
ಅಂಕೋಲಾ: ಕಾರವಾರದಲ್ಲಿರುವ ತನ್ನ ಅಕ್ಕನ ನಿಧನ ವಾರ್ತೆ ಕೇಳಿ ಹುಬ್ಬಳ್ಳಿಯಿಂದ ಊರಿಗೆ ಬಂದು , ಮೃತಳ ಅಂತಿಮ ಕಾರ್ಯದಲ್ಲಿ ಪಾಲ್ಗೊಂಡು , ಕುಟುಂಬ ಸದಸ್ಯರ ಜೊತೆ ಮನೆಗೆ ಮರಳುತ್ತಿದ್ದ ತಮ್ಮ, ದಾರಿಮಧ್ಯೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಸ್ಥಳದಲ್ಲೇ ಮೃತಪಟ್ಟು ಅಕ್ಕನ ಬೆನ್ನಿಗೇ ತಾನೂ ಸಹ ಅಂತಿಮ ಯಾತ್ರೆ ಮುಗಿಸಿದ ಧಾರುಣ ಘಟನೆ ಅಂಕೋಲಾದಲ್ಲಿ ಹಾದುಹೋಗಿರುವ ರಾ.ಹೆ 63 ರಲ್ಲಿ ಸಂಭವಿಸಿದೆ.
ಇದೇ ವೇಳೆ ಚಾಲಕ ಸಹಿತ ಕಾರಿನಲ್ಲಿದ್ದ ಉಳಿದ ಮೂವರು ಗಾಯ ನೋವುಗೊಂಡ ದುರದೃಷ್ಟಕರ ಘಟನೆ ಇದಾಗಿದೆ. ರಾ ಹೆ 63 ರ ಅಂಕೋಲಾ ತಾಲೂಕಿನ ಕಂಚಿನ ಬಾಗಿಲ- ನವಗದ್ದೆ ಬಳಿ ಸಂಭವಿಸಿದ ಈ ಅಪಘಾತದ ಕುರಿತಂತೆ ಚಾಲಕ ಸಂಜೀವ ನಾಯ್ಕ ಹೇಳುವಂತೆ ಹೆದ್ದಾರಿಗೆ ಅಡ್ಡವಾಗಿ ಬಂದ ಜಾನುವಾರು ತಪ್ಪಿಸಲು ಹೋಗಿ ಈ ಅಪಘಾತ ಸಂಭವಿಸಿದೆಯoತೆ.
ಚಾಲಕನ ನಿಯಂತ್ರಣ ತಪ್ಪಿದ ಕಾರು ರಸ್ತೆಯ ಬಲಬದಿಗೆ ಪಲ್ಟಿಯಾಗಿದೆ. ಅಪಘಾತದ ತೀವ್ರತೆಗೆ ತಲೆ ಮತ್ತಿತರೆಡೆ ಗಂಭೀರ ಗಾಯ ನೋವುಗೊಂಡ ಸುರೇಶ ಶಂಕರ ರಾಣೆ ( 80) ಎನ್ನುವ ಹಿರಿಯ ನಾಗರಿಕ ಮೃತಪಟ್ಟರೆ , ಅವರ ಪತ್ನಿ ಶೈಲಾ ರಾಣೆ , ಕಾರು ಚಲಾಯಿಸುತ್ತಿದ್ದ ಸಂಜೀವ ನಾಯ್ಕ , ಆತನ ಪತ್ನಿ ಶ್ವೇತಾ ನಾಯ್ಕ ಅವರಿಗೆ ಗಾಯ ನೋವುಗಳಾಗಿದ್ದು ಬೆಳಂಬಾರ ತಾಳೇ ಬೈಲಿನ ರಾಘು ಗೌಡ ಇವರ ಖಾಸಗಿ ಅಂಬುಲೆನ್ಸ್ ಮೂಲಕ ಗಾಯಾಳುಗಳನ್ನು ತಾಲೂಕಾ ಆಸ್ಪತ್ರೆಗೆ ದಾಖಲಿಸಲಾಗಿದೆ.
