ಅಂಕೋಲಾದಲ್ಲಿಂದು ಕೇಸ್ 12 : ಬಿಡುಗಡೆ 14 : ಸಕ್ರಿಯ 80

ಎಸ್.ಎಸ್.ಎಲ್.ಸಿ ಪೂರಕ ಪರೀಕ್ಷೆಗೆ ಹಾಜರಾದ 52 ವಿದ್ಯಾರ್ಥಿಗಳು
ಸರ್ಕಾರಿ ಆಸ್ಪತ್ರೆಗೆ ಎಸಿ ಭೇಟಿ : ಬಡ ಕುಟುಂಬಕ್ಕೆ ‘ಆಧಾರ’ದ ಭರವಸೆ

ಅಂಕೋಲಾ : ತಾಲೂಕಿನಲ್ಲಿ ಬುಧವಾರ ಒಟ್ಟೂ 12 ಹೊಸ ಕೋವಿಡ್ ಕೇಸಗಳು ದಾಖಲಾಗಿದೆ. ಅವುಗಳಲ್ಲಿ 2 ಪ್ರಕಣಗಳು ಆಯಾ ವ್ಯಾಪ್ತಿಯ ಈ ಹಿಂದಿನ ಸೊಂಕಿತರ ಸಂಪರ್ಕದಿಂದ ಬಂದಿರುವ ಸಾಧ್ಯತೆ ಇದ್ದು, ಉಳಿದ ಇನ್ನೊಂದು ಪ್ರಕರಣ ಜ್ವರ ಲಕ್ಷಣಗಳಿಂದ ಕೂಡಿದ ಐ.ಎಲ್.ಐ ಮಾದರಿ ಎನ್ನಲಾಗಿದೆ.

ಇಂದು ಹಟ್ಟಿಕೇರಿ, ಅವರ್ಸಾ ಮತ್ತು ಪುರ್ಲಕ್ಕಿಬೇಣದ ವ್ಯಾಪ್ತಿಯಲ್ಲಿ ತಲಾ 1 ಪ್ರಕರಣ ಪತ್ತೆಯಾಗಿದೆ. ಸೊಂಕು ಮುಕ್ತರಾದ 14 ಜನರನ್ನು ಬಿಡುಗಡೆಗೊಳಿಸಲಾಗಿದ್ದು, ಹೋಂ ಐಸೋಲೇಶನ್‍ನಲ್ಲಿರುವ 49 ಮಂದಿ ಸಹಿತ ಒಟ್ಟೂ 80 ಪ್ರಕರಣ ಸಕ್ರಿಯಾಗಿದೆ.

ಗಂಟಲು ದ್ರವ ಪರೀಕ್ಷೆ

ತಾಲೂಕಿನ ವಿವಿಧಡೆಯಿಂದ ಇಂದು ಒಟ್ಟೂ 119 ಜನರ ಗಂಟಲು ದ್ರವ ಮಾದರಿ ಸಂಗ್ರಹಿಸಿ ಪರೀಕ್ಷೆಗೊಳಪಡಿಸಲಾಗಿದೆ. ಸೋಂಕು ಪ್ರಕರಣ ಕಾಣಿಸಿಕೊಂಡ ಸ್ಥಳಗಳ ಸುತ್ತಮುತ್ತ, ಅಥವಾ ಸೋಂಕಿತರ ಸಂಪರ್ಕಿತರ ಗಂಟಲುದ್ರವ ಮಾದರಿ ಸಂಗ್ರಹಿಸಿ ಪರೀಕ್ಷೆಗೊಳಪಡಿಸುವುದು, ಎಲ್ಲರ ಆರೋಗ್ಯ ಕಾಳಜಿಯಿಂದ ಅವಶ್ಯವಿದ್ದು, ಆ ಕುರಿತಾಗಿ ಆರೋಗ್ಯ ಇಲಾಖೆ ಸಿಬ್ಬಂದಿಗಳು ಸುರಿವ ಮಳೆಯನ್ನು ಲೆಕ್ಕಿಸದೇ ಕರ್ತವ್ಯ ನಿರ್ವಹಿಸುತ್ತಿದ್ದಾರೆ.

ಈ ನಡುವೆ ಕೆಲವೆಡೆ ಅನಗತ್ಯ ಆತಂಕ ಇಲ್ಲವೇ ತಪ್ಪು ತಿಳುವಳಿಕೆಯಿಂದ ಜನತೆ ಗಂಟಲುದ್ರವ ಪರೀಕ್ಷೆಗೆ ಒಳಪಡಲು ಹಿಂಜರಿಯುತ್ತಿದ್ದು, ಆರೋಗ್ಯ ಇಲಾಖೆ ಜೊತೆ ನಿರೀಕ್ಷಿತ ಮಟ್ಟದ ಸಹಕಾರ ನೀಡುತ್ತಿಲ್ಲಾ ಎನ್ನುವ ಮಾತುಗಳು ಅಲ್ಲಲ್ಲಿ ಕೇಳಿ ಬರುತ್ತಿದೆ. ಸಮುದಾಯದ ಆರೋಗ್ಯ ಕಾಳಜಿಯಿಂದ ಪರಸ್ಪರರು ಸಹಕರಿಸಿ, ಹೊಂದಾಣಿಕೆಯಿಂದ ಕರೊನಾ ವಿರುದ್ಧದ ಹೋರಾಟಕ್ಕೆ ಬೆಂಬಲಿಸಬೇಕಿದೆ.

