ಉತ್ತಮ ಭವಿಷ್ಯ ರೂಪಿಸಿಕೊಳ್ಳಲು, ಈಗಿನಿಂದಲೇ ಸಮಯಕ್ಕೆ ಮಹತ್ವ ನೀಡಿ : ಡಾ. ಗಣೇಶ ನಾಗ್ವೇಕರ ಕಲಾ ಮತ್ತು ವಾಣಿಜ್ಯ ವಿದ್ಯಾಲಯದಲ್ಲಿ ನಡೆದ ವಾರ್ಷಿಕ ಸಮ್ಮೇಳನ

ಅಂಕೋಲಾ : ವಿದ್ಯಾರ್ಥಿಗಳು ಭವಿಷ್ಯದಲ್ಲಿ ಉತ್ತಮ ಸಾಧನೆ ಮಾಡಲು ಸಮಯಕ್ಕೆ ಹೆಚ್ಚು ಮಹತ್ವ ನೀಡಬೇಕು. ಇರುವ ಸಮಯವನ್ನು ಸರಿಯಾಗಿ ಸದುಪಯೋಗಪಡಿಸಿಕೊಂಡು ತಮ್ಮ ಜೀವನ ರೂಪಿಸಿಕೊಳ್ಳ ಬೇಕು ಎಂದು ಕೆ.ಎಲ್.ಇ. ಡಿ.ಎಡ್. ಕಾಲೇಜಿನ ಉಪನ್ಯಾಸಕ ಡಾ. ಗಣೇಶ ನಾಗ್ವೇಕರ ಹೇಳಿದರು. ಕೆ.ಎಲ್.ಇ. ಸಂಸ್ಥೆಯ ಕಲಾ ಹಾಗೂ ವಾಣಿಜ್ಯ ಮಹಾವಿದ್ಯಾಲಯದ 2024 – 25 ನೇ ಸಾಲಿನ ವಾರ್ಷಿಕ ಸ್ನೇಹ ಸಮ್ಮೇಳನ ಹಾಗೂ ಅಂತಿಮ ವರ್ಷದ ವಿದ್ಯಾರ್ಥಿಗಳ ಬೀಳ್ಕೊಡುಗೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದ ಅವರು, ವಿದ್ಯಾರ್ಥಿ ಜೀವನದಲ್ಲಿ ರೂಡಿಸಿಕೊಂಡ ಸಮಯ ಪರಿಪಾಲನೆ , ಶಿಸ್ತು ಮತ್ತಿತರ ಉತ್ತಮ ಅಂಶಗಳು ಭವಿಷ್ಯದ ಭದ್ರ ಬುನಾದಿಗೆ ನಾಂದಿ ಎಂದರು.
ಕಾಲೇಜಿನ ನಿವೃತ್ತ ಪ್ರಾಚಾರ್ಯೆ ಡಾ. ಸ್ಮಿತಾ ಪಾತರಪೇಕರ ಮಾತನಾಡಿ, ವಿದ್ಯಾರ್ಥಿಗಳು ಉನ್ನತ ವ್ಯಾಸಂಗ ಮಾಡುವುದರ ಜೊತೆಗೆ ಅನೇಕ ಸ್ಪರ್ಧಾತ್ಮಕ ಪರೀಕ್ಷೆಗಾಗಿ ಹೆಚ್ಚಿನ ಸಮಯ ಓದಿನ ಕಡೆಗೆ ನೀಡಬೇಕೆಂದರು. ಪ್ರಾಚಾರ್ಯ ಅಶ್ವತ್ಥನಾರಾಯಣ ಹೆಗಡೆ ಅಧ್ಯಕ್ಷತೆ ವಹಿಸಿ ಮಾತನಾಡಿ, ವಿದ್ಯಾರ್ಥಿಗಳು ಸತತ ಅಧ್ಯಯನಶೀಲರಾಗಿ ಭವಿಷ್ಯದಲ್ಲಿ ಯಶಸ್ಸನ್ನು ಸಾಧಿಸಬೇಕೆಂದರು.
ಪ ಪೂ ಕಾಲೇಜಿನ ಪ್ರಾಚಾರ್ಯ ಸೋಮಶೇಖರ ನಾಯಕ ಮಾತನಾಡಿದರು. ಉಪನ್ಯಾಸಕಿ ಜ್ಞಾನೇಶ್ವರಿ ನಾಯ್ಕ ಸ್ವಾಗತಿಸಿದರು. ಶಿಲ್ಪಾ ಶಾನಭಾಗ ವಂದಿಸಿದರು. ವಿದ್ಯಾ ತಾಂಡೇಲ್ ವರದಿ ವಾಚಿಸಿದರು. ಕಾಂಚನಾ ನಾಯ್ಕ ಪರಿಚಯಿಸಿದರು. ಕಲ್ಪನಾ ಗೌಡ ನಿರೂಪಿಸಿದರು. ವಿದ್ಯಾರ್ಥಿಗಳು ಹಾಗೂ ಬೋಧಕೇತರ ಸಿಬ್ಬಂದಿಗಳು ಉಪಸ್ಥಿತರಿದ್ದರು.
ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