ವಿವೇಕನಗರ ವಿಕಾಸ ಸಂಘದಿಂದ ‘ಮಾಸದ ಕಾರ್ಯಕ್ರಮ
'ರಾಜ್ಯ ಮಟ್ಟದ ಪ್ರತಿಭೆಗಳಿಗೆ ಸನ್ಮಾನ – ಯೋಗದ ಮಹತ್ವದ ಕುರಿತು ಉಪನ್ಯಾಸ

ಕುಮಟಾ : ಇಲ್ಲಿನ ವಿವೇಕನಗರ ವಿಕಾಸ ಸಂಘದ ‘ಮಾಸದ ಕಾರ್ಯಕ್ರಮ’ವು ಸ್ಥಳೀಯ ಸರಕಾರೀ ಹಿರಿಯ ಪ್ರಾಥಮಿಕ ಶಾಲೆ ‘ಶಾರದಾ ನಿಲಯ’ದಲ್ಲಿ ಕಳೆದ ಶನಿವಾರದಂದು ಸಂಜೆ ಸಮಾಜೋಪಯೋಗಿ ವಿಷಯಗಳ ಮತ್ತು ಸಾಧನೆಗಳ ಸ್ಮರಣೆಯ ಉತ್ಸವವಾಗಿ ಯಶಸ್ವಿಯಾಗಿ ಜರುಗಿತು.
ಕಾರ್ಯಕ್ರಮದಲ್ಲಿ ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಪೂರ್ಣಾಂಕ ಪಡೆದು ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದ ಕುಮಟಾದ ಹೆಮ್ಮೆಯ ವಿದ್ಯಾರ್ಥಿನಿ ಕುಮಾರಿ ಭೂಮಿಕಾ ನಾಗರಾಜ ಹೆಗಡೆ ಹಾಗೂ ರಾಜ್ಯಕ್ಕೆ ನಾಲ್ಕನೇ ಸ್ಥಾನ ಪಡೆದ ವಿವೇಕನಗರದ ಪ್ರತಿಭಾವಂತ ವಿದ್ಯಾರ್ಥಿನಿ ಕುಮಾರಿ ಶ್ರೇಯಾ ಗಿರೀಶ ಹೆಬ್ಬಾರ ರವರನ್ನು ಸಂಘದ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು. ಸನ್ಮಾನಿತರು ತಮ್ಮ ಖುಷಿಯ ಅನುಭವವನ್ನು ಹಂಚಿಕೊಂಡು ಎಲ್ಲರ ಆಶೀರ್ವಾದ ಕೋರಿದರು.
ಆರಂಭದಲ್ಲಿ ಸಂಘದ ನಿರ್ದೇಶಕ ಜಯದೇವ ಬಳಗಂಡಿ ಪ್ರಾರ್ಥನೆ ಹಾಡಿ, ಕಾರ್ಯಕ್ರಮ ನಿರೂಪಿಸಿದರು. ಕಾರ್ಯದರ್ಶಿ ಡಾ. ಡಿ.ಡಿ. ಭಟ್ಟ ಸ್ವಾಗತಿಸಿದರು. ನಿರ್ದೇಶಕ ಪ್ರೊ. ಅರುಣ ಹೆಗಡೆ ಅವರು ಪ್ರಾಸ್ತಾವಿಕ ನುಡಿಗಳನ್ನಾಡಿ ಸಂಘದ ಚಟುವಟಿಕೆಗಳ ಬಗ್ಗೆ ವಿವರಿಸುತ್ತ ಈವರೆಗೆ ಸಂಘವು ಹಮ್ಮಿಕೊಂಡ ಕೆಲ ಮಹತ್ವದ ಸಮಾಜೋಪಕಾರೀ ಕಾರ್ಯಗಳನ್ನು ಉಲ್ಲೇಖಿಸಿದರು.
