ಮನೆಯಲ್ಲಿಯೇ ದೀಪಾವಳಿ ಆಚರಿಸುವೆ ಎಂದು ಮನೆಗೆ ಮರಳಿದ ಪದ್ರಶ್ರೀ ಪುರಸ್ಕೃತೆ | ಆರೋಗ್ಯದಲ್ಲಿ ಸ್ವಲ್ಪ ಚೇತರಿಕೆ
ಅಂಕೋಲಾ: ತೀವ್ರ ಅನಾರೋಗ್ಯದ ಕಾರಣ ಇತ್ತೀಚೆಗೆ ಕಾರವಾರದ ಜಿಲ್ಲಾ ಆಸ್ಪತ್ರೆಗೆ ದಾಖಲಾಗಿದ್ದ ಅಂಕೋಲಾ ತಾಲೂಕಿನ ಬಡಗೇರಿಯ ಸುಕ್ರಿ ಬೊಮ್ಮಾ ಗೌಡ ಅವರ ಆರೋಗ್ಯದಲ್ಲಿ ಸುಧಾರಣೆ ಕಂಡು ಬಂದ ಹಿನ್ನೆಲೆಯಲ್ಲಿ ಪದ್ಮಶ್ರೀ ಪುರಸ್ಕೃತೆಯ ಮನದಾಳದ ಕೋರಿಕೆ ಮೇಲೆ ಆಸ್ಪತ್ರೆಯಿಂದ ಬಿಡುಗಡೆಗೊಳಿಸಿ ವಿಶೇಷ ವೈದ್ಯಕೀಯ ಸೌಲಭ್ಯಗಳೊಂದಿಗೆ ಮನೆಯಲ್ಲಿ ಚಿಕಿತ್ಸೆ ಪಡೆಯುವ ವ್ಯವಸ್ಥೆ ಕಲ್ಪಿಸಲಾಗಿದೆ.
ಕಳೆದ 10 ದಿನಗಳ ಹಿಂದೆ ಉಸಿರಾಟದ ಸಮಸ್ಯೆಯಿಂದ ತೀವ್ರ ಅಸ್ವಸ್ಥಗೊಂಡ ಸುಕ್ರಜ್ಜಿಯನ್ನು ಜನಶಕ್ತಿ ವೇದಿಕೆಯ ಮಾಧವ ನಾಯ್ಕ ಮತ್ತಿತರರು ಕಾರವಾರದ ಕಿಮ್ಸ್ ಆಸ್ಪತ್ರೆಗೆ ದಾಖಲಿಸಿದ್ದರು. ಬಳಿಕ ಅವರನ್ನು ತೀವ್ರ ನಿಗಾ ಘಟಕದಲ್ಲಿಟ್ಟು ಚಿಕಿತ್ಸೆ ನೀಡಲಾಗುತ್ತಿತ್ತು. ಶ್ವಾಸಕೋಶ ಸಂಬಂಧಿ ತೀವೃ ಉಸಿರಾಟದ ಸಮಸ್ಯೆ ಎದುರಿಸುತ್ತಿದ್ದರು.
ನವೆಂಬರ್ 1 ರಂದು ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ ಹೆಬ್ಬಾರ್, ಕಾರವಾರ ಅಂಕೋಲಾ ಕ್ಷೇತ್ರದ ಶಾಸಕಿ ರೂಪಾಲಿ ನಾಯ್ಕ ಅವರು ಆಸ್ಪತ್ರೆಗೆ ಭೇಟಿ ನೀಡಿ ಸುಕ್ರಜ್ಜಿಯ ಆರೋಗ್ಯ ವಿಚಾರಣೆ ನಡೆಸಿದ್ದರು. ಜಿಲ್ಲಾಧಿಕಾರಿ ಮುಲೈ ಮುಹಿಲನ್ ಎಂ ಪಿ , ಇತರೆ ಅಧಿಕಾರಿಗಳೂ ಸಹ
ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಸುಕ್ರಿ ಗೌಡ ರವರ ಆರೋಗ್ಯ ಕಾಳಜಿಗೆ ತಿಳಿಸಿದ್ದರು.
ಈ ನಡುವೆ ಸುಕ್ರಜ್ಜಿ ಆರೋಗ್ಯ ದಿನದಿಂದ – ದಿನಕ್ಕೆ ಚೇತರಿಕೆ ಕಂಡು, ದೀಪಾವಳಿ ಹಬ್ಬವನ್ನು ಮನೆಗೆ ಹೋಗಿ ಮಾಡಬೇಕೆಂಬ ಸುಕ್ರಜ್ಜಿಯ ಮನದಾಳದ ಕೋರಿಕೆಗೆ ಓಗೊಟ್ಟ ಕ್ರಿಮ್ಸ ತಂಡ ಶಾಸಕಿ ರೂಪಾಲಿ ನಾಯ್ಕ್ ಅವರು ಈ ಹಿಂದೆ ಕಾರವಾರಕ್ಕೆ ನೀಡಿದ್ದ ವೆಂಟಿಲೇಟರ್ ಅಳವಡಿಸಿದ ಸುಸಜ್ಜಿತ ಆಂಬುಲೆನ್ಸ್ ಮೂಲಕ, ಮನೆಗೆ ಕರೆತಂದರು.ಮುಖ್ಯ ರಸ್ತೆಯಲ್ಲಿ ಅಂಬುಲೆನ್ಸ್ ನಿಲ್ಲಿಸಿ, ಕುರ್ಚಿಯಲ್ಲಿ ಸುಕ್ರಜ್ಜಿ ಯನ್ನು ಕುಳ್ಳಿರಿಸಿ, ಇಕ್ಕಟ್ಟಾದ ಓಣಿಯಲ್ಲಿ ಹೊತ್ತೊಯ್ದ ಸುರಕ್ಷಿತವಾಗಿ ಮನೆಗೆ ಕರೆತರಲಾಯಿತು.
