ಕಾರವಾರ: ದೂರು ನೀಡಿದರು ನಿಲ್ಲದ ಅಕ್ರಮ ಕಲ್ಲು ಗಣಿಗಾರಿಕೆಯಿಂದಾಗಿ ಕಳೆದ ಹಲವು ವರ್ಷಗಳಿಂದ ನರಕಯಾತನೆ ಅನುಭವಿಸುತ್ತಿರುವ ಉತ್ತರಕನ್ನಡ ಜಿಲ್ಲೆಯ ರಾಮಗರದ ಜನತೆಗೆ ಇದೀಗ ಶಿವಮೊಗ್ಗದಲ್ಲಿ ನಡೆದ ಸ್ಪೋಟದ ದುರ್ಘಟನೆ ಮತ್ತೆ ಆತಂಕ ಸೃಷ್ಟಿಸಿದೆ. ಹತ್ತಾರು ಎಕರೇ ಪ್ರದೇಶದಲ್ಲಿ ಮನಸೋ ಇಚ್ಚೆ ಜಿಲೇಟಿನ್ ಸ್ಪೋಟಿಸಿ ಕಲ್ಲು ಗಣಿಗಾರಿಕೆ ನಡೆಸುತ್ತಿರುವ ಪರಿಣಾಮ ಮನೆಗಳು ಬಿರುಕು ಬಿಟ್ಟು ನಿತ್ಯವೂ ಭಯದಲ್ಲಿಯೇ ಬದುಕುತ್ತಿದ್ದಾರೆ.
ಶಿವಮೊಗ್ಗದ ಹುಣಸೋಡು ಕಲ್ಲುಕ್ವಾರಿಯಲ್ಲಿ ಜಿಲೇಟಿನ್ ಸ್ಫೋಟಗೊಂಡು ಭಾರಿ ಅನಾಹುತ ಸಂಭವಿಸಿದ ಬೆನ್ನಲ್ಲೆ ರಾಮನಗರದ ಆಡಾಳಿ, ಗೌಳಿವಾಡದಲ್ಲಿ ನಡೆಯುತ್ತಿರುವ ಕಲ್ಲುಗಣಿಗಾರಿಕಾ ಪ್ರದೇಶದ ಸುತ್ತಮುತ್ತಲಿನ ಜನರಿಗೆ ಇದೀಗ ಮತ್ತಷ್ಟು ಆತಂಕ ಶುರುವಾಗಿದೆ. ಈ ಭಾಗದಲ್ಲಿ 8 ಕಂಪನಿಗಳಿಗೆ ಕಲ್ಲು ಗಣಿಗಾರಿಕೆ ನಡೆಸಲು ಎಕರೆಗಟ್ಟಲೆ ಜಾಗ ನೀಡಲಾಗಿದೆ. ಇವುಗಳ ಪೈಕಿ ಬಹುತೇಕ ಕಂಪನಿಗಳು ಪರವಾನಿಗೆ ಪಡೆದ ಪ್ರದೇಶಗಳಿಗಿಂತಲೂ ಹೆಚ್ಚಾಗಿ ಕಾನೂನು ನಿಮಯ ಉಲ್ಲಂಘಿಸಿ ಹತ್ತಾರು ಎಕರೆ ಪ್ರದೇಶದಲ್ಲಿ ಕಲ್ಲು ಗಣಿಗಾರಿಕೆ, ಕ್ರಷರ್ ನಡೆಸುತ್ತಿವೆ. ಇನ್ನು ಭಾಗದಲ್ಲಿ ಬ್ಲಾಸ್ಟಿಂಗ್ ಕೂಡಾ ಮಿತಿ ಮೀರಿ ನಡೆಯುತ್ತಿದ್ದು, ಮಧ್ಯಾಹ್ನ ಹೊತ್ತಿನಲ್ಲೇ 5-6 ಬಾರಿ ನಿಯಮ ಮೀರಿ ಬ್ಲಾಸ್ಟಿಂಗ್ ನಡೆಸುತ್ತಿದ್ದಾರೆ.
