಲೀಸ್ ತನಿಖೆಯಿಂದ ಹೆಚ್ಚಿನ ಮಾಹಿತಿ ತಿಳಿದು ಬರಬೇಕಿದೆ.

ಇಲಾಖೆಗೆ ಕೆಟ್ಟ ಹೆಸರು ತರುವ ಇಂತಹ ನಡವಳಿಕೆಗೆ ಅವಕಾಶ ಇಲ್ಲ ಎಂಬಂತೆ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಸಹ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದಂತಿದ್ದು , ಸಿಬ್ಬಂದಿಯ ಮೇಲೆ ಕಠಿಣ ಶಿಸ್ತಿನ ಕ್ರಮ ಜರುಗಿಸುವ ಸಾಧ್ಯತೆ ಇದೆ ಎನ್ನಲಾಗಿದೆ. ಕಳೆದ ಕೆಲ ವರ್ಷಗಳ ಹಿಂದೆಯೂ ರಾಷ್ಟ್ರೀಯ ಹೆದ್ದಾರಿ ಕಾರವಾರ – ಅಂಕೋಲಾ ಮಾರ್ಗ ಮಧ್ಯೆ ಇದೇ ರೀತಿ ಅಕ್ರಮ ಗೋವಾ ಸರಾಯಿ ಸಾಗಾಟದಲ್ಲಿ ತೊಡಗಿದ್ದ ಖಾಕಿ ಪಡೆಯವರನ್ನು – ಖಾಕಿ ಪಡೆಯವರೇ ವಶಕ್ಕೆ ಪಡೆದಿದ್ದನ್ನು ಸ್ಮರಿಸಿರುವ ಕೆಲವರು,ಕರ್ನಾಟಕ ಪೊಲೀಸ್ ಎಂದರೆ ಅದೊಂದು ಹೆಮ್ಮೆ ಮತ್ತು ಕಾನೂನು ರಕ್ಷಣೆಯ ಸಾಮರ್ಥ್ಯದ ಸಂಕೇತ ಎನ್ನುವ ಭಾವನೆ ಹಲವರಲ್ಲಿದೆ.

ಆದರೆ ಕಳ್ಳಾಟದಲ್ಲೇ ಸಂತೋಷ ಪಡುವ ಈ ಪೊಲೀಸ ಪೇದೆ , ತಾನು ಧರಿಸುವ ಖಾಕಿ ಸಮವಸ್ತ್ರದ ಗೌರವ ಎತ್ತಿ ಹಿಡಿಯುವ ಬದಲು, ಅಡ್ನಾಡಿ ದಂಧೆ ಮಾಡಲು ಹೋಗಿ ಇಲಾಖೆಯ ಗೌರವಕ್ಕೂ ಕುಂದು ತಂದಂತಿದೆ. ಈಗಲಾದರೂ ಇಲಾಖೆಯ ಹಿರಿಯ ಅಧಿಕಾರಿಗಳು ಎಚ್ಚೆತ್ತು,ಮುಂದೆ ಮತ್ತೆ ಇಂತಹ ಘಟನೆಗಳಿಗೆ ಅವಕಾಶ ಇಲ್ಲದಂತೆ ಸೇವೆಯಿಂದ ವಜಾಗೊಳಿಸುವ ಇಲ್ಲವೇ ಇತರೆ ಕಟ್ಟುನಿಟ್ಟಿನ ಕ್ರಮ ಜರುಗಿಸಿ ತನ್ನ ಘನತೆ ಕಾಯ್ದುಕೊಳ್ಳುವ ಜೊತೆ, ಕಳ್ಳ ದಂಧೆ ಕೋರರಿಗೆ ಎಚ್ಚರಿಕೆ ಸಂದೇಶ ನೀಡಬೇಕೆಂಬ ಮಾತು ಪ್ರಜ್ಞಾವಂತ ವಲಯದಿಂದ ಕೇಳಿ ಬಂದಿದೆ. ಆದರೆ ಇಂತಹ ಅಕ್ರಮ ಪ್ರಕರಣಗಳಲ್ಲಿ ಜಾಮೀನು ಸಿಗುವ ಸಾಧ್ಯತೆ ಹೆಚ್ಚಿರುವುದರಿಂದ ಕಳ್ಳ ದಂಧೆಕೋರರು ಹೊರ ಬಂದು ಮತ್ತೆ ತಮ್ಮ ಪೌರುಷ ತೋರುತ್ತಾರೆ ಎನ್ನಲಾಗಿದೆ.

ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ

Back to top button