ಸುಕ್ರಜ್ಜಿ ಆರೋಗ್ಯ ಕಾಳಜಿಗೆ ಪೂರಕವಾಗಿ, ಅವರ ಮನೆಯಲ್ಲಿಯೇ ವಿಶೇಷ ಆಕ್ಸಿಜನ್ ಸೌಲಭ್ಯ ಒದಗಿಸಲಾಗಿದ್ದು, ವಿದ್ಯುತ್ ಪೂರೈಕೆ ಸಮಸ್ಯೆಯಿಂದ ತೊಂದರೆ ಆಗದಂತೆ ಎಚ್ಚರಿಕೆ ವಹಿಸಲು ಸಂಬಂಧಿಸಿದ ಹೆಸ್ಕಾಂ ಮತ್ತಿತರರಿಗೆ ಸೂಚಿಸಿದ್ದಾರೆ ಎನ್ನಲಾಗಿದೆ. ಅಲ್ಲದೇ ಅಂಕೋಲಾ ತಾಲೂಕು ಆಸ್ಪತ್ರೆಯ ವೈದ್ಯರು ಅಥವಾ ಸಿಬ್ಬಂದಿಗಳು, ಇಲ್ಲವೇ ಕಾರವಾರದಿಂದಲೇ ಕಾಲಕಾಲಕ್ಕೆ ಸುಕ್ರಜ್ಜಿ ಆರೋಗ್ಯತಪಾಸಣೆ/ವಿಚಾರಣೆ ನಡೆಸಲೂ ತಿಳಿಸಲಾಗಿದ್ದು,ಮನೆಯವರಿಗೂ ಸಹ ಆಕ್ಸಿ ಮೀಟರ್ ಮತ್ತಿತರ ವೈದ್ಯಕೀಯ ಉಪಕರಣಗಳ ಬಳಕೆ ವಿಧಾನವನ್ನು ತಿಳಿಸಿಕೊಡಲಾಗಿದೆ ಎಂದು ಕ್ರಿಮ್ಸ್ ನಿರ್ದೇಶಕ ಡಾ. ಗಜಾನನ ನಾಯಕ ತಿಳಿಸಿದರು.
ಮನೆಗೆ ಮರಳಿದ ಸಂತೋಷದಲ್ಲಿ ಸುಕ್ರಜ್ಜಿ ತನ್ನ ಮೊಮ್ಮಗನನ್ನು ಮುದ್ದಾಡಿ ಸಂತಸಪಟ್ಟರು. ಈ ವೇಳೆ ಮಾತನಾಡಿದ ಸುಕ್ರಜ್ಜಿ ನಾನು ಈ ಹಿಂದೆಯೂ ಹತ್ತಾರು ಬಾರಿ ಆರೋಗ್ಯ ಸಮಸ್ಯೆ ಎದುರಿಸಿದ್ದು,ನನ್ನ ಆರೋಗ್ಯ ಕಾಳಜಿಗೆ ಪ್ರತಿ ಬಾರಿ ಜನಶಕ್ತಿ ವೇದಿಕೆಯ ಮಾಧವ ನಾಯಕ ಮತ್ತು ಕಿಮ್ಸ್ ಆಡಳಿತ ನಿರ್ದೇಶಕ ಡಾ ಗಜಾನನ ನಾಯಕ ಅವರು ತುಂಬಾ ಕಾಳಜಿ ವಹಿಸುತ್ತಿದ್ದಾರೆ.ಇತರೆ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಭೇಟಿ ನೀಡಿ ಕುಶಲೋಪರಿ ವಿಚಾರಿಸಿ ಧೈರ್ಯ ತುಂಬುತ್ತಾರೆ ಎಂದರು.
ತಾನು ಆಕ್ಸಿಜನ್ ನೆರವಿನಿಂದ ಉಸಿರಾಡಿಸಬೇಕಾದ ಪರಿಸ್ಥಿತಿ ಕಂಡು ,ಕುಟುಂಬ ಸದಸ್ಯರೋರ್ವರು ಅಳುವುದನ್ನು ನೋಡಿದ ಸುಕ್ರಜ್ಜಿ, ಹೇ ನಾನು ಸಾಯುವುದಿಲ್ಲ, ಅರಾಂ ಆಗಿರುವೆ ಎಂದು ಪ್ರೀತಿ ವಿಶ್ವಾಸದ ಮಾತುಗಳ ಮೂಲಕ ಭರವಸೆ ತುಂಬುವ ಪ್ರಯತ್ನ ಮಾಡಿದರು.
ಈ ಸಂದರ್ಭದಲ್ಲಿ ಡಾ. ಸಂದೇಶ, ಸ್ಥಳೀಯರಾದ ಸಾತು ಗೌಡ, ಮಹೇಶ ಗೌಡ ಹಾಗೂ ಸುಕ್ರಜ್ಜಿ ಕುಟುಂಬ ಸದಸ್ಯರು, ಊರ ನಾಗರಿಕರು ಹಾಗೂ ರವಿ ನಾಯ್ಕ, ಸಂಜು ನಾಯ್ಕ ಸೇರಿದಂತೆ ಇತರರು ಉಪಸ್ಥಿತರಿದ್ದರು.
ವಿಸ್ಮಯ ನ್ಯೂಸ್ ವಿಲಾಸ ನಾಯಕ