
ಅಂಕೋಲಾ: ಹೆದ್ದಾರಿ ಅಂಚಿಗೆ ನಿಂತಿದ್ದ ಲಾರಿಯೊಂದರ ಕ್ಯಾಬಿನ್ ನಲ್ಲಿ ವ್ಯಕ್ತಿಯೋರ್ವ ಮೃತದೇಹವಾಗಿ ಪತ್ತೆಯಾದ ಘಟನೆ ರಾ ಹೆ 66 ರ ಹುಲಿದೇವರ ವಾಡ ವ್ಯಾಪ್ತಿಯ ಪೆಟ್ರೋಲ್ ಪಂಪ್ ಹತ್ತಿರ ತಡವಾಗಿ ಬೆಳಕಿಗೆ ಬಂದಿದೆ. ಅಂಬಾರಕೊಡ್ಲದ ರಮೇಶ ಕುಸ್ಲು ಗೌಡ (55) , ಮೃತ ದುರ್ದೈವಿ. ಅವಿವಾಹಿತನಾಗಿದ್ದ ಈತ ಕೂಲಿ- ನಾಲಿ ಮಾಡಿ ಇಲ್ಲವೇ ಲಾರಿ ಕ್ಲೀನರ್ ವೃತ್ತಿಯ ಮೂಲಕ ದುಡಿದು , ಜೀವನ ಸಾಗಿಸುತ್ತಿದ್ದ ಎನ್ನಲಾಗಿದೆ. ಈತನು ಇತ್ತೀಚೆಗೆ ಹುಲಿದೇವರವಾಡಾದ ಜಾವೇದ ಎಂಬ ಸ್ಥಳೀಯರೊಬ್ಬರಿಗೆ ಸೇರಿದ ನೊಂದಣಿ ಸಂಖ್ಯೆಯ ಲಾರಿಯಲ್ಲಿ ಸಹಾಯಕನಾಗಿ ಕೆಲಸಕ್ಕಿದ್ದವ , ಅದೇ ಲಾರಿಯಲ್ಲಿ ಅದೇಗೋ ಮೃತ ದೇಹವಾಗಿ ಪತ್ತೆಯಾಗಿದ್ದಾನೆ.
ಈ ಲಾರಿ ಕಳೆದ 3-4 ದಿನಗಳಿಂದ ಕೆಟ್ಟು ನಿಂತಿತ್ತು ಎನ್ನಲಾಗಿದ್ದು , ವಾಹನ ರಿಪೇರಿ ಉದ್ದೇಶದಿಂದ ಬ್ಯಾಟರಿ ಬದಲಿಸಲು ಬಂದವರು ಫೆ 15 ರ ಶನಿವಾರ ವಾಹನದ ಒಳ ಭಾಗದಿಂದ ವಾಸನೆ ಬರುತ್ತಿರುವುದನ್ನು ಕಂಡು ಇಣುಕಿ ನೋಡಿದಾಗ , ಲಾರಿಯ ಡ್ರೈವರ್ ಕ್ಯಾಬಿನ್ ಪಕ್ಕದ ಸೀಟಿನಲ್ಲಿ ಮೃತ ದೇಹ ಕಂಡು ಕ್ಷಣಕಾಲ ಅವಕ್ಕಾಗಿದ್ದಾರೆ. ಸುದ್ದಿ ತಿಳಿದ ಪೊಲೀಸರು ಸ್ಥಳ ಮಹಜರು ನಡೆಸಿ ಕಾನೂನು ಕ್ರಮ ಮುಂದುವರಿಸಿದ್ದಾರೆ.
ವಿಪರೀತ ಸರಾಯಿ ಕುಡಿತದ ಚಟ ಇಲ್ಲವೇ ಬೇರೆ ಯಾವುದೋ ಕಾರಣದಿಂದ ರಮೇಶ ಗೌಡ ಮೃತ ಸ್ಥಿತಿಯಲ್ಲಿ ಪತ್ತೆಯಾಗಿರಬಹುದಾದರೂ, ಈ ಘಟನೆ ತಡವಾಗಿ ಬೆಳಕಿಗೆ ಬಂದಿದ್ದು ಅಷ್ಟರಲ್ಲಾಗಲೇ ದೇಹದ ಅಂಗಾಗಗಳು ಊದಿಕೊಂಡು , ಕೊಳೆತು ದುರ್ನಾಥ ಬೀರುತ್ತಿರುವ ದು ಮತ್ತು ನೊಣಗಳು ಮುತ್ತಿಕೊಂಡಿದ್ದರಿಂದ , ಲಾರಿಯಿಂದ ಮೃತದೇಹ ಕೆಳಗಿಳಿಸಿ , ಬಳಿಕ ಮರಣೋತ್ತರ ಪರೀಕ್ಷೆಗಾಗಿ ತಾಲೂಕಾ ಆಸ್ಪತ್ರೆ ಶವಾಗಾರಕ್ಕೆ ಸಾಗಿಸಲು ಅತೀವ ಪ್ರಯಾಸ ಪಡುವಂತಾಯಿತು.
ಸಾಮಾಜಿಕ ಕಾರ್ಯಕರ್ತ ವಿಜಯಕುಮಾರ ನಾಯ್ಕ , ಆರೋಗ್ಯ ಇಲಾಖೆ ಸಿಬ್ಬಂದಿ ಶಂಕರ , ಪ್ರಕಾಶ ಗೌಡ ಮತ್ತಿತರರ ಮಾರ್ಗದರ್ಶನದಲ್ಲಿ ಅಂಬಾರಕೊಡ್ಲದ ಹಾಲಕ್ಕಿ ಸಮಾಜದ ಕೆಲವರು ಹಾಗೂ ಸ್ಥಳೀಯರು ಪೊಲೀಸರಿಗೆ ಸಹಕರಿಸಿದರು. ಸಂಚಾರ ವಿಭಾಗದ ಪಿ ಎಸ್ ಐ ಸುನೀಲ ಹುಲ್ಲೊಳ್ಳಿ , ಸಿಬ್ಬಂದಿ ಸಲೀಂ ಮೊಕಾಶಿ ಹಾಜರಿದ್ದು ಕಾನೂನು ಕ್ರಮ ಮುಂದುವರಿಸಿದ್ದು , ಮೃತ ಪಟ್ಟ ಘಟನೆಗೆ ನಿಖರ ಕಾರಣಗಳೇನಿರಬಹುದು ? ಹಾಗೂ ಈ ಪ್ರಕರಣದ ಕುರಿತು ಪೊಲೀಸರಿಂದ ಹೆಚ್ಚಿನ ಮತ್ತು ಅಧಿಕೃತ ಮಾಹಿತಿ ತಿಳಿದು ಬರಬೇಕಿದೆ.
ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