350 ಕೆಜಿ ತೂಕ ಹಾಗೂ 11 ಅಡಿ ಉದ್ದ
ಗೋಕರ್ಣದ ತದಡಿಯಲ್ಲಿ ಬಲೆಗೆ ಬಿದ್ದಿದ್ದ ಶಾರ್ಕ್
ಗೋಕರ್ಣ: ಮೀನುಗಾರರ ಬಲೆಗೆ ಬಿದ್ದಿದ್ದ ಬೃಹತ್ ತಿಮಿಂಗಲ ವ್ಹೇಲ್ ಶಾರ್ಕ್ ವನ್ನು ವನ್ಯಜೀವಿ ಸಂರಕ್ಷಣಾ ಕಾಯ್ದೆಯಡಿ ಬರುವುದರಿಂದ ಹಾಗೂ ಯಾರೂ ಕೂಡ ಆಹಾರಕ್ಕಾಗಿ ಬಳಸದ ಕಾರಣ ವಾಪಸ್ಸು ಕಡಲಿಗೆ ಬಿಟ್ಟಿರುವ ಘಟನೆ ಕುಮಟಾ ತಾಲೂಕಿನ ಗೋಕರ್ಣದ ತಡದಿ ಬಂದರಿನಲ್ಲಿ ನಡೆದಿದೆ. ಆಳ ಸಮುದ್ರದಲ್ಲಿ ಮೀನುಗಾರಿಕೆಗೆ ತೆರಳಿದ್ದ ತದಡಿ ಭಾಗದ ಮೀನುಗಾರರಿಗೆ ಈ ಮೀನು ದೊರೆತಿದ್ದು, ಇದು ಬರೋಬ್ಬರಿ 350 ಕೆಜಿ ಹಾಗೂ 11 ಅಡಿ ಉದ್ದವಿದೆ. ಇದನ್ನು ಬೇಟೆಯಾಡುವುದು ಹಾಗೂ ಆಹಾರಕ್ಕಾಗಿ ಬಳಸುವುದು ಅಪರಾಧವಾದ ಕಾರಣ ಈ ಬಗ್ಗೆ ತಿಳಿದ ಮೀನುಗಾರರು ವಾಪಸ್ಸು ಕಡಲಿಗೆ ಬಿಟ್ಟಿದ್ದಾರೆ.
ಗುಜರಾತ್ ಕಡಲಿನಲ್ಲಿ ಹೆಚ್ಚಾಗಿ ಕಂಡುಬರುತ್ತಿದ್ದ ಇವು, ಅರಬ್ಬೀ ಸಮುದ್ರದಲ್ಲೂ ಕಾಣಸಿಗುತ್ತವೆ. ಆದರೆ, ಇದು ಇತ್ತೀಚೆಗೆ ಬಹಳ ಅಪರೂಪವಾಗಿವೆ. ಹೀಗಾಗಿ ಇವುಗಳ ಸಂರಕ್ಷಣೆಗಾಗಿ ಸರ್ಕಾರ ಯೋಜನೆಗಳನ್ನು ಹಾಕಿಕೊಂಡಿದೆ ಎಂದು ಕಡಲಜೀವ ವಿಜ್ಞಾನ ಕೇಂದ್ರದ ಡಾ.ಶಿವಕುಮಾರ್ ಹರಗಿ ತಿಳಿಸಿದ್ದಾರೆ. ವಿಶ್ವದ ಅತಿದೊಡ್ಡ ಮೀನುಗಳ ಪೈಕಿ ಇದು ಕೂಡ ಒಂದು ಎನ್ನಲಾಗಿದ್ದು, ಶಾಲಾ ಬಸ್‌ನ ಗಾತ್ರದವರೆಗೆ ಬೆಳೆಯುತ್ತವೆ ಎನ್ನಲಾಗಿದೆ. ಆದರೆ ಸಣ್ಣ ಸಮುದ್ರ ಜೀವಿಗಳನ್ನು ಮತ್ತು ಮೀನಿನ ಮೊಟ್ಟೆಗಳನ್ನು ತಿಂದು ಬದುಕುವ ಇವು, ನಿಧಾನವಾಗಿ ಈಜುತ್ತವೆ.
ವಿಸ್ಮಯ ನ್ಯೂಸ್, ಗೋಕರ್ಣ