ಕಾರ್ಯಕ್ರಮದ ಪ್ರಮುಖ ಭಾಗವಾಗಿದ್ದ ಯೋಗದ ಕುರಿತಾಗಿನ ಉಪನ್ಯಾಸವನ್ನು, ವಿವೇಕನಗರದ ಹೆಮ್ಮೆಯ ನ್ಯಾಚುರೋಪತಿ ವೈದ್ಯೆ ಡಾ. ಪವಿತ್ರ ಎಮ್. ಗುನಗ ಅವರು ನಡೆಸಿಕೊಟ್ಟರು. ಯೋಗ ಮತ್ತು ಪ್ರಾಣಾಯಾಮದ ಮಹತ್ವವನ್ನು ಜನರಿಗೆ ಸರಳವಾಗಿ ಅರ್ಥವಾಗುವ ರೀತಿಯಲ್ಲಿ ವಿವರಿಸಿದರು. ಸಭಿಕರಿಂದ ಬಂದ ಪ್ರಶ್ನೆಗಳಿಗೆ ಸ್ಪಷ್ಟ ಉತ್ತರ ನೀಡಿ ವಿಚಾರವಿಸ್ತಾರ ಮಾಡಿದರು. ಸಂಘದ ವತಿಯಿಂದ ಅವರನ್ನು ಹಿರಿಯರಾದ ರೋಹಿದಾಸ ನಾಯಕ್ ಮತ್ತು ಪ್ರೊ.ಆರ್.ಎ.ಪ್ರಭು ಅವರು ಗೌರವಿಸಿದರು.
ಸಭಾಧ್ಯಕ್ಷತೆಯನ್ನು ವಹಿಸಿದ್ದ ಸಂಘದ ಅಧ್ಯಕ್ಷ ಡಾ. ಎಮ್.ಆರ್. ನಾಯಕ್ ಅವರು, ಸ್ಥಳೀಯ ಸಾಧಕರನ್ನು ಅಭಿನಂದಿಸುತ್ತ, “ವಿವೇಕನಗರ ವಿಕಾಸ ಸಂಘವು ಪ್ರತೀ ತಿಂಗಳ ನಾಲ್ಕನೇ ಶನಿವಾರದಂದು ‘ಮಾಸದ ಕಾರ್ಯಕ್ರಮ’ವೆಂಬ ಹೆಸರಿನಲ್ಲಿ ಆರೋಗ್ಯ, ಕಾನೂನು, ರಕ್ಷಣೆ, ಸಂಚಾರ ನಿಯಮ, ಸ್ವಚ್ಛತೆ ಕುರಿತಾಗಿನ ಅರಿವು ಮತ್ತು ಶಿಕ್ಷಣ, ಸಂಗೀತ, ಸಾಂಸ್ಕೃತಿಕ ಹಾಗೂ ಸಾಹಿತ್ಯಿಕ ಕ್ಷೇತ್ರಗಳಿಗೆ ಸಂಬಂಧಿಸಿದ ವಿಭಿನ್ನ ವಿಷಯಗಳ ಬಗ್ಗೆ ಕಾರ್ಯಕ್ರಮಗಳನ್ನು ನಿರಂತರವಾಗಿ ಹಮ್ಮಿಕೊಳ್ಳಲು ಯೋಜಿಸಿದ್ದು, ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಸದುಪಯೋಗಪಡಿಸಿಕೊಳ್ಳಬೇಕು” ಎಂದರು.
ವೇದಿಕೆಯಲ್ಲಿ ಶಿಕ್ಷಕಿ ಮಹಾದೇವಿ ಬಿ. ಗೌಡ ಹಾಗೂ ಉಪಾಧ್ಯಕ್ಷ ಎಸ್. ಆಯ್. ನಾಯ್ಕ ಉಪಸ್ಥಿತರಿದ್ದರು. ಸಂಘದ ಎಲ್ಲ ಪದಾಧಿಕಾರಿಗಳು,ಸದಸ್ಯರು ಹಾಗೂ ಮಹಿಳೆಯರು ಸೇರಿ ಹೆಚ್ಚಿನ ಸಂಖ್ಯೆಯಲ್ಲಿ ಸ್ಥಳೀಯರು ಪಾಲ್ಗೊಂಡು ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು. ಕಾಲಮಿತಿಯಲ್ಲಿ ಜರುಗಿದ ಈ ಉತ್ತಮ ಸಂಯೋಜಿತ ಕಾರ್ಯಕ್ರಮದ ಬಗ್ಗೆ ಪ್ರಜ್ಞಾವಂತ ನಾಗರಿಕರು ಸಂತಸ ವ್ಯಕ್ತಪಡಿಸಿ, ಸಂಘದ ಶಿಸ್ತಿನ ಕಾರ್ಯನಿರ್ವಹಣೆಗೆ ಶ್ಲಾಘನೆ ವ್ಯಕ್ತಪಡಿಸಿದರು.ಸಂಘದ ಖಜಾಂಚಿ ಪ್ರಶಾಂತ ರೇವಣಕರ ವಂದಿಸಿದರು.
ವಿಸ್ಮಯ ನ್ಯೂಸ್, ಕುಮಟಾ