ಈ ಬಗ್ಗೆ ಜಿಲ್ಲಾಡಳಿತ ಸಂಬಂಧಪಟ್ಟ ಇಲಾಖಾ ಅಧಿಕಾರಿಗಳಿಗೆ ಮಾಹಿತಿ ನೀಡಿದರು ಯಾರೊಬ್ಬರು ಗಮನ ಹರಿಸುತ್ತಿಲ್ಲ. ಮೊದಲು ಈ ಪ್ರದೇಶದಲ್ಲಿ ಕಲ್ಲು ಗಣಿಗಾರಿಕೆಗೆ ಅವಕಾಶ ನೀಡಿರುವುದೇ ತಪ್ಪು. ನಾವು ಕಾಳಿ ಜಲವಿದ್ಯುತ್ ಯೋಜನೆಗಾಗಿ ಸರ್ವಸ್ವವನ್ನು ತ್ಯಾಗ ಮಾಡಿದವರು. ನಮಗೆ ಪರ್ಯಾಯವಾಗಿ ರಾಮನಗರದ 100 ಎಕರೆ ಪ್ರದೇಶದಲ್ಲಿ ವಸತಿ ಕಲ್ಪಿಸಿದ್ದರು. ಆದರೆ ಈ ಪ್ರದೇಶ ಕಲ್ಲಿನಿಂದ ಕೂಡಿರುವ ಕಾರಣ ಗಣಿಗಾರಿಕೆ ನಡೆಸಲು ಹೊರ ರಾಜ್ಯದವರಿಗೆ ಅವಕಾಶ ನೀಡಿದ್ದಾರೆ. ಆದರೆ ಇವರು ಅಕ್ರಮ ಗಣೀಗಾರಿಕೆಯಿಂದಾಗಿ ಕೊಟ್ಯಾದೀಶರಾಗುತ್ತಿದ್ದು ಸಾಮಾನ್ಯ ಜನರು ನರಕಯಾತನೆ ಅನುಭವಿಸುತ್ತಿರುವುದಾಗಿ ಸ್ಥಳೀಯರು ಆರೋಪಿಸಿದ್ದಾರೆ.
ಇನ್ನು ಸೂಪಾಜಲಾಶಯದಿಂದ ನಿರಾಶ್ರಿತರಾದವರಿಗೆ 1981ರಲ್ಲಿ ರಾಮನಗರದಲ್ಲಿ ಪುನರ್ವಸತಿ ಕಲ್ಪಿಸಲಾಗಿತ್ತು. ಆದರೆ ಈ ಭೂಮಿಯನ್ನು ಕಲ್ಲುಗಣಿಗಾರಿಕೆಗೆ ನೀಡಿದ್ದು ಸರ್ಕಾರ ನಿಗದಿಪಡಿಸಿದ ಯಾವ ನಿಯಮವನ್ನೂ ಈ ಕಂಪನಿಗಳು ಪಾಲಿಸದ ಹಿನ್ನೆಲೆಯಲ್ಲಿ ಪ್ರತಿ ದಿನ ಇಲ್ಲಿನ ಜನರು ನರಳುವಂತೆ ಮಾಡಿದೆ. ಸ್ಪೋಟದ ತೀವ್ರತೆಗೆ ಗ್ರಾಮದ ಮನೆಗಳು ಬಿರುಕು ಬಿಟ್ಟುದ್ದು, ಕೃಷಿ ಜಮೀನು ಬರಡಾಗಿ ಬೂದಿ ಮುಚ್ಚಿಕೊಂಡಿದೆ. ಇನ್ನು ಅಂತರ್ಜಲ ಮಟ್ಟ ಸಹ ಸಂಪೂರ್ಣ ಇಳಿಮುಖವಾಗಿದ್ದು, ಪಕ್ಕದಲ್ಲಿಯೇ ಇರುವ ಸೂಪಾ ಅಣೆಕಟ್ಟಿಗೂ ಆತಂಕ ಎದುರಾಗಿದೆ. ಅಲ್ಲದೆ ಸ್ಪೋಟಕಗಳು ಎಲ್ಲೆಂದರಲ್ಲಿ ಸಿಗುತ್ತಿದ್ದು ಇದೀಗ ಸ್ಥಳೀಯರ ಆತಂಕಕ್ಕೆ ಕಾರಣವಾಗಿದೆ.
ಒಟ್ಟಿನಲ್ಲಿ ಅಕ್ರಮ ಕಲ್ಲುಗಣಿಗಾರಿಕೆಯಿಂದಾಗಿ ನಲುಗಿದ್ದ ರಾಮನಗರ ಭಾಗದ ಜನತೆಗೆ ಇದೀಗ ಶಿವಮೊಗ್ಗದಲ್ಲಿ ನಡೆದ ಸ್ಪೋಟದ ಘಟನೆ ಮತ್ತಷ್ಟು ಆತಂಕ ಸೃಷ್ಟಿಸಿದ್ದು ಇನ್ನಾದರೂ ಅಧಿಕಾರಿಗಳು ಇತ್ತಕಡೆ ಗಮನ ಹರಿಸಿ ಮುಂದಾಗುವ ಅವಘಡಗಳನ್ನು ತಪ್ಪಿಸಿ ಸಮಸ್ಯೆ ಬಗೆಹರಿಸಬೇಕಿದೆ.
ವಿಸ್ಮಯ ನ್ಯೂಸ್, ಕಾರವಾರ