
- ಹಾಲಕ್ಕಿ ಒಕ್ಕಲಿಗರ ಕಲೆ ಸಂಸ್ಕೃತಿ ಬಿಂಬಿಸಲಿದೆ ಹಾಲಕ್ಕಿ ಹಬ್ಬ
- ಏಪ್ರಿಲ್ 19ಂದು ಬೆಳಂಬಾರದ ಮಹಾಸತಿ ದೇವಾಲಯದ ಎದುರು ಕಾರ್ಯಕ್ರಮ
- ಜಾನಪದ ಪ್ರಶಸ್ತಿ ಪುರುಸ್ಕೃತ ನಾಡೋಜ ಲಕ್ಷ್ಮೀ ಗೌಡ ಉದ್ಘಾಟನೆ
- ಸರ್ವರಿಗೂ ಆದರದ ಸ್ವಾಗತ
ಅಂಕೋಲಾ: ಜಿಲ್ಲೆಯ ಬಹುಸಂಖ್ಯಾತ ಸಮಾಜಗಳಲ್ಲಿ ಒಂದಾಗಿರುವ ಹಾಲಕ್ಕಿ ಒಕ್ಕಲು , ಈ ಹಿಂದಿನಿಂದಲೂ ಪರಿಸರದೊಂದಿಗೆ ಹುಟ್ಟಿ ಬೆಳೆದು, ತಮ್ಮ ಜೀವನ ಶೈಲಿ , ಉಡುಗೆ – ತೊಡುಗೆ , ಆಚಾರ – ವಿಚಾರಗಳಲ್ಲಿ ತಮ್ಮದೇ ಆದ ವಿಶೇಷತೆ ಹೊಂದಿದ್ದಾರೆ. ಜಾನಪದ ಕಲೆಯ ಆಗರವಾಗಿರುವ ಹಾಲಕ್ಕಿ ಒಕ್ಕಲಿಗರ ಕಲೆ, ಸಂಸ್ಕೃತಿಯನ್ನು ಬಿಂಬಿಸುವ ಹಾಲಕ್ಕಿ ಹಬ್ಬ ಎಂಬ ಮಹತ್ವಪೂರ್ಣ ತಾಲೂಕಾ ಮಟ್ಟದ ಕಾರ್ಯಕ್ರಮ ಅಂಕೋಲಾದಲ್ಲಿ ಈ ಬಾರಿ ಏಪ್ರಿಲ್ 19 ರಂದು ಶನಿವಾರ ರಾತ್ರಿ 8.30 ರಿಂದ ಬೆಳಂಬಾರದ ಮಹಾಸತಿ ದೇವಾಲಯದ ಎದುರು ನಡೆಯಲಿದೆ.
ಮಹಿಳೆಯರಿಗಾಗಿ ಹಾಲಕ್ಕಿ ಜಾನಪದ ಹಾಡು ಹೇಳುವ ಸ್ಪರ್ಧೆ

ಗುಮಟೆ ವಾದನ, ಜಾನಪದ ಪದ, ಕುಣಿತ ಮತ್ತು ಹಗರಣಗಳನ್ನೊಳಗಂಡ ಕಲಾ ಪ್ರಕಾರ ಸ್ಪರ್ಧೆಯ ರೂಪದಲ್ಲಿ ಪ್ರದರ್ಶನಗೊಳ್ಳುವುದು ಹಾಲಕ್ಕಿ ಹಬ್ಬದ ವಿಶೇಷವಾಗಿದ್ದು ಮಹಿಳೆಯರಿಗಾಗಿ ಹಾಲಕ್ಕಿ ಜಾನಪದ ಹಾಡುಗಳನ್ನು ಹೇಳುವ ಸ್ಪರ್ಧೆ ನಡೆಯಲಿದೆ. ಇದೀಗ ನಾಲ್ಕನೇ ವರ್ಷದ ಹಾಲಕ್ಕಿ ಹಬ್ಬ ಕಾರ್ಯಕ್ರಮಕ್ಕೆ ಅಂಕೋಲಾ ತಾಲೂಕು ಹಾಲಕ್ಕಿ ಒಕ್ಕಲಿಗರ ಸಂಘ ಅಣಿಯಾಗಿದ್ದು ಹಾಲಕ್ಕಿ ಒಕ್ಕಲಿಗರ ಹೆಮ್ಮೆಯಾಗಿದ್ದ ದಿವಂಗತ ಪದ್ಮಶ್ರೀ ತುಳಸಿ ಗೌಡ ಮತ್ತು ದಿವಂಗತ ಪದ್ಮಶ್ರೀ ಸುಕ್ರಿ ಗೌಡ ಅವರ ನೆನಪಿನೊಂದಿಗೆ ನಡೆಯುವ ಕಾರ್ಯಕ್ರಮವನ್ನು
ಜಾನಪದ ಪ್ರಶಸ್ತಿ ಪುರಸ್ಕೃತ ನಾಡೋಜ ಲಕ್ಷ್ಮೀ ಗೌಡ ಉದ್ಘಾಟಿಸಲಿದ್ದಾರೆ.
