Big News
Trending

Village: ಈ ಊರಿನ ಕಥೆ-ವ್ಯಥೆ ನೋಡಿ?

ರೋಗಿಗಳನ್ನು ಆಸ್ಪತ್ರೆಗಳಿಗೆ ಸಾಗಿಸಲು ಬಹುದೂರ ಹೊತ್ತುಕೊಂಡೇ ಹೋಗಬೇಕಾದ ಅನಿವಾರ್ಯತೆ

ಅಂಕೋಲಾ: ದೇಶಕ್ಕೆ ಸ್ವಾತಂತ್ರ‍್ಯ ಬಂದು 76 ವರ್ಷಗಳೇ ಕಳೆಯುತ್ತಾ ಬಂದರೂ, ಕೆಲ ಹಳ್ಳಿಗಳು (village) ಈ ವರೆಗೂ ಮೂಲಭೂತ ಸೌಕರ್ಯಗಳ ಕೊರತೆಯಿಂದ ಕುಗ್ರಾಮಗಳಾಗಿಯೇ ಉಳಿದಿವೆ. ಇಲ್ಲಿನ ಜನರಿಗೆ ಆರೋಗ್ಯ ಭಾಗ್ಯ ಕರುಣಿಸುವ ಆಸ್ಪತ್ರೆ ಸೌಲಭ್ಯ ಸ್ಥಳೀಯವಾಗಿಯೇ ಲಭ್ಯವಾಗುವುದು ಹಾಗಿರಲಿ,ರಸ್ತೆ ಸಂಪರ್ಕ ಕೊರತೆಯಿಂದ ರೋಗಿಗಳನ್ನು ಆಸ್ಪತ್ರೆಗಳಿಗೆ ಸಾಗಿಸಲು ಬಹುದೂರ ಹೊತ್ತುಕೊಂಡೇ ಸಾಗಿಸಬೇಕಾದ ಅನಿವಾರ್ಯ ಮತ್ತು ಶೋಚನೀಯ ಪರಿಸ್ಥಿತಿ ಈಗಲೂ ಮುಂದುವರೆದಿದ್ದು, ಆಡಳಿತ ವ್ಯವಸ್ಥೆಯನ್ನು ಅಣಕಿಸುವಂತಿದ್ದು, ಜಿಲ್ಲಾಧಿಕಾರಿಗಳ ಗ್ರಾಮ ವಾಸ್ತವ್ಯದ ಮೂಲಕವಾದರೂ ಸಮಸ್ಯೆ ಪರಿಹಾರವಾಗಲಿ ಎಂದು ಜನತೆ ಆಗ್ರಹಪೂರ್ವಕವಾಗಿ ವಿನಂತಿಸುವoತಾಗಿದೆ.

ಅಂಕೋಲಾದಲ್ಲಿ 21 ಗ್ರಾಮ ಪಂಚಾಯತಗಳಿದ್ದು ಅವುಗಳಲ್ಲೊಂದಾಗಿರುವ ಹಟ್ಟಿಕೇರಿ ಗ್ರಾಮ ಪಂಚಾಯತ್ ಮಟ್ಟಿಗೆ ಹೇಳುವುದಾದರೆ ಇಲ್ಲಿನ ಬಹುತೇಕ ಗ್ರಾಮಗಳು ( village) ಅತೀ ಹಿಂದುಳಿದ ಗ್ರಾಮಗಳಾಗಿದ್ದು, ರಸ್ತೆ, ಬೀದಿ ದೀಪ, ವೈದ್ಯಕೀಯ ಸೇವೆ ಮತ್ತಿತರ ಮೂಲಭೂತ ಸೌಲಭ್ಯಗಳಿಂದ ವಂಚಿತವಾಗುತ್ತಿವೆ.ಸುಮಾರು 4 ಸಾವಿರಕ್ಕೂ ಹೆಚ್ಚು ಜನಸಂಖ್ಯೆಯುಳ್ಳ ಹಟ್ಟಿಕೇರಿ ಗ್ರಾಮ ಪಂಚಾಯತ್ 12 ಗ್ರಾಮಗಳನ್ನೊಳಗೊಂಡಿದ್ದು ಎರಡರಿಂದ ಮೂರು ಗ್ರಾಮಗಳನ್ನು ಹೊರತುಪಡಿಸಿ ಬಹುತೇಕ ಎಲ್ಲ ಗ್ರಾಮಗಳೂ ಅರಣ್ಯ ಹಾಗೂ ಗುಡ್ಡ ಗಾಡು ಪ್ರದೇಶದಿಂದ ಆವೃತ್ತವಾಗಿ, ಸರಿಯಾದ ರಸ್ತೆ ಸಂಪರ್ಕ, ವಿದ್ಯುತ್ ವ್ಯವಸ್ಥೆ, ದೂರವಾಣಿ ಮತ್ತಿತರ ಮೂಲಭೂತ ಸೌಲಭ್ಯಗಳ ಕೊರತೆಯಿಂದ ಹೊರ ಪ್ರಪಂಚ ದೂರವಿದೆ.

