Important
Trending

ಟ್ಯಾಂಕರ್ ಗೆ ಹಿಂಬದಿಯಿಂದ ಡಿಕ್ಕಿ ಹೊಡೆದ ಬೈಕ್ : ಚಿಕಿತ್ಸೆ ಸ್ಪಂದಿಸದೆ ಸವಾರ ಸಾವು

ಅಂಕೋಲಾ : ಗ್ಯಾಸ್ ಟ್ಯಾಂಕರ್ ವಾಹನವೊಂದಕ್ಕೆ ಹಿಂಬದಿಯಿಂದ ಡಿಕ್ಕಿ ಪಡಿಸಿಕೊಂಡು ಗಂಭೀರ ಗಾಯಗೊಂಡಿದ್ದ ಬೈಕ್ ಸವಾರನೋರ್ವ ಚಿಕಿತ್ಸೆಗೆ ಸ್ವಂದಿಸದೇ ಮೃತಪಟ್ಟ ಘಟನೆ ತಾಲೂಕಿನ ಜಮಗೋಡ ವ್ಯಾಪ್ತಿಯ ರಾ.ಹೆ 66 ರಲ್ಲಿ ಸಂಭವಿಸಿದೆ. ಹಾವೇರಿ ಜಿಲ್ಲೆಯ ಹಾನಗಲ್ ತಾಲೂಕಿನ ಕೆರೆಕ್ಯಾತ ನಹಳ್ಳಿ ತಾಂಡಾದ ಪ್ರವೀಣ ನಾಗೇಂದ್ರಪ್ಪ ಲಮಾಣಿ (23) ಎಂಬಾತನೇ ಮೃತ ದುರ್ದೈವಿ ಯುವಕ.

ಕಾರವಾರದಲ್ಲಿ ಟೈಲ್ ಫಿಟ್ಟಿಂಗ್ ಕೆಲಸ ಮಾಡಿಕೊಂಡಿದ್ದ ಈತ ತನ್ನ ಊರಿನಿಂದ ಬೈಕ್ ಚಲಾಯಿಸಿಕೊಂಡು ಕುಮಟಾ ಕಡೆಯಿಂದ ಕಾರವಾರ ಕಡೆ ಹೋಗುತ್ತಿದ್ದಾಗ , ದಾರಿ ಮಧ್ಯೆ ಅಂಕೋಲಾ ತಾಲೂಕಿನ ರವಿ ಜಮಗೋಡ ಅಂಗಡಿ ಎದುರಿನ ರಾಷ್ಟ್ರೀಯ ಹೆದ್ದಾರಿಯಲ್ಲಿ ಈ ರಸ್ತೆ ಅಪಘಾತ ಸಂಭವಿಸಿದೆ. ಅದಾವುದೋ ಕಾರಣದಿಂದ ಬೈಕ್ ಮೇಲಿನ ತನ್ನ ನಿಯಂತ್ರಣ ಕಳೆದುಕೊಂಡ ಪ್ರವೀಣ ಲಮಾಣಿ , ಮುಂಬದಿ ಇದ್ದ ಭಾರೀ ಗಾತ್ರದ ಗ್ಯಾಸ್ ಟ್ಯಾಂಕರ್ ವಾಹನಕ್ಕೆ ಜೋರಾಗಿ ಡಿಕ್ಕಿ ಪಡಿಸಿಕೊಂಡ ಎನ್ನಲಾಗಿದ್ದು , ಡಿಕ್ಕಿಯ ರಭಸಕ್ಕೆ ಗ್ಯಾಸ್ ಟ್ಯಾಂಕರ್ ವಾಹನದ ಹಿಂಬದಿ ಬಂಪರ್ ಪಟ್ಟಿ ಕಿತ್ತು ಒಳ ಬಗ್ಗಿದೆಯಲ್ಲದೇ , ಸ್ಟೇಪಣಿ ಟೈಯರ್ ಇಟ್ಟ ಭಾಗವೂ ಬೆಂಡ್ ಆಗಿದೆ.

