ಅಂಕೋಲಾ: ರಾ.ಹೆ 66 ರ ಅವರ್ಸಾ ಕಾತ್ಯಾಯಿನಿ ತಿರುವಿನ ಬಳಿ, ಕಾರೊಂದು ಡಿವೈಡರ್ ಗೆ ಡಿಕ್ಕಿ ಹೊಡೆದ ಪರಿಣಾಮ, ಕಾರಿನಲ್ಲಿ ಚಲಿಸುತ್ತಿದ್ದ ವಿಕಲಚೇತನನೊಬ್ಬ ಗಂಭೀರ ಗಾಯಗೊಂಡು,ಜಿಲ್ಲಾ ಆಸ್ಪತ್ರೆಗೆ ಸಾಗಿಸುತ್ತಿರುವಾಗ ಸಾವನ್ನಪಿದ್ದು, ಚಾಲಕನೂ ಗಾಯಗೊಂಡ ಘಟನೆ ಶುಕ್ರವಾರ ನಡೆದಿದೆ.
ಅಬಕಾರಿ ಇಲಾಖೆ ವತಿಯಿಂದ ಜಪ್ತ ಪಡಿಸಿಕೊಳ್ಳಲಾದ ವಾಹನಗಳ ಹರಾಜು ಪ್ರಕ್ರಿಯೆಯಲ್ಲಿ ಭಾಗವಹಿಸಲು ತೆರಳುತ್ತಿದ್ದರೆನ್ನಲಾದ ಅಜ್ಜಿಕಟ್ಟಾ ಮೂಲದ ಈರ್ವರು ಕಾರಿನಲ್ಲಿ ಅಂಕೋಲಾದಿಂದ ಕಾರವಾರಕ್ಕೆ ತೆರಳುತ್ತಿದ್ದಾಗ ದಾರಿಮಧ್ಯೆ ಅವರ್ಸಾ ಕಾತ್ಯಾಯಿನಿ ದೇವಸ್ಥಾನದ ಸ್ವಾಗತ ಕಮಾನಿನ ಎದುರು ರಸ್ತೆ ಅಪಘಾತಕ್ಕೆ ಈಡಾಗಿದೆ. ಹೆದ್ದಾರಿಯಲ್ಲಿ ಒಮ್ಮೇಲೆ ಎರಡು ಆಕಳುಗಳು ಬಂದು ಚಲಿಸುತ್ತಿದ್ದ ಕಾರಿಗೆ ಗುದ್ದಿಕೊಂಡ ವೇಳೆ ಕಾರು, ಚಾಲಕನ ನಿಯಂತ್ರಣ ತಪ್ಪಿ,ಡಿವೈಡರ್ ಗೆ ಡಿಕ್ಕಿ ಹೊಡೆದು ಕೊಂಡಿದೆ ಎನ್ನಲಾಗಿದೆ.
ಡಿಕ್ಕಿಯ ರಭಸಕ್ಕೆ ಕಾರಿನ ಬಾಗಿಲು ತೆರೆದು , ಕಾರಿನಲ್ಲಿದ್ದ ನಿಜಾಮುದ್ದೀನ್ (ರಿಜ್ವಾನ್) ಅಜಿ ಮುದ್ದಿನ್ ಶೇಖ್ (36)ಎಂಬಾತ ಸಿಡಿದು ಬಿದ್ದ ಪರಿಣಾಮ ತಲೆ ಭಾಗಕ್ಕೆ ತೀವ್ರ ಪೆಟ್ಟು ಬಿದ್ದಿದೆ. ಚಾಲಕ ಅಶೋಕ ಶೇಣ್ಪಿ ಈತನಿಗೂ ಗಾಯಗಳಾಗಿದ್ದು, ಕೂಡಲೇ ಐ ಆರ್ ಬಿ ಅಂಬುಲೆನ್ಸ ಮೂಲಕ ಸ್ಥಳೀಯರ ಸಹಕಾರದಲ್ಲಿ ಗಾಯಾಳುಗಳನ್ನು ತಾಲೂಕಾ ಆಸ್ಪತ್ರೆಗೆ ಕರೆತಂದು ಪ್ರಾಥಮಿಕ ಚಿಕಿತ್ಸೆ ನೀಡಲಾಯಿತು.
ಗಂಭೀರ ಗಾಯಗೊಂಡ ರಿಜ್ವಾನ ಈತನನ್ನು ಡಾ. ಈಶ್ವರಪ್ಪ ಅವರ ಸಲಹೆಯಂತೆ ಅಂಬುಲೆನ್ಸ ಮೂಲಕ , ಆಕ್ಸಿಜನ್ ಪೂರೈಕೆಯೊಂದಿಗೆ ಹೆಚ್ಚಿನ ಚಿಕಿತ್ಸೆಗಾಗಿ ಜಿಲ್ಲಾ ಆಸ್ಪತ್ರೆಗೆ ಸಾಗಿಸಲಾಗಿತ್ತಾದರೂ ಮೆದುಳು ರಕ್ತಸ್ರಾವ ಮತ್ತಿತ್ತರ ಗಂಭೀರ ಗಾಯದಿಂದ ಸಾವು – ಬದುಕಿನ ಮಧ್ಯೆ ಹೋರಾಡುತ್ತಿದ್ದ ರಿಜ್ವಾನ ಕೊನೆಯುಸಿರೆಳೆದ ಎನ್ನಲಾಗಿದೆ.
ರಿಜ್ವಾನ ವಿಕಲ ಚೇತನನಾದರೂ ಸಹ ಹಳೆ ಕಬ್ಬಿಣ ಮತ್ತಿತರ ಚಿಂದಿ ವಸ್ತುಗಳ ವ್ಯವಹಾರ, ಲಾಕ್ ಡೌನ ಹಾಗೂ ಇನ್ನಿತರ ಸಂದರ್ಭಗಳಲ್ಲಿ ಹೆದ್ದಾರಿಯಲ್ಲಿ ಚಹಾ ಮಾರಾಟ ಮಾಡಿ ಸ್ವಾವಲಂಬನೆ ಬದುಕು ಸಾಗಿಸುತ್ತಿದ್ದು,ವಿಧಿಯಾಟವೋ ಎನ್ನುವಂತೆ ಸ್ಕ್ರ್ಯಾಪ್ ಮತ್ತಿತರ ವ್ಯಾಪಾರಿ ಕಾರಣಗಳಿಂದ ಅಬಕಾರಿ ಇಲಾಖೆಯ ವಾಹನ ಹರಾಜಿನಲ್ಲಿ ಭಾಗವಹಿಸಲು ತೆರಳುತ್ತಿದ್ದ ವೇಳೆ ಆಕಸ್ಮಿಕ ಅಪಘಾತದಿಂದ,ಬದುಕೇ ಮುಗಿದು ಹೋದಂತಾಗಿದೆ. ಪೊಲೀಸರು ತಾಲೂಕಾಸ್ಪತ್ರೆಗೆ ಆಗಮಿಸಿ ಗಾಯಾಳು ಚಾಲಕ ಅಶೋಕ ಶೇಣ್ಪಿ ಹೇಳಿಕೆ ದಾಖಲಿಸಿಕೊಂಡಿದ್ದಾರೆ. ಪ್ರಕರಣದ ಕುರಿತಂತೆ ಹೆಚ್ಚಿನ ಮಾಹಿತಿಗಳು ತಿಳಿದು ಬರಬೇಕಿದೆ.
ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ.