NSS ಕ್ಯಾಂಪಿಗೆ ಹೋಗಿದ್ದ ಕಾಲೇಜ್ ವಿದ್ಯಾರ್ಥಿನಿ ಆಕಸ್ಮಿಕ ಸಾವು : ಬಿರು ಬೇಸಿಗೆಯಲ್ಲಿ ಕ್ಯಾಂಪ್ ಮಾಡಿದ್ದೇಕೆ ಎಂದು ಆಕ್ರೋಶ
ಶವಾಗಾರದ ಬಳಿ ಕೆಲ ಕಾಲ ಕಾವೇರಿದ ವಾತಾವರಣ

ಅಂಕೋಲಾ : ಎನ್ ಎಸ್ ಎಸ್ ಕ್ಯಾಂಪಿನ ಶಿಬಿರಾರ್ಥಿಯಾಗಿದ್ದ ವಿದ್ಯಾರ್ಥಿನಿ ಒರ್ವಳು ಅದಾವುದೋ ಕಾರಣದಿಂದ ಹಠಾತ್ ಆಗಿ ವಾಂತಿ ಮಾಡಿಕೊಂಡು ಅಸ್ಪಸ್ಥಗೊಂಡವಳಿಗೆ ಆಸ್ಪತ್ರೆಗೆ ಕರೆತರುವಷ್ಟರಲ್ಲಿ ಕೊನೆಯುಸಿರೆಳೆದ ಧಾರುಣ ಘಟನೆ ಸಂಭವಿಸಿದೆ. ಅನುಷಾ ರವಿ ವಂದಿಗೆ (20) ಮೃತ ದುರ್ದೈವಿ. ಇವಳು ಜಿ. ಸಿ ಕಾಲೇಜಿನ ಬಿ.ಎಸ್ಸಿ ಪದವಿ ( 4 ನೇ ಸೆಮ್ ) ವಿದ್ಯಾರ್ಥಿನಿಯಾಗಿದ್ದು , ಬೆಳಸೆ ಗ್ರಾಪಂ ವ್ಯಾಪ್ತಿಯ ಸೊಣಗಿಮಕ್ಕಿಯಲ್ಲಿ ರಾಷ್ಟ್ರೀಯ ಸೇವಾ ಯೋಜನೆ ವಿಶೇಷ ಶಿಬಿರ (ಎನ್ ಎಸ್ ಎಸ್ ಕ್ಯಾಂಪ್ ) ಶಿಬಿರಾರ್ಥಿಯಾಗಿ ಮಾ 3 ರಂದು ಪಾಲ್ಗೊಳ್ಳಲು ಬಂದ ವೇಳೆ ಮಧ್ಯಾಹ್ನ ಹಠಾತ್ ಆರೋಗ್ಯ ಸಮಸ್ಯೆ ಕಾಣಿಸಿಕೊಂಡಂತಾಗಿ ವಾಂತಿ ಮಾಡಿಕೊಂಡಳು ಎನ್ನಲಾಗಿದೆ.
ತದ ನಂತರ ಅವಳನ್ನು ಎನ್ ಎಸ್ ಎಸ್ ಅಧಿಕಾರಿ ಡಾ ನಂಜುಡಯ್ಯ ತಮ್ಮ ಕಾರಿನಲ್ಲಿ ಆಸ್ಪತ್ರೆಗೆ ಕರೆತರುವಷ್ಟರಲ್ಲಿ ದುರದೃಷ್ಟವಶಾತ್ ಅವಳ ಪ್ರಾಣ ಪಕ್ಷಿ ಹಾರಿ ಹೋಗಿತ್ತು ಎನ್ನಲಾಗಿದ್ದು , ನಂತರ ಮೃತ ದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ತಾಲೂಕಾ ಆಸ್ಪತ್ರೆಯ ಶವಾಗಾರದಲ್ಲಿಡಲಾಗಿತ್ತು . ಬೇಸಿಗೆಯ ಬಿರು ಬಿಸಿಲಿನಲ್ಲಿ ಕ್ಯಾಂಪ್ ಏರ್ಪಡಿಸಿ ಸಂಬಂಧಿತ ಕಾಲೇಜಿನವರು ಕೊಂಚ ಬೇಜವ್ದಾರಿ ತೋರಿದರೇ ? ಬಡ ಕುಟುಂಬದಿಂದ ಬಂದ ಪ್ರತಿಭಾನ್ವಿತ ವಿದ್ಯಾರ್ಥಿನಿಯ ಜೀವಕ್ಕೆ ಈಗ ಬೆಲೆ ಕಟ್ಟಲು ಸಾಧ್ಯವೇ ? ಜವಾಬ್ದಾರಿ ಸ್ಥಾನದಲ್ಲಿರುವವರು ಬಂದು ನೊಂದ ಕುಟುಂಬದ ನೋವಿಗೆ ಯೋಗ್ಯ ಪರಿಹಾರ ಘೋಷಿಸಿ ಸಾಂತ್ವನ ಹೇಳಲಿ ಎಂದು ಸ್ಥಳೀಯ ಪ್ರಮುಖರು ತಮ್ಮ ಅಸಮಾಧಾನ ಹಾಗೂ ಆಕ್ರೋಶ ವ್ಯಕ್ತಪಡಿಸಿದರು.