ಇದೇ ವೇಳೆ ಪ್ರವೀಣ ಇತನ ತಲೆ ಮತ್ತಿತರ ಅಂಗಾಗಗಳಿಗೆ ಭಾರೀ ಗಾಯ ನೋವುಗಳಾಗಿದ್ದು , ರಕ್ತ ಸ್ರಾವದೊಂದಿಗೆ ನರಳುತ್ತಿದ್ದ ಗಾಯಾಳುವನ್ನು 1330 ಎನ್ ಎಚ್ ಎ ಐ ಅಂಬುಲೆನ್ಸ್ ಮೂಲಕ ತಾಲೂಕಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿ ಆತನಿಗೆ ಪ್ರಾಥಮಿಕ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆ ಅತ್ಯವಶ್ಯ ಇದ್ದರಿಂದ ಜಿಲ್ಲಾ ಆಸ್ಪತ್ರೆಗೆ ಸಾಗಿಸಲಾಗಿತ್ತು. ಫೆ 17 ರ ರಾತ್ರಿಯ ಸಮಯದಲ್ಲಿ ಅಪಘಾತ ಸಂಭವಿಸಿ , ಗಂಭೀರ ಗಾಯಗೊಂಡಿದ್ದ ಬೈಕ್ ಸವಾರ ಕಾರವಾರದ ಕ್ರಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಒಳಪಟ್ಟಿದ್ದನಾದರೂ , ಅಲ್ಲಿ ಚಿಕಿತ್ಸೆಗೆ ಸ್ವಂದಿಸಿದೇ ದುರದೃಷ್ಟವಶಾತ್ ಬೆಳಗಾಗುವುದರೊಳಗೆ ಮೃತಪಟ್ಟಿದ್ದಾನೆ.

ಟ್ಯಾಂಕರ್ ವಾಹನ ಮಂಗಳೂರು ಕಡೆಯಿಂದ ಗೋವಾ ಕಡೆ ಎಲ್ ಪಿ ಜಿ ತುಂಬಿಕೊಂಡು ಸಾಗುತ್ತಿತ್ತು ಎನ್ನಲಾಗಿದ್ದು , ಜಮಗೋಡ ಬಳಿ ಬಾಯಾರಿಕೆ ನೀಗಿಸಿಕೊಳ್ಳಲು ಚಾಲಕ ತನ್ನ ವಾಹನ ನಿಲ್ಲಿಸಿ ಹೋಗಿ ಬರುವಷ್ಟರಲ್ಲಿ , ಹಿಂಬದಿಯಿಂದ ಬರುತ್ತಿದ್ದ ಬೈಕ್ ಸವಾರ ಡಿಕ್ಕಿ ಪಡಿಸಿಕೊಂಡನೇ ? ಈ ಆಕಸ್ಮಿಕ ರಸ್ತೆ ಅಪಘಾತ ಹೇಗೆ ಸಂಭವಿಸಿತು ಎಂಬಿತ್ಯಾದಿ ಪ್ರಶ್ನೆಗಳು ಸಾರ್ವಜನಿಕ ವಲಯದಿಂದ ಕೇಳಿ ಬಂದಂತಿದೆ.

ಈ ಕುರಿತು ಅಂಕೋಲಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು , ಅಪಘಾತದ ಘಟನೆ ಕುರಿತಂತೆ ಪೊಲೀಸರಿಂದ ಹೆಚ್ಚಿನ ಮತ್ತು ನಿಖರ ಮಾಹಿತಿ ತಿಳಿದು ಬರಬೇಕಿದೆ. ಕಟ್ಟು ಮಸ್ತಾದ ದೇಹವುಳ್ಳ ಪ್ರವೀಣ , ಅವಿವಾಹಿತನಾಗಿದ್ದು ಕಷ್ಟ ಪಟ್ಟು ದುಡಿದು ತನ್ನ ಮನೆಯ ಜವಾಬ್ದಾರಿ ನಿಭಾಯಿಸುತ್ತಿದ್ದ ಎನ್ನಲಾಗಿದ್ದು ಮನೆಯ ಮಗನನ್ನು ಕಳೆದು ಕೊಂಡ ಬಡ ಕುಟುಂಬ ಶೋಕ ಸಾಗರದಲ್ಲಿ ಮುಳುಗಿದಂತಿದೆ. ನೊಂದ ಕುಟುಂಬಕ್ಕೆ ಯೋಗ್ಯ ಪರಿಹಾರ ರೂಪದ ಸಾಂತ್ವನ ದೊರೆಯಬೇಕೆನ್ನುವುದು , ಆತನ ಕುಟುಂಬದ ಹಿತೈಷಿಗಳ ವಿನಂತಿ ಆಗಿದೆ. ಅಂಕೋಲಾ , ಕಾರವಾರ ಮತ್ತಿತರೆಡೆ ಟೈಲ್ ಫಿಟ್ಟಿಂಗ್ , ಗಾರೆ ಮತ್ತಿತರ ಕೆಲಸ ಮಾಡಿಕೊಂಡಿರುವ ಹಾವೇರಿ ಮೂಲದ ಸಮಾಜ ಬಾಂಧವರನೇಕರು ಮತ್ತಿತರರು ,ಕಂಬನಿ ಮಿಡಿಯುತ್ತಿರುವುದು ಕಂಡು ಬಂತು.

ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ

Back to top button