Focus News
Trending

ಎಲ್.ಐ.ಸಿ ಅಧಿಕಾರಿ ಮನೆಗೆ ಕನ್ನಹಾಕಿದ ಖದೀಮರು

  • ಒಟ್ಟೂ 8.40 ಲಕ್ಷ ಮೌಲ್ಯದ ಸ್ವತ್ತು ಕಳ್ಳತನ
  • ಅಂಕೋಲಾದಲ್ಲಿ ಹೆಚ್ಚುತ್ತಿರುವ ಕಳ್ಳತನ : ಬೆಳಸೆ, ಹುಲಿದೇವರವಾಡದಲ್ಲಿಯೂ ಪ್ರಕರಣ
  • ಪೊಲೀಸರಿಗೆ ಸವಾಲಾದ ಪತ್ತೆ ಕಾರ್ಯ : ಸ್ಥಳ ಪರಿಶೀಲಿಸಿದ ಎಡಿಶನಲ್ ಎಸ್.ಪಿ, ಡಿವೈಎಸ್‍ಪಿ

ಅಂಕೋಲಾ : ತಾಲೂಕಿನಲ್ಲಿ ಕಳ್ಳತನದ ಪ್ರಕರಣಗಳು ಹೆಚ್ಚುತ್ತಿದ್ದು, ಪೊಲೀಸ್‍ರಿಗೆ ಕಳ್ಳರನ್ನು ಪತ್ತೆಹಚ್ಚುವ ಕಾರ್ಯ ಸವಾಲಾಗಿದೆ. ಆಗಾಗ ಕೆಲ ದೇವಸ್ಥಾನಗಳ ಹುಂಡಿ ಕಳವು ಮತ್ತಿತರ ಚಿಕ್ಕಪುಟ್ಟ ಕಳ್ಳತನದ ಪ್ರಕರಣಗಳು ಕೇಳಿ ಬಂದಿದ್ದವು. ಕಳೆದ 4-5 ದಿನಗಳಲ್ಲಿ ಶೇಟಗೇರಿ, ಬೆಳೆಸೆ, ಹುಲಿದೇವರವಾಡಗಳಲ್ಲಿ ಕಳ್ಳತನದ ಪ್ರಕರಣಗಳು ದಾಖಲಾಗಿವೆ. ಈಗಲಾದರೂ ಇಲಾಖೆಯವರು ಎಚ್ಚೆತ್ತು ಕಳ್ಳರ ಜಾಡು ಬೇಧಿಸಿಯಾರೇ ಎನ್ನುವುದಕ್ಕೆ ಮುಂದಿನ ದಿನಗಳಲ್ಲಿ ಉತ್ತರ ದೊರೆಯಬೇಕಿದೆ.

ಎಲ್.ಐ.ಸಿ ಅಧಿಕಾರಿ ಮನೆಗೆ ಕನ್ನವಿಕ್ಕಿದ ಖದೀಮರು :

ಶೇಟಗೇರಿಯ ಗ್ರಾಪಂ ಬಳಿ ನಡೆದ ಮನೆಗಳ್ಳತನ ಪ್ರಕರಣದಲ್ಲಿ ನಗದು, ಬಂಗಾರದ ಆಭರಣಗಳು, ವಿದೇಶಿ ಟಾರ್ಚ ಸೇರಿದಂತೆ ಇತರೇ ಬೆಲೆಬಾಳುವ ವಸ್ತುಗಳು ಕಳ್ಳರ ಪಾಲಾಗಿದ್ದು, ಒಟ್ಟು ಕಳ್ಳತನವಾದ ಸ್ವತ್ತಿನ ಮೌಲ್ಯ 8.40 ಲಕ್ಷ ಎಂದು ಅಂದಾಜಿಸಲಾಗಿದೆ.

ಕಳ್ಳತನದ ವೇಳೆ ತಮ್ಮ ಅಪರಾಧದ ಕುರುಹು ಪತ್ತೆಯಾಗಬಹುದೆಂಬ ದೃಷ್ಠಿಯಿಂದಲೋ ಎಂಬಂತೆ ಮನೆಗೆ ಅಳವಡಿಸಿದ ಸಿ.ಸಿ ಕ್ಯಾಮರಾಕ್ಕೆ ಸಂಬಂಧಿಸಿದ ಡಿವಿಆರ್ ಸೆಟ್ ಹಾರ್ಡ್ ಡಿಸ್ಕ ಮತ್ತಿತರ ಸಾಮಗ್ರಿಗಳನ್ನು ಕದ್ದೊಯ್ದು ಚಾಲಾಕಿತನ ಪ್ರದರ್ಶಿಸಿದ್ದಾರೆ.

ಕಳ್ಳತನವಾಗಿರುವ ವೇಳೆ ಮನೆಯ ಮಾಲೀಕ ಅಂಕೋಲಾದಲ್ಲಿ ನೆಲೆಸಿರದೇ ಕಾರವಾರದ ಭಾಗ್ಯೋದಯ ಅಪಾರ್ಟಮೆಂಟನಲ್ಲಿ ವಾಸವಾಗಿದ್ದ ಎನ್ನಲಾಗಿದೆ. ಆತನ ದೌರ್ಭಾಗ್ಯವೋ ಎನ್ನುವಂತೆ ಆತ ಅಂಕೋಲಾದ ತನ್ನ ಮನೆಗೆ ಬಂದ ವೇಳೆ ಈ ಘಟನೆ ಅರಿವಿಗೆ ಬಂದಿದ್ದು, ಮನೆ ಕಳ್ಳತನವಾದ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದಾರೆ.