ಗುಡ್ಡಗಾಡಿನ ಈ ( village) ಹಳ್ಳಿಗಳಲ್ಲಿ ಬೇಸಿಗೆಯಲ್ಲಿ ಮಾತ್ರ ಓಡಾಡಬಹುದಾದ ಕಿರುದಾರಿ ಸರ್ವೇ ಸಾಮಾನ್ಯವಾಗಿದೆ. ಮಳೆಗಾಲದಲ್ಲಿಯಂತೂ ಹಳ್ಳ ಕೊಳ್ಳಗಳನ್ನು ದಾಟಲು ಮರದ ದಿಮ್ಮಿ, ಬಿದಿರು ಬಳಸಿ ನಿರ್ಮಿಸಿದ ತಾತ್ಕಾಲಿಕ ಕಾಲುಸಂಕದ ಮೇಲೆ ಹಗ್ಗದ ಮೇಲಿನ ನಡಿಗೆಯಂತೆ ಸರ್ಕಸ್ ಮಾಡಬೇಕಾದ ಅನಿವಾರ್ಯತೆ. ಕಾಲು ಜಾರಿದರೆ ದೇವರೆ ಗತಿ ಎಂಬoತೆ ಇರುವ ಇಲ್ಲಿನ ಜನರ ಸಂಕಷ್ಟ ಹೇಳತೀರದ್ದಾಗಿದ್ದು ಇತ್ತೀಚೆಗೆ ಕೆಂದಿಗೆ ಗ್ರಾಮದ ಉಮೇಶ ಗೌಡ ಎನ್ನುವ ರೈತನೊಬ್ಬ ,ಕೃಷಿ ಕೂಲಿ ಮಾಡುವ ಸಂದರ್ಭದಲ್ಲಿ ಆಕಸ್ಮಿಕವಾಗಿ ಕಾಲಿಗೆ ತೀವ್ರ ಪೆಟ್ಟು ಮಾಡಿಕೊಂಡು ನಡೆದಾಡಲಾಗದೇ ಚಿಕಿತ್ಸೆಗಾಗಿ ಆಸ್ಪತ್ರೆಗೆ ಸಾಗಿಸ ಬೇಕಾದ ಅನಿವಾರ್ಯತೆ ಇತ್ತು. ಆದರೆ ಅ ಗ್ರಾಮಕ್ಕೆ ರಿಕ್ಷಾ ಆಂಬುಲೆನ್ಸ್ ಮತ್ತಿತರ ವಾಹನಗಳು ಬರುವುದು ಹಾಗಿರಲಿ,ಗುಡ್ಡಗಾಡು ಹಳ್ಳ ಕೊಳ್ಳಗಳನ್ನು ದಾಟಿ ಬೈಕ್ ಮೇಲೆಯೂ ಕರೆದುಕೊಂಡು ಹೋಗಲಾಗದ ಶೋಚನೀಯ ಪರಿಸ್ಥಿತಿ.