ತಾಲೂಕು ಹಾಲಕ್ಕಿ ಒಕ್ಕಲಿಗರ ಸಂಘದ ಅಧ್ಯಕ್ಷ ಲಂಬೋದರ ಗೌಡ ಅಧ್ಯಕ್ಷತೆ
ತಾಲೂಕು ಹಾಲಕ್ಕಿ ಒಕ್ಕಲಿಗರ ಸಂಘದ ಅಧ್ಯಕ್ಷ ಲಂಬೋದರ ಗೌಡ ಅಧ್ಯಕ್ಷತೆ ವಹಿಸಲಿದ್ದು ಮುಖ್ಯ ಅತಿಥಿಗಳಾಗಿ ಬೆಳಂಬಾರದ ಊರ ಗೌಡ ಷಣ್ಮುಖ ಗೌಡ, ಉತ್ತರ ಕನ್ನಡ ಜಿಲ್ಲಾ ಹಾಲಕ್ಕಿ ಒಕ್ಕಲಿಗರ ಸಂಘದ ಅಧ್ಯಕ್ಷ ಹನುಮಂತ ಗೌಡ, ಬೆಳಂಬಾರ ಗ್ರಾಮ ಪಂಚಾಯತ್ ಅಧ್ಯಕ್ಷೆ ಜ್ಯೋತಿ ಖಾರ್ವಿ, ಪಂಚಾಯತ್ ಸದಸ್ಯ ಅಜೀತ ಗೌಡ ಅವರ ಉಪಸ್ಥಿತಿ ಇರಲಿದೆ.

ಸಾಧಕರಿಗೆ ಸನ್ಮಾನ
ಭಾರತೀಯ ಬಾಹ್ಯಾಕಾಶ ಸಂಸ್ಥೆ ಇಸ್ರೋದಲ್ಲಿ ಸಹಾಯಕಿ ಹುದ್ದೆಗೆ ಆಯ್ಕೆಯಾಗಿರುವ ಕೋಕಿಲಾ ಗೋಪಾಲ ಗೌಡ ಅವರಿಗೆ ಕಾರ್ಯಕ್ರಮದಲ್ಲಿ ಸನ್ಮಾನ ನಡೆಯಲಿದ್ದು, ಅಂಕೋಲಾ ತಾಲೂಕಿನ ಹಾಲಕ್ಕಿ ಸಮಾಜ ಭಾಂದವರು ಹೆಚ್ಚಿನ ಸಂಖ್ಯೆಯಲ್ಲಿ ಸ್ಪರ್ಧೆಯಲ್ಲಿ ಪಾಲ್ಗೊಳ್ಳುವಂತೆ ಸಂಘಟಕರು ತಿಳಿಸಿದ್ದು , ಇತರೆ ಸಮಾಜದವರಿಗೆ , ಹಾಲಿ ಹಾಗೂ ಮಾಜಿ ಜನಪ್ರತಿನಿದಿಗಳಿಗೆ , ಅಧಿಕಾರಿ ವರ್ಗ ಸೇರಿದಂತೆ ಸರ್ವರಿಗೂ ಸ್ವಾಗತ ಕೋರಿ ಎಲ್ಲರ ಸಹಕಾರ ಬಯಸಿದ್ದಾರೆ.
ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