Big News
Trending

‘ಸಂಗೀತಪುರ’ ಎಂಬ ಹೆಸರನ್ನು ಪಡೆದ ಐತಿಹಾಸಿಕ ಸ್ಥಳವಿದು

ಭಟ್ಕಳ : ಮೆಲ್ನೋಟಕ್ಕೆ ಕಾಂಕ್ರೀಟ್ ಕಾಡು ಅಂತ ಅನ್ನಿಸಿದ್ದರೂ ಐತಿಹಾಸಿಕ ಹಿನ್ನೆಲೆಯಲ್ಲಿ ನೋಡಿದಾಗ ಅನೇಕ ಸ್ಮರಣೀಯ ಸ್ಮಾರಕಗಳನ್ನು ತನ್ನ ಗರ್ಭದಲ್ಲಿ ಹುದುಗಿಸಿಕೊಂಡಿರುವಂತದ್ದು ಕಾಣಬಹುದಾಗಿದೆ. ಮೂಡಭಟ್ಕಳದ ಕೇತಪ್ಪಯ್ಯ ನಾರಾಯಣ ದೇವಾಲಯ, ಭಟ್ಕಳದ ಹೃದಯ ಭಾಗದಲ್ಲಿರುವ ಮೋಹಿನಿ ಬಸದಿ, ಸೋನಾರಕೇರಿಯಲ್ಲಿನ ವಿರುಪಾಕ್ಷ ದೇವಾಲಯ, ಚೋಳೇಶ್ವರ ದೇವಾಲಯ ಹೀಗೆ ಹತ್ತು ಹಲವು ಇಂತಹ ಅನೇಕ ಸ್ಮಾರಕಗಳ ನಡುವೆ ಅತ್ಯಂತ ಗಮನಸೆಳೆಯುವಂತದ್ದು ಹಾಡವಳ್ಳಿಯ ಸ್ಮಾರಕಗಳು.ಹಾಡವಳ್ಳಿ ಎಂಬ ಪ್ರದೇಶ ಆ ಕಾಲದಲ್ಲಿ ಸಂಗೀತ, ಸಾಹಿತ್ಯ ನೃತ್ಯ ಶಿಲ್ಪಕಲೆಗಳ ನೆಲೆಯಾದಂತದ್ದು. ‘ಸಂಗೀತಪುರ’ ಎಂಬ ಹೆಸರನ್ನು ಪಡೆದ ಐತಿಹಾಸಿಕ ಸ್ಥಳ. ಹಾಗೂ ಜೈನರ ಪ್ರಮುಖ ಕೇಂದ್ರವೂ ಹೌದು.  


 ಹಾಡವಳ್ಳಿಯನ್ನು ಹಿಂದೆ ಸಾಳ್ವರು ತಮ್ಮ ಎರಡನೇ  ರಾಜಧಾನಿಯಾಗಿ ಮಾಡಿಕೊಂಡು ಆಳ್ವಿಕೆ ನಡೆಸಿದ್ದರು ಎಂದು ಹೇಳಲಾಗುತ್ತದೆ.  ಇಲ್ಲಿ ಗತಕಾಲದ ಕುರುಹುಗಳಾಗಿ 24 ತೀರ್ಥಂಕರರಿರುವ ಜೈನ ಬಸದಿ ಆಕರ್ಷಣೆಯಾಗಿ ಉಳಿದುಕೊಂಡಿರುವುದನ್ನು ಕಾಣಬಹುದು. ಈ ಮೂರ್ತಿಗಳು ಕಾಲವನ್ನೂ ಲೆಕ್ಕಿಸದೇ ನಿರ್ಲಿಪ್ತವಾಗಿ, ಧ್ಯಾನಾಸಕ್ತವಾಗಿ ಕುಳಿತಿರುವಂತೆ ಭಾಸವಾಗುತ್ತವೆ. ಸುಮಾರು 500 ವರ್ಷಗಳ ಹಿಂದೆ ಇದೊಂದು ಪ್ರತಿಷ್ಠಿತ ನಗರವಾಗಿತ್ತು. ಕನ್ನಡ ಪ್ರಥಮ ವಯ್ಯಾಕರಣಿ ಖ್ಯಾತಿಯನ್ನು ಗಳಿಸಿದ್ದ ಜೈನಮುನಿ ಭಟ್ಟಾಕಳಂಕ ಇಲ್ಲಿ ವಾಸವಾಗಿದ್ದ ಎನ್ನುವುದಕ್ಕೆ ಇತಿಹಾಸದಲ್ಲಿ ಉಲ್ಲೇಖಗಳು ಕಾಣಸಿಗುತ್ತದೆ.