ಎಸ್.ಎಸ್.ಎಲ್.ಸಿ ಪೂರಕ ಪರೀಕ್ಷೆ :

ಎಸ್.ಎಸ್.ಎಲ್.ಸಿ ಪೂರಕ ಪರೀಕ್ಷೆಯ 3ನೇ ದಿನವಾದ ಇಂದು ಸಮಾಜವಿಜ್ಞಾನ ಪರೀಕ್ಷೆ ಬರೆಯಲು ನೋಂದಾಯಿಸಿಕೊಂಡಿದ್ದ ಒಟ್ಟು 56 ವಿದ್ಯಾರ್ಥಿಗಳ ಪೈಕಿ, 52 ವಿದ್ಯಾರ್ಥಿಗಳು ಹಾಜರಾದರೆ, ನಾನಾ ಕಾರಣಗಳಿಂದ 4 ವಿದ್ಯಾರ್ಥಿಗಳು ಗೈರಾಗಿದ್ದಾರೆ. ನಿನ್ನೆ ನಡೆದ ಪ್ರಥಮ ಭಾಷೆ ಕನ್ನಡ ಪರೀಕ್ಷೆಗೆ ನೋಂದಾಯಿಸಿಕೊಂಡಿದ್ದ 5 ವಿದ್ಯಾರ್ಥಿಗಳ ಪೈಕಿ 3 ವಿದ್ಯಾರ್ಥಿಗಳು ಹಾಜರಾಗಿದ್ದರು.

ಹವಾಮಾನ ಮುನ್ಸೂಚನೆಯಂತೆ ಸಪ್ಟಂಬರ 23ರ ವರೆಗೆ ಭಾರಿ ಮಳೆಯ ಸಾಧ್ಯತೆ ಇತ್ತಾದರೂ, ತಾಲೂಕಿನಲ್ಲಿ ನಿನ್ನೆ ಮತ್ತು ಇಂದು ಸ್ವಲ್ಪ ಪ್ರಮಾಣದಲ್ಲಿಯಷ್ಟೇ ಸುರಿಯುವ ಮೂಲಕ ಬಿಡುವು ನೀಡಿದ್ದು, ಸತತ ಮಳೆಯಿಂದ ಬೇಸರಗೊಂಡಿದ್ದ ರೈತಾಪಿ ವರ್ಗ ಮತ್ತು ಜನತೆ ಕೊಂಚ ನಿರಾಳರಾಗುವಂತೆ ಮಾಡಿದೆ.

ಸರ್ಕಾರಿ ಆಸ್ಪತ್ರೆಗೆ ಎಸಿ ಭೇಟಿ :

ಉಪವಿಭಾಗಾಧಿಕಾರಿ ಅಜೀತ್ ಎಂ ಅವರು, ತಾಲೂಕಾ ಸರ್ಕಾರಿ ಆಸ್ಪತ್ರೆಗೆ ಭೇಟಿ ನೀಡಿ, ವೈದ್ಯರೊಂದಿಗೆ ಸಮಾಲೋಚನೆ ನಡೆಸಿದರು. ಕೋವಿಡ್ ವಾರ್ಡ ಸೇರಿದಂತೆ ಆಸ್ಪತ್ರೆಯ ವ್ಯವಸ್ಥೆಗಳ ಬಗ್ಗೆ ಚರ್ಚಿಸಿ ಸೂಕ್ತ ಸಲಹೆ ನೀಡಿದರು. ಕಳೆದ ಒಂದುವರೆ ವರ್ಷಗಳಿಂದ ಸರ್ಕಾರಿ ಆಸ್ಪತ್ರೆಯಲ್ಲಿಯೇ ಚಿಕಿತ್ಸೆ ಪಡೆಯುತ್ತಿರುವ ಬಡ ಹೆಣ್ಣು ಮಗಳೊಬ್ಬಳ ನೋವಿನ ಕಥೆಯನ್ನು ಆಲಿಸಿದರು ಎಸಿ ಅಜೀತ್ ಅವರು, ಸರ್ಕಾರದಿಂದಾಗುವ ಎಲ್ಲಾ ಸಹಾಯದ ಭರವಸೆ ನೀಡಿದರಲ್ಲದೇ, ವೈಯಕ್ತಿಕವಾಗಿಯೂ ಸಹಾಯ ಮಾಡುವುದಾಗಿಯೂ ತಿಳಿಸಿದರು.

ಈವರೆಗೂ ಆಧಾರ ಕಾರ್ಡ ಹೊಂದಿರದ ಆಕೆಗೆ ಆಧಾರ ಕಾರ್ಡ ತಕ್ಷಣ ದೊರೆಯುವಂತಾಗಲು ಸೂಕ್ತ ಕ್ರಮ ಕೈಗೊಳ್ಳುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು. ಈ ಸಂದರ್ಭದಲ್ಲಿ ತಹಸೀಲ್ದಾರ ಉದಯ ಕುಂಬಾರ, ಪುರಸಭೆ ಮುಖ್ಯಾಧಿಕಾರಿ ಬಿ. ಪ್ರಹ್ಲಾದ, ತಾಲೂಕಾ ಆರೋಗ್ಯಾಧಿಕಾರಿ ಡಾ.ಅರ್ಚನಾ ನಾಯ್ಕ, ತಾಲೂಕಾ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ. ಮಹೇಂದ್ರ ನಾಯಕ, ವೈದ್ಯರಾದ ಈಶ್ವರಪ್ಪ, ರಾಜೇಶ, ಸಂತೋಷ ಕುಮಾರ, ರಮೇಶ ಮತ್ತಿತರರು ಸೇರಿದಂತೆ ಆರೋಗ್ಯ ಇಲಾಖೆ ನೌಕರರು ಹಾಜರಿದ್ದರು.

ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ.

Exit mobile version