ಅಂತೂ ಇಂತೂ ಆತನ ಕುಟುಂಬಸ್ಥರು, ಸ್ಥಳೀಯರ ನೆರವಿನೊಂದಿಗೆ ಗಾಯಾಳುವನ್ನು ಹೊತ್ತು ಸಾಗಿಸಲು ನಿರ್ಧರಿಸಿ,ಕಾರ್ಯಪ್ರವೃತ್ತರಾಗಿದ್ದಾರೆ. ಈ ವೇಳೆಗೆ ಸ್ಥಳೀಯ ಅರಣ್ಯ ಸಿಬ್ಬಂದಿಗಳು ಸಹ ಮಾನವೀಯ ನೆಲೆಯಲ್ಲಿ ಸಾಥ್ ನೀಡಿದ್ದಾರೆ.ಅಂತೂ ಇಂತೂ ಹಲವರು ಕಷ್ಟಪಟ್ಟು ಕಾಲಿನ ಸಮಸ್ಯೆಗೊಳಗಾದ ಗಾಯಾಳುವನ್ನು ಅವನ ಮನೆಯಿಂದ ಬಹು ದೂರ ಹೊತ್ತು ಸಾಗಿಸಿ, ಅಲ್ಲಿಂದ ಕಾರ ಮೂಲಕ ಜಿಲ್ಲಾ ಆಸ್ಪತ್ರೆಗೆ ಆತನನ್ನು ದಾಖಲಿಸಿದ್ದಾರೆ. ಅಲ್ಲಿ ಚಿಕಿತ್ಸೆಗೊಳಪಟ್ಟು ಆತ ಗುಣ ಮುಖನಾಗುತ್ತಿರುವುದು ,ಆತನ ಕುಟುಂಬಸ್ಥರು ಮತ್ತು ಸ್ಥಳೀಯರಲ್ಲಿ ಸಮಾಧಾನ ತಂದಿದೆಯಾದರೂ, ಅನಾರೋಗ್ಯ ಮತ್ತಿತರ ತುರ್ತು ಸಂದರ್ಭದಲ್ಲಿ ರಸ್ತೆ ಸಂಪರ್ಕವಿಲ್ಲದೇ ತಾವು ಪಡುತ್ತಿರುವ ಯಾತನೆಯ ನೋವಿನ ಕುರಿತು ಅತೀವ ಬೇಸರ ವ್ಯಕ್ತಪಡಿಸುತ್ತಾರೆ.

Watch This Video

ಜನಪರ ಕಾಳಜಿ ಹೊಂದಿರುವ ನೂತನ ಜಿಲ್ಲಾಧಿಕಾರಿಗಳಾದ ಗಂಗೂಬಾಯಿ ಮಾನಕರ ಮತ್ತು ನೂತನ ಶಾಸಕರು ಈ ಹಿಂದೆ ಕ್ಷೇತ್ರದಾದ್ಯಂತ ಸಂಪರ್ಕ ವ್ಯವಸ್ಥೆ ಬಲಪಡಿಸಬೇಕಿದೆ. ಸಂಬoಧಿಸಿದ ಕಾಮಗಾರಿ ಅನುಷ್ಠಾನ ಇಲಾಖೆಗಳಿಗೆ ಕಾಮಗಾರಿಯ ಆರಂಭಕ್ಕೆ ಸೂಚನೆ ನೀಡಬೇಕಿದೆ. ಅಧಿಕಾರಿಗಳು ಇಲ್ಲಿಯೇ ಗ್ರಾಮ ವಾಸ್ತವ್ಯ ಮಾಡಿ ಅಥವಾ ಭೇಟಿ ನೀಡಿಯಾದರೂ ಕುಗ್ರಾಮಗಳ ಸಮಸ್ಯೆಗಳನ್ನು ಆಲಿಸಿ, ಅರಿತು, ಸ್ಥಳೀಯರ ಬಾಳು ಬೆಳಗಲು ಮುಂದಾಗಬೇಕಿದೆ ಎಂದು ಹಲವು ಮೂಲಭೂತ ಸೌಕರ್ಯಗಳ ಕೊರತೆಯಿಂದ ಪರಿತಪಿಸುತ್ತಿರುವ ನೊಂದ ಜನರ ಪರವಾಗಿ ಸ್ಥಳೀಯ ಕೆಲ ಪ್ರಮುಖರು ವಿನಂತಿಸಿದ್ದಾರೆ.

ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ

Back to top button