ಮೃತ ಸುರೇಶ ರಾಣೆ ಪತ್ನಿಯ ಗಲ್ಲ ಮತ್ತು ಕೈ ಭಾಗಕ್ಕೆ ಗಾಯವಾಗಿ ರಕ್ತ ಸ್ರಾವವಾಗಿದ್ದು , ಖಾಸಗೀ ಅಂಬುಲೆನ್ಸ್ ಮಾಲಕರಾದ ರಾಘು ಗೌಡ ಮತ್ತು ವಿಜಯಕುಮಾರ ನಾಯ್ಕ ಬೆಂಡೇಜ್ ಪಟ್ಟಿ ಸುತ್ತಿ ಪ್ರಾಥಮಿಕ ಚಿಕಿತ್ಸೆ ನೀಡಿದರು. ಶೈಲಾ ರಾಣಿ ಅವರಿಗೆ ತಾಲೂಕಾ ಆಸ್ಪತ್ರೆಗೆ ಸಾಗಿಸಿ , ಅಲ್ಲಿಂದ ಹೆಚ್ಚಿನ ಚಿಕಿತ್ಸೆಗಾಗಿ ಕಾರವಾರ ಜಿಲ್ಲಾ ಆಸ್ಪತ್ರೆಗೆ ಸಾಗಿಸಲಾಗಿದೆ.
ಖಾಸಗಿ ಅಂಬುಲೆನ್ಸ್ ಮೂಲಕ ಗಾಯಾಳುಗಳನ್ನು ನವಗದ್ದೆ ಘಟನಾ ಸ್ಥಳದಿಂದ ತಾಲೂಕಾ ಆಸ್ಪತ್ರೆಗೆ ಸಾಗಿಸಿ ಬಹು ಹೊತ್ತಾದ ಬಳಿಕ 108 ಅಂಬುಲೆನ್ಸ್ ವಾಹನ ಘಟನಾ ಸ್ಥಳಕ್ಕೆ ಬಂದಿದ್ದು , ತುರ್ತು ಸಂದರ್ಭದಲ್ಲಿ ಅಂಕೋಲಾದಲ್ಲಿ 108 ಸೇವೆ ಸರಿಯಾಗಿ ಸಿಗದೇ , ದೂರದ ಹಿರೇಗುತ್ತಿ ಮತ್ತಿತರೆಡೆಯ ಅಂಬುಲೆನ್ಸ್ ಎರವಲು ಸೇವೆ ಪಡೆಯುತ್ತಿರುವದರಿಂದ ಜನರ ಪ್ರಾಣ ರಕ್ಷಣೆ ಉದ್ದೇಶದಿಂದ ಈ ತ್ವರಿತ ಸೇವೆ ಕುರಿತು ಗಂಭೀರವಾಗಿ ಪರಿಗಣಿಸಿ ಸೂಕ್ತ ವ್ಯವಸ್ಥೆ ಮರುಕಲ್ಪಿಸಬೇಕಿದೆ.
ಸಂಚಾರಿ ವಿಭಾಗದ ಪಿ. ಎಸ್ ಐ ಸುನೀಲ ಹುಲ್ಲೊಳ್ಳಿ , 112 ತುರ್ತು ವಾಹನ ಸಿಬ್ಬಂದಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಕಾನೂನು ಕ್ರಮ ಮುಂದುವರೆಸಿದ್ದಾರೆ: ಮೃತ ದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ತಾಲೂಕಾ ಆಸ್ಪತ್ರೆ ಶವಾಗಾರಕ್ಕೆ ಸಾಗಿಸಲು ಸಾಮಾಜಿಕ ಕಾರ್ಯಕರ್ತ ವಿಜಯ ಕುಮಾರ ನಾಯ್ಕ ಜೊತೆ ಸ್ಥಳೀಯರು ಹಾಗೂ ದಾರಿ ಹೋಕರು ಸಹಕರಿಸಿದರು. ಅಪಘಾತದ ಘಟನೆ ಕುರಿತಂತೆ ಮತ್ತಷ್ಟು ಹೆಚ್ಚಿನ ಹಾಗೂ ನಿಖರ ಮಾಹಿತಿ ತಿಳಿದು ಬರಬೇಕಿದೆ.
ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