ಈತನ ಶಬ್ಧಾನುಶಾಸನ ಕೇಶಿರಾಜನ ಶಬ್ದಮಣಿದರ್ಪಣ ಕ್ಕೂ ಮೂಲ ಎನ್ನುವುದಕ್ಕೆ ಅನೇಕ ಸಾಕ್ಷಿಗಳು ದೊರೆತಿವೆ ಹಾಗೂ ಕೇಶಿರಾಜನ ಶಬ್ದಮಣಿದರ್ಪಣ ದಲ್ಲಿ ಇದರ ಉಲ್ಲೇಖ ವನ್ನು ಕಾಣಬಹುದು. ಅಂಕನಕಟ್ಟೆಯಲ್ಲಿ ರಾಣಿಯ ಅರಮನೆಯೂ ಇದ್ದೀತು  ಎಂಬ ಪ್ರತೀತಿ ಕೂಡ ಇದೆ. ಈ ಹಳ್ಳಿಯ ಪಕ್ಕದಲ್ಲಿ ಎರಡು ಗುಡ್ಡಗಳಿದ್ದು ಚಂದ್ರಗಿರಿ ಮತ್ತು ಇಂದ್ರಗಿರಿ ಎಂದು ಕರೆಯಲಾಗುತ್ತದೆ. ಇವೆರಡೂ ಈ ಹಿಂದೆ ಪ್ರಮುಖ ಜೈನ ಕೇಂದ್ರಗಳಾಗಿದ್ದವು. ಇಂದ್ರಗಿರಿಯಲ್ಲಿ ಜಿನಾದ ಎರಡು ಹೆಜ್ಜೆಗುರುತುಗಳನ್ನು ಹೊತ್ತ ಕಲ್ಲುಗಳನ್ನು ಕಾಣಬಹುದಾದರೆ,ಚಂದ್ರಗಿರಿಯ ಮೇಲೆ ದೇವಾಲಯಕ್ಕಿಂತ ಭಿನ್ನವಾದ ಅತ್ಯಂತ ಆಕರ್ಷಕವಾದ ಚಂದ್ರನಾಥ ಬಸದಿಯನ್ನು ನೋಡಬಹುದಾಗಿದೆ. ವಿಜಯನಗರ ಸಾಮ್ರಾಜ್ಯದ ಶೈಲಿಯನ್ನೇ ಹೋಲುವ ಚಂದ್ರನಾಥ ಬಸದಿಯನ್ನು 24 ಸ್ತಂಭಗಳು ಬೆಂಬಲಿಸುತ್ತವೆ, ಒಳಗೆ ಸುಂದರವಾದ ಕೆತ್ತನೆಗಳನ್ನು ಹೊಂದಿರುವ ಬಾಗಿಲುಗಳು ಮತ್ತು ಸ್ತಂಭಗಳಿವೆ.


ಇಂದು ಈ ಚಂದ್ರಗಿರಿ, ಇಂದ್ರಗಿರಿಯ ಬೆಟ್ಟಗಳ ಸೌಂದರ್ಯ ಪ್ರವಾಸಿಗರಿಗೆ ಪ್ರಮುಖ ಆಕರ್ಷಣೆ. ಚಾರಣಿಗರಿಗಂತೂ ಸ್ವರ್ಗ ಸುಖ.ಒಂದು ನಂಬುಗೆಯ ಪ್ರಕಾರ ಚಂದ್ರಗಿರಿಯ ಮೇಲೆ ಕುಳಿತು ಹಾಡುತ್ತಿದ್ದ ತತ್ವಪದಗಳ ಮೇಲೆ ಇಂದ್ರಗಿರಿಯಲ್ಲಿ ಕುಳಿತ ವಿದ್ವಾಂಸರು ವ್ಯಾಖ್ಯಾನ ಮಾಡುತ್ತಿದ್ದರು ಎಂದು ಹೇಳಲಾಗುತ್ತದೆ. ಇದಕ್ಕೆಲ್ಲ ಗುಮ್ಮಟದಂತಹ ವಿಶೇಷ ಧ್ವನಿ ವ್ಯವಸ್ಥೆಯನ್ನು ಬೆಟ್ಟದ ಮೇಲೆ ನಿರ್ಮಿಸಿರುವುದು ಕಾರಣವಿರಬಹುದು ಎಂದು ಹೇಳಲಾಗುತ್ತದೆ.
ಇಲ್ಲಿನ ಪ್ರಸಿದ್ದ ದೇವಾಲಯ ಪದ್ಮಾವತಿ ಅಮ್ಮನವರ ದೇವಾಲಯ. ನವೀಕರಿಸಿದ ಪದ್ಮಾವತಿ ದೇವಸ್ಥಾನದಲ್ಲಿ 24 ತೀರ್ಥಂಕರ ಪ್ರತಿಮೆಗಳನ್ನು ಪ್ರದರ್ಶಿಸಲಾಗಿದೆ. ಈ ಪ್ರತಿಮೆಗಳನ್ನು ಉತ್ತಮವಾದ ಕಪ್ಪು ಹೊಳಪು ಕಲ್ಲಿನಲ್ಲಿ ಕೆತ್ತಲಾಗಿದೆ, ಪ್ರತಿಯೊಂದೂ ಅರ್ಧ ಮೀಟರಿನಷ್ಟು ಎತ್ತರವಿದೆ.