ಪ್ರಾಚಾರ್ಯ ಎಸ್ ವಿ ವಸ್ತ್ರದ , ಆಡಳಿತಾಧಿಕಾರಿ ಆರ್ ವಿ ಕೇಣಿ ಹಾಗೂ ಬೋಧಕ ವೃಂದದವರು ಸ್ಥಳಕ್ಕೆ ಬಂದು ಆಕಸ್ಮಿಕವಾಗಿ ಸಂಭವಿಸಿದ ಪ್ರಾಣಹಾನಿ ಗೆ ನಮಗೂ ಬೇಸರವಿದೆ. ದಯವಿಟ್ಟು ತಪ್ಪಾಗಿ ಅರ್ಥೈಸದಿರಿ. ನಿಮ್ಮ ನೋವು ಹಾಗೂ ಕಷ್ಟದಲ್ಲಿ ನಾವಿದ್ದೇವೆ ಎಂದು ಹೇಳಿ ಸಂತೈಸಿದರಲ್ಲದೇ , ವಂದಿಗೆ ಗ್ರಾಪಂ ಮಾಜಿ ಅಧ್ಯಕ್ಷ ನಾರಾಯಣ ನಾಯಕ , ಆಗೇರ ಸಮಾಜದ ಕೆಲ ಪ್ರಮುಖರು , ಮೃತಳ ತಂದೆ ಮತ್ತು ಕುಟುಂಬಸ್ಥರು ಹಾಗೂ ಸಂಬಂಧಿಗಳು , ಮಹಿಳಾ ಪ್ರಮುಖರಾದ ನುಜಾತಾ ಗಾಂವಕರ , ರೇಖಾ ಡಿ ಗಾಂವಕರ , ಉಪ ತಹಶೀಲ್ದಾರ ಗಿರೀಶ್ ಜಾಂಬವಳೀಕರ ಮತ್ತಿತರರೊಂದಿಗೆ ದೀರ್ಘ ಸಮಾಲೋಚನೆ ನಡೆಸಿ , ಎನ್ ಎಸ್ ಎಸ್ ಜಿಲ್ಲಾ ಹಾಗೂ ರಾಜ್ಯ ಘಟಕದ ಅಧಿಕಾರಿಗಳೊಂದಿಗೂ ದೂರವಾಣಿ ಕರೆ ಮೂಲಕ ಚರ್ಚಿಸಿ , ವಿಮಾ ಪರಿಹಾರ ರೂ 1 ಲಕ್ಷ ,ಹಾಗೂ ಟ್ರಸ್ಟಿನ ಚೇರಮನ್ ಜೊತೆ ಚರ್ಚಿಸಿ , ಮಾನವೀಯ ನೆಲೆಯಲ್ಲಿ ಬೋಧಕ ಸಿಬ್ಬಂದಿಗಳು ಹಾಗೂ ಇತರರು ಮತ್ತು ಟ್ರಸ್ಟ್ ವತಿಯಿಂದ ಸೇರಿ ರೂ 1 ಲಕ್ಷ 50 ಸಾವಿರ ಸೇರಿ ಒಟ್ಟೂ 2.50 ಲಕ್ಷ ನೆರವು ನೀಡುವುದಾಗಿ ಭರವಸೆ ನೀಡಿದರು.
