ಅಂಕೋಲಾ: ನವೆಂಬರ್ 1 ರ ಕನ್ನಡ ರಾಜ್ಯೋತ್ಸವ ದಿನವಾದ ಸೋಮವಾರ ತಾಲೂಕಿನ ತಹಶೀಲ್ಧಾರ ಕಚೇರಿಯ ಮುಖ್ಯ ಗೇಟಿನ ಎದುರು, ರಸ್ತೆಯಂಚಿಗೆ ವ್ಯಕ್ತಿಯೋರ್ವರು ಕುಸಿದು ಬಿದ್ದು ಮೃತ ಪಟ್ಟ ಘಟನೆ ನಡೆದಿದೆ.
ಮೃತ ವ್ಯಕ್ತಿಯನ್ನು ಯಲ್ಲಾಪುರ ತಾಲೂಕಿನ ಬಾರೆ ಶೇಡಿಮನೆ ನಿವಾಸಿ ಗಣಪತಿ ಸುಬ್ರಾಯ ಭಟ್ಟ (59) ಎಂದು ಗುರುತಿಸಲಾಗಿದೆ.ಕಳೆದ ಕೆಲ ವರ್ಷಗಳಿಂದಲೂ ಆಗಾಗ ಅಂಕೋಲಾಕ್ಕೆ ಈತ ಬಂದು ಹೋಗುತ್ತಿದ್ದರಿಂದ, ಪಟ್ಟಣದ ಬಸ್ ನಿಲ್ದಾಣದ ಅಕ್ಕ ಪಕ್ಕದ ಬಹುತೇಕ ಅಂಗಡಿ, ಹೊಟೇಲ್, ವೈನ್ ಶಾಪಗಳಲ್ಲಿ ಪರಿಚಿತ ಮುಖವಾಗಿದ್ದ.
ಬಹುಶಃ ಕುಡಿತ ಹಾಗೂ ಊಟ ಮತ್ತಿತರ ದೈನಂದಿನ ಖರ್ಚಿಗಾಗಿ ಹಲವರ ಬಳಿ ಹಣ ಕೇಳುವುದು, ಅಪರಿಚಿತರಿದ್ದರೂ ತನ್ನ ಮಾತುಗಾರಿಕೆ – ಹಾವ ಭಾವಗಳ ಮೂಲಕ ಪರಿಚಿತರಂತೆ ತೋರ್ಪಡಿಸಿ, ಅವರಿವರಿಂದ ಸಣ್ಣ ಪ್ರಮಾಣದ ಖರ್ಚಿಗಾಗಿ ಖಾಸು ಮಾಡಿಕೊಳ್ಳುತ್ತಿದ್ದ ಎನ್ನಲಾಗಿದೆ.
ಕಳೆದ 7-8 ದಿನಗಳಿಂದ ಅಂಕೋಲಾ ಸುತ್ತಮುತ್ತಲ ಒಡಾಡಿಕೊಂಡಿದ್ದ ಈತ ಅನಾರೋಗ್ಯ, ಕುಡಿತದ ಅಡ್ಡ ಪರಿಣಾಮ, ಬಿಸಿಲಿನ ಪ್ರಖರತೆ, ಅಥವಾ ಇನ್ನಾವುದೋ ಕಾರಣದಿಂದ ತಹಶೀಲ್ದಾರ ಕಾರ್ಯಾಲಯದ ಎದುರು ಕುಸಿದು ಬಿದ್ದಂತಿದ್ದು, ಕೆಲ ಸಮಯದ ಬಳಿಕ ಅದನ್ನು ಯಾರೋ ಗಮನಿಸಿ 108 ಅಂಬುಲೆನ್ಸ ವಾಹನಕ್ಕೆ ಕರೆ ಮಾಡಿದ್ದಾರೆ.
ಆರೋಗ್ಯ ಸಿಬ್ಬಂದಿಗಳು ಸ್ಥಳಕ್ಕೆ ಆಗಮಿಸಿ ನೋಡುವಷ್ಟರಲ್ಲಿ, ಆತನ ಮೂಗಿನಿಂದ ರಕ್ತ ಸ್ರಾವವಾದಂತೆ ಕಂಡು ಬಂದಿದ್ದು ಆ ವೇಳೆಗಾಗಲೇ ಪ್ರಾಣ ಪಕ್ಷಿ ಹಾರಿ ಹೋಗಿತ್ತು ಎನ್ನಲಾಗಿದೆ. ಮರಣೋತ್ತರ ಪರೀಕ್ಷೆಗಾಗಿ ಮೃತದೇಹವನ್ನು ತಾಲೂಕಾ ಆಸ್ಪತ್ರೆ ಶವಾಗಾರಕ್ಕೆ, ಮತ್ತು ತದನಂತರ ಶವಾಗಾರದಿಂದ ಮೃತನ ಮನೆಗೆ ಸಾಗಿಸಲು ಕನಸಿಗದ್ದೆ ಬೊಮ್ಮಯ್ಯ ನಾಯ್ಕ ಮತ್ತಿತರರು ಸಹಕರಿಸಿದರು.
ಸುದ್ದಿ ಕೇಳಿ ತಿಳಿದ ಮೃತನ ಕುಟುಂಬಸ್ಥರು, ಸಂಬಂಧಿಗಳು ಅಂಕೋಲಾಕ್ಕೆ ಬಂದು ಕಾನೂನು ಪ್ರಕ್ರಿಯೆ ಪೂರ್ಣಗೊಳಿಸಿದರು. ಘಟನಾ ಸ್ಥಳಕ್ಕೆ ಪಿಎಸೈ ಪ್ರವೀಣ ಕುಮಾರ ಮತ್ತು ಸಿಬ್ಬಂದಿಗಳು ಭೇಟಿ ನೀಡಿ ಪರಿಶೀಲಿಸಿದರು. ಈ ಕುರಿತು ಅಂಕೋಲಾ ಪೋಲೀಸರು ಪ್ರಕರಣ ದಾಖಲಿಸಿದ್ದಾರೆ.
ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