ಇಲ್ಲಿನ ಜೈನಕೇರಿ ಎಂಬಲ್ಲಿ ಕಾಳುಮೆಣಸಿನ ಸಂಗ್ರಹಣೆಗಾಗಿ 900 ಬಾವಿಗಳನ್ನು ರಾಣಿ  ಚೆನ್ನಭೈರಾದೇವಿ ತನ್ನ ಆಳ್ವಿಕೆಯಲ್ಲಿ ನಿರ್ಮಿಸಿದ್ದಳು ಎಂಬುದಕ್ಕೆ ಆಧಾರಗಳು ಇವೆ. ಇಂದಿಗೂ ಕೆಲವು ಬಾವಿಗಳನ್ನು ನಾವು  ಕಾಣಬಹುದಾಗಿದೆ. ಅವು ಕುರುಹುಗಳಾಗಿ ಪರಿವರ್ತನೆಗೊಂಡಿವೆ. 
ಇವೆಲ್ಲವುಗಳ ನಡುವೆ ಈ ಹಳ್ಳಿಯನ್ನು ಭೇಟಿ ಮಾಡಿದಾಗ ಗತಕಾಲದ ಇತಿಹಾಸದ ಪುಟಗಳು ಒಂದೊಂದಾಗಿ ತೆರೆದುಕೊಳ್ಳುತ್ತಾ ಸಾಗುತ್ತವೆ. ಇಂದು ಇದೊಂದು‌  ಸಾಮಾನ್ಯ ಹಳ್ಳಿಯಾಗಿ ಇದ್ದರೂ ಸಹ ಅನೇಕ ಇತಿಹಾಸದ ಅಧ್ಯಯನಕಾರರು ಚಾರಣಪ್ರಿಯರು ಜೈನ ಧರ್ಮದ ಬಗ್ಗೆ ಶೃದ್ದೆಯುಳ್ಳವರು ಆಗಾಗ ಭೇಟಿ ನೀಡುತ್ತಲೇ ಇರುತ್ತಾರೆ. ಭಟ್ಕಳ- ಸಾಗರ ರಸ್ತೆಯಲ್ಲಿ ಭಟ್ಕಳದಿಂದ ಸುಮಾರು 16ಕಿ.ಮೀ. ದೂರದಲ್ಲಿದೆ ಈ ಹಾಡುವಳ್ಳಿ. ಮುರುಡೇಶ್ವರ ದೇವಾಲಯದಿಂದ ರಸ್ತೆ ಮಾರ್ಗವಾಗಿ ೩೦ ಕಿ.ಮೀ.ಮಾತ್ರ. ಹಾಗಿದ್ದ ಮೇಲೆ ಸಂಗೀತ ಸಾಂಸ್ಕೃತಿಕ ಐತಿಹಾಸಿಕ ನೆಲೆಯಾದ ಈ ಹಾಡವಳ್ಳಿಗೆ ತಾವೂ ಒಮ್ಮೆ ಭೇಟಿ ನೀಡಬಹುದಲ್ಲವೇ.

ಲೇಖನ – ಉಮೇಶ ಮುಂಡಳ್ಳಿ ಭಟ್ಕಳ
ಸಾಹಿತಿಗಳು, ಬರಹಗಾರರು
9945840552

Back to top button