
ಅಂಕೋಲಾ: ತನಗೆ ಯಾರೋ ಹೊಡೆಯಲು ಬರುತ್ತಿದ್ದಾರೆ, ಹೀಗಾಗಿ ಬಚ್ಚಿಟ್ಟುಕೊಳ್ಳುತ್ತೇನೆ ಅಂತಾ ಹೇಳಿಕೊಳ್ಳುತ್ತಿದ್ದ ವ್ಯಕ್ತಿಯೋರ್ವ ತಾನು ವಾಸವಾಗಿರುವ ಶೆಡ್ಡಿನಿಂದ ಓಡಿಹೋದವ ಮಾರನೇ ದಿನ ಸಮುದ್ರ ಕಿನಾರೆ ಬಳಿ ಮೃತದೇಹವಾಗಿ ಪತ್ತೆಯಾಗಿದ್ದಾನೆ ಹೊರ ರಾಜ್ಯದ ವ್ಯಕ್ತಿಯೋರ್ವ, ತಮ್ಮ ರಾಜ್ಯದ ಇತರೆ ಕಾರ್ಮಿಕರೊಂದಿಗೆ ಅಂಕೋಲಾ ತಾಲೂಕಿನ ಬೋಟ್ ಮಾಲಕರ ಬಳಿ ಮೀನುಗಾರಿಕಾ ಕೆಲಸಕ್ಕೆ ಬಂದು ಉಳಿದುಕೊಂಡಿದ್ದ.
ಜುಲೈ 29 ರಂದು ಮಧ್ಯಾಹ್ನ ಸುಮಾರು 12 ಗಂಟೆಗೆ ತನಗೆ ಯಾರೋ ಹೊಡೆಯಲು ಬರುತ್ತಿದ್ದಾರೆ ಅಂತ ಹೇಳುತ್ತಾ ಮಾನಸಿಕನಂತೆ ತನ್ನಷ್ಟಕ್ಕೆ ತಾನು ಮಾತನಾಡುತ್ತಾ ಇದ್ದವನು,ತಾನು ಎಲ್ಲಿಯಾದರೂ ಬಚ್ಚಿಟ್ಟುಕೊಳ್ಳುತ್ತೇನೆ ಅಂತ ಹೇಳಿ ಅಂಕೋಲಾ ತಾಲೂಕಿನ ಹಾರವಾಡ ಗ್ರಾಮದ ತಾನು ಉಳಿದುಕೊಂಡಿದ್ದ ಶೆಡ್ ನಿಂದ ಓಡಿ ಹೋಗಿದ್ದ ಎನ್ನಲಾಗಿದ್ದು,ಸಂಗಡ ಇದ್ದವರು ಹುಡುಕಾಟ ನಡೆಸಿದ್ದರು. ಆದರೆ ಅಂದು ಯಾರ ಕಣ್ಣಿಗೂ ಕಾಣದ ಆ ವ್ಯಕ್ತಿ ಮಾರನೆ ದಿನ ಅಂದರೆ ಜುಲೈ 30 ರಂದು ಬೆಳಿಗ್ಗೆ 9 ಗಂಟೆ ಸುಮಾರಿಗೆ ಅಂಕೋಲಾ ತಾಲೂಕಿನ ಹಾರವಾಡ ತರಂಗ ಮೇಟ ಸಮುದ್ರ ದಂಡೆಯಲ್ಲಿ ಮೃತ ದೇಹವಾಗಿ ಪತ್ತೆಯಾಗಿದ್ದಾನೆ. ಛತ್ತಿಸ್ ಘಡ ಮೂಲದ ಮುನ್ನು ರಾಮ ತಂದೆ ಬುದ್ದು ರಾಮ (49) ಎಂಬಾತನೇ ಮೃತ ದುರ್ದೈವಿ.
ಈ ಕುರಿತು ಅಂಕೋಲಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು , ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ ಅಂಕೋಲಾ ಪೊಲೀಸರು ಕಾನೂನು ಕ್ರಮ ಮುಂದುವರಿಸಿದ್ದಾರೆ. ಸಮುದ್ರ ಕಿನಾರೆ ಮತ್ತು ದುರ್ಗಮ ಹಾದಿಯಲ್ಲಿ ಮೃತ ದೇಹವನ್ನು ಬಹು ದೂರದವರೆಗೆ ಹೊತ್ತು ತಂದು,ಸಾಮಾಜಿಕ ಕಾರ್ಯಕರ್ತ ವಿಜಯಕುಮಾರ್ ವೈ ನಾಯ್ಕ್ ಇವರ ರಕ್ಷಕ ಆಂಬುಲೆನ್ಸ್ ವಾಹನದ ಮೂಲಕ ಮೃತ ದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಅಂಕೋಲಾ ತಾಲೂಕಾಸ್ಪತ್ರೆ ಶವಗಾರಕ್ಕೆ ಸಾಗಿಸಲಾಯಿತು. ಪಿಎಸ್ಐ ಉದ್ದಪ್ಪ ಧರೆಪ್ಪನವರ ,ಸಿಬ್ಬಂದಿ ಸಲೀಂ ಮೊಕಾಶಿ , ರವಿ ಮತ್ತಿತರರು ಹಾಜರಿದ್ದು ಕರ್ತವ್ಯ ನಿರ್ವಹಿಸಿದರು. ಸುಧಾಕರ್ ತಾಂಡೇಲ ಮತ್ತು ಸ್ಥಳೀಯರು ಹಾಗೂ ಮೃತನ ಸಂಗಡ ಉಳಿದುಕೊಂಡಿದ್ದ ಹೊರ ರಾಜ್ಯದ ಕಾರ್ಮಿಕರು ಸಹಕರಿಸಿದರು. ಘಟನೆ ಸಂಭವಿಸಿದ ಕುರಿತಂತೆ ಮತ್ತಷ್ಟು ಹೆಚ್ಚಿನ ಮಾಹಿತಿಗಳು ತಿಳಿದು ಬರಬೇಕಿದೆ.
ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