ಗೋಕರ್ಣ: ಕರೊನಾ ಹಿನ್ನಲೆಯಲ್ಲಿ ಸಾರ್ವಜನಿಕರಿಗೆ ದರ್ಶನ ಅವಕಾಶವನ್ನು ನಿಲ್ಲಿಸಲಾಗಿದ್ದ ಪುರಾಣ ಪ್ರಸಿದ್ಧ ಗೋಕರ್ಣ ಮಹಾಬಲೇಶ್ವರ ದೇವಸ್ಥಾನವು ಇಂದು ಭಕ್ತರಿಗೆ ತೆರೆದುಕೊಂಡಿದೆ. ಪ್ರವಾಸಿಗರು, ಭಕ್ತರು ಈ ಹಿಂದಿನಂತೆ ಆತ್ಮಲಿಂಗದ ದರ್ಶನ ಪಡೆಯಬಹುದಾಗಿದೆ.
ಇಂದಿನಿಂದ ದೇವಸ್ಥಾನದಲ್ಲಿ ವಿಶೇಷ ಪೂಜೆ ಸೇರಿದಂತೆ ಎಲ್ಲ ಸೇವಾವಕಾಶಗಳು ಪ್ರಾರಂಭವಾಗಿದೆ. ಕರೊನಾ ವೈರಸ್ ಸಂಬಂಧ ದೇಶದಲ್ಲಿ ಲಾಕ್‍ಡೌನ್ ಘೋಷಣೆಯಾದ ಬಳಿಕ ದೇಗುಲಕ್ಕೆ ಸಾರ್ವಜನಿಕರ ಪ್ರವೇಶವನ್ನು ನಿಷೇಧಿಸಲಾಗಿತ್ತು. ದೇಗುಲವು ಆರು ತಿಂಗಳಿನ ಬಳಿಕ ಸಾಮಾನ್ಯ ಭಕ್ತರಿಗೆ ಇಂದು ತೆರೆದುಕೊಳ್ಳುತ್ತಿದೆ.
ದೇವಸ್ಥಾನಕ್ಕೆ ಭೇಟಿ ನೀಡುವ ಭಕ್ತರು ಕಟ್ಟುನಿಟ್ಟಾಗಿ ಅಂತರ ಕಾಯ್ದುಕೊಳ್ಳಬೇಕು. ಮುಖಗವಸು ಧರಿಸುವುದು, ನೈರ್ಮಲ್ಯ ಕಾಪಾಡುವುದು ಸೇರಿದಂತೆ ಸರ್ಕಾರದ ಮಾರ್ಗಸೂಚಿಗಳನ್ನು ಪಾಲಿಸಬೇಕು ಎಂದು ಆಡಳಿತ ಮಂಡಳಿ ಅಧ್ಯಕ್ಷ ಜಿ.ಕೆ.ಹೆಗಡೆ ಮತ್ತು ಉಪಾಧಿವಂತ ಮಂಡಳಿ ಸದಸ್ಯರು ಮಾಹಿತಿ ನೀಡಿದ್ದಾರೆ.
ವಿಸ್ಮಯ ನ್ಯೂಸ್ ಗೋಕರ್ಣ