ಬೆಳೆಸೆಯಲ್ಲಿಯೂ ಕಳ್ಳತನ

ಬೆಳೆಸೆಯ ಆಗೇರ ಕಾಲೋನಿಯ ಮನೆಯೊಂದರಲ್ಲಿಯೂ ಕಳ್ಳತನದ ಪ್ರಕರಣ ದಾಖಲಾಗಿದ್ದು, ಬೆಳ್ಳಿಯ ಆಭರಣ ಸೇರಿದಂತೆ ಬೆಲೆಬಾಳುವ ವಸ್ತುಗಳು ಕಳ್ಳತನವಾಗಿದೆ.

ಹುಲಿದೇವರವಾಡ : ಪೆಟ್ರೋಲ್ ಪಂಪ ಎದುರಿನ ಕೇಬಲ್ ನೆಟ್‍ವರ್ಕ್ ಆಫೀಸ ಮತ್ತು ಮನೆಯಿಂದ ನಗದು ಸೇರಿದಂತೆ ಲಕ್ಷಾಂತರ ರೂಪಾಯಿ ಮೌಲ್ಯದ ಸ್ವತ್ತು ಕಳ್ಳತನವಾದ ಕುರಿತು ಪ್ರಕರಣ ದಾಖಲಾಗಿದ್ದು, ಕಳ್ಳರು ಇಲ್ಲಿಯೂ ಸಿ.ಸಿ ಕ್ಯಾಮರಾಕ್ಕೆ ಸಂಬಂಧಿಸಿದ ಡಿವಿಆರ್ ಸೆಟ್ ಹಾರ್ಡ ಡಿಸ್ಕ ಮತ್ತಿತರ ಸಾಮಗ್ರಿಗಳನ್ನು ನಾಪತ್ತೆ ಮಾಡಿದ್ದಾರೆ ಎನ್ನಲಾಗಿದೆ.
ಪಿಎಸ್‍ಐ ಈ.ಸಿ.ಸಂಪತ್ ಈ ಎಲ್ಲಾ ಕಳ್ಳತನದ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.

ಮುಂಜಾಗ್ರತೆಯೂ ಅವಶ್ಯ :

ಒಟ್ಟಿನಲ್ಲಿ ತಾಲೂಕಿನಾದ್ಯಂತ ಅಲ್ಲಲ್ಲಿ ಕೆಲ ಕಳ್ಳತನದ ಪ್ರಕರಣಗಳು ಕೇಳಿಬಂದಿದ್ದು, ಪೋಲಿಸ್ ಇಲಾಖೆ ಚುರುಕಿನ ಕಾರ್ಯಚರಣೆ ನಡೆಸಿ, ನಾಗರಿಕರ ನೆಮ್ಮದಿಗೆ ಕರ್ತವ್ಯ ನಿರ್ವಹಿಸಬೇಕಿದೆ. ಇದೇ ವೇಳೆ ಸಾರ್ವಜನಿಕರು ತಾವು ಮನೆಬಿಟ್ಟು ಹೊರಗಡೆ ಹೋಗಬೇಕಾದ ವೇಳೆಯಲ್ಲಿ ನಗದು ಮತ್ತು ಬೆಲೆಬಾಳುವ ವಸ್ತುಗಳನ್ನು ಮನೆಯಲ್ಲಿಯೇ ಇಡದೇ ಇತರೆಡೆ ಸುರಕ್ಷಿತವಾಗಿಡುವುದು, ತಾವು ಮನೆಬಿಟ್ಟು ತೆರಳುತ್ತಿರುವ ವಿಚಾರವನ್ನು ತಮ್ಮ ಅಕ್ಕ-ಪಕ್ಕದ ಮನೆಯವರಿಗೆ, ಆಪ್ತರಿಗೆ, ಮತ್ತು ಸಂಬಂಧಿಸಿದ ಹತ್ತಿರದ ಪೊಲೀಸ್ ಠಾಣೆಯ ಗಮನಕ್ಕೆ ತಂದು ಮುಂಜಾಗ್ರತೆ ವಹಿಸಬೇಕಿದೆ.

ಅಧಿಕಾರಿಗಳಿಂದ ಸ್ಥಳ ಪರಿಶೀಲನೆ

ಎಡಿಶನಲ್ ಎಸ್.ಪಿ ಬಧರೀನಾಥ, ಡಿವೈಎಸ್‍ಪಿ ಅರವಿಂದ ಕಲ್‍ಗುಜ್ಜಿ, ಪಿ.ಎಸ್.ಐ ಈ.ಸಿ.ಸಂಪತ್, ಮತ್ತಿತರ ಅಧಿಕಾರಿಗಳ ತಂಡ ಸ್ಥಳ ಪರಿಶೀಲನೆ ನಡೆಸಿ, ಕಳ್ಳರ ಪತ್ತೆಗೆ ಬಲೆಬೀಸಿದ್ದಾರೆ. ಶ್ವಾನದಳ ಮತ್ತು ಬೆರಳಚ್ಚು ತಜ್ಞರ ತಂಡದಿಂದ ಕಳ್ಳತನದ ಕೆಲವು ಕುರುಹು ದೊರೆತಿರುವ ಸಾಧ್ಯತೆ ಇದ್ದು, ಇಲಾಖೆ ಅಪರಾಧಿಗಳನ್ನು ಬಂಧಿಸುವ ವಿಶ್ವಾಸ ವ್ಯಕ್ತಪಡಿಸಿದೆ.

ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ

Back to top button