ಸಿಪಿಐ ಚಂದ್ರಶೇಖರ ಮಠಪತಿ ,, ಪಿ ಎಸ್ ಐ ಗಳಾದ ಉದ್ದಪ್ಪ ಧರೆಪ್ಪನವರ , ಜಯಶ್ರೀ ಪ್ರಭಾಕರ ಹಾಗೂ ಸಿಬ್ಬಂದಿಗಳು ಕರ್ತವ್ಯ ನಿರ್ವಹಿಸಿ ಕಾವೇರಿದ ವಾತಾವರಣ ತಿಳಿಗೊಳಿಸಿದರು. ಬೆಂಗಳೂರಿನಲ್ಲಿರುವ ಶಾಸಕರ ಗಮನಕ್ಕೂ ಈ ಬಡ ವಿದ್ಯಾರ್ಥಿನಿಯ ಆಕಸ್ಮಿಕ ಸಾವಿನ ಸುದ್ದಿ ತಲುಪಿದ್ದು , ಸಂತಾಪ ಸೂಚಿಸಿರುವ ಶಾಸಕರು , ವೈಯಕ್ತಿಕವಾಗಿ ಹಾಗೂ ಸರ್ಕಾರದ ವತಿಯಿಂದ ಸಾಧ್ಯವಾದಷ್ಟು ಪರಿಹಾರ ರೂಪದ ನೆರವಿನ ಹಸ್ತ ಚಾಚುವುದಾಗಿ ತಿಳಿಸಿದ್ದಾರೆ. ಸಂಘ ಸಂಸ್ಥೆಗಳು ದಾನಿಗಳು , ಶಿಕ್ಷಣ ಪ್ರೇಮಿಗಳು ಮತ್ತಿತರರು ನೊಂದ ಬಡ ಕುಟುಂಬಕ್ಕೆ ಸಾಧ್ಯವಾದಷ್ಟು ಹೆಚ್ಚಿನ ನೆರವು ನೀಡಿ ಸಾಂತ್ವನ ಹೇಳಬೇಕಿದೆ.
ಮರಣೋತ್ತರ ಪರೀಕ್ಷೆ ಬಳಿಕ ಮೃತದೇಹವನ್ನು ವಂದಿಗೆ ಪರೀವಿಕ್ಷಣಾ ಮಂದಿರದ ಹಿಂಬದಿ ಇರುವ , ಮೃತಳ ಮನೆಗೆ ಸಾಗಿಸಲು ಸಾಮಾಜಿಕ ಕಾರ್ಯಕರ್ತ ವಿಜಯ ಕುಮಾರ ನಾಯ್ಕ ತಮ್ಮ ರಕ್ಷಕ ಅಂಬುಲೆನ್ಸ್ ಸೇವೆಯನ್ನು ಉಚಿತವಾಗಿ ನೀಡಿದರು. ಕೆನರಾ ವೆಲ್ ಫೇರ್ ಟ್ರಸ್ಟಿನ ಸ್ಥಾನಿಕ ಆಡಳಿತಾಧಿಕಾರಿ ಆರ್ ವಿ ಕೇಣಿ , ಪ್ರಾಚಾರ್ಯ ಎಸ್ ವಿ ವಸ್ತ್ರದ , ಎನ್ ಎಸ್ ಎಸ್ ಅಧಿಕಾರಿಗಳು ಮತ್ತಿತರರು ಮೃತ 8 ಮನೆಗೆ ತೆರಳಿ ಅಂತಿಮ ನಮನ ಸಲ್ಲಿಸಿದರು.
ಸ್ಥಳೀಯ ಹಾಗೂ ಸುತ್ತಮುತ್ತಲಿನ ಆಗೇರ ಸಮಾಜದವರು ಹಾಗೂ ಇತರರು ಅನಿಷಾ ಆಗೇರ ಅಕಾಲಿಕ ನಿಧನಕ್ಕೆ ಕಂಬನಿ ಮಿಡಿಯುತ್ತಿರುವುದು ಕಂಡು ಬಂತು . ಒಟ್ಟಿನಲ್ಲಿ ಪ್ರತಿಭಾನ್ವಿತ ಬಡ ವಿದ್ಯಾರ್ಥಿನಿ ಯ ಅಕಾಲಿಕ ಸಾವಿನ ಸುದ್ದಿ ಪಟ್ಟಣ ವ್ಯಾಪ್ತಿಯಲ್ಲಿ ಶೋಕದ ವಾತಾವರಣ ಸೃಷ್ಠಿಸಿದಂತಿತ್ತು. ಮೃತಳ ಗೌರವಾರ್ಥ ಜಿ.ಸಿ ಕಾಲೇಜಿಗೆ ಮಾರ್ಚ್ 4 ರ ಮಂಗಳವಾರ ರಜೆ ಘೋಷಿಸಲಾಗಿದೆ.
ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