ಹಲವೆಡೆ ಹದಗೆಟ್ಟ ಮಂಜುಗುಣಿ ಮುಖ್ಯ ರಸ್ತೆ : ಅವ್ಯವಸ್ಥೆ ಸರಿಪಡಿಸದಿದ್ದರೆ ಗಾಂಧಿ ಜಯಂತಿಯಂದೇ ಪ್ರತಿಭಟನೆಯ ಎಚ್ಚರಿಕೆ
ಸೇತುವೆ ಬಳಿ ಲೋಕೋಪಯೋಗಿ ಇಲಾಖೆಯಿಂದ ಇಂಗು ಗುಂಡಿ ಭಾಗ್ಯ? ಕೆಲವೆಡೆ ಹೊಂಡದಲ್ಲಿ ರಸ್ತೆಯೋ ? ರಸ್ತೆಯಲ್ಲಿ ಹೊಂಡವೋ ಎನ್ನುತ್ತಿರುವ ನಾಗರಿಕರು
ಅಂಕೋಲಾ: ತಾಲೂಕಿನ ಪ್ರಮುಖ ಸಂಪರ್ಕ ರಸ್ತೆಗಳಲ್ಲಿ ಒಂದಾಗಿರುವ ಪಟ್ಟಣದಿಂದ ಮಂಜಗುಣಿ ಕಡೆ ಸಾಗುವ ಮುಖ್ಯ ರಸ್ತೆ ಅಲ್ಲಲ್ಲಿ ಅಗಲೀಕರಣ ಮತ್ತು ಹೊಸ ಡಾಂಬರೀಕರಣ ಗೊಂಡು ಸುಂದರವಾಗಿ ಕಂಡರೂ ಸಹ ಇತರೆಡೆ ಬಹುತೇಕ ಸಂಪೂರ್ಣ ಹದಗೆಟ್ಟು ಹೋಗಿದ್ದು ಸಾಕಷ್ಟು ಅವಘಡಗಳಿಗೆ ಕಾರಣವಾಗುತ್ತಿವೆ.
ಗಾಂಜಾ ಮಾರಾಟ: ಭಟ್ಕಳ ಮತ್ತು ಕುಮಟಾದಲ್ಲಿ ಮಾರಾಟ ಮಾಡುತ್ತಿದ್ದವರ ಆರೋಪಿಗಳ ಬಂಧನ
ಪಟ್ಟಣದ ಪಿ.ಎಂ.ಹೈಸ್ಕೂಲ್ ಬಳಿ ಬೊಬ್ರುವಾಡಾ ಕ್ರಾಸ್ ಮತ್ತು ಅಲ್ಲೇ ಹತ್ತಿರದ ಬಂಡಿಕಟ್ಟೆ ಬಳಿ ರಸ್ತೆಯಲ್ಲಿ ಗುಂಡಿ ಇದೆಯೋ ಅಥವಾ ಗುಂಡಿಯಲ್ಲಿ ರಸ್ತೆ ಇದೆಯೋ ಎಂದು ಹುಡುಕುವಷ್ಟರ ಮಟ್ಟಿಗೆ ಆಡಳಿತ ವ್ಯವಸ್ಥೆಯನ್ನು ಅಣಕಿಸುವಂತಿದೆ.ಆಗಾಗ ಪುರಸಭೆ ಮತ್ತಿತರ ಸಂಬಂಧಿತ ಇಲಾಖೆಗಳಿಂದ ರಸ್ತೆ ಗುಂಡಿಗಳಿಗೆ ಗ್ರಿಟ್ ಪೌಡರ್ ಸುರಿಯುವುದು,ಕಲ್ಲು ,ಮಣ್ಣು ,ಜಲ್ಲಿ ಕಾಂಕ್ರೀಟ್ ಒಟ್ಟಿನಲ್ಲಿ ಏನನ್ನಾದರೂ ಸುರಿದು ರಸ್ತೆ ಹೊಂಡ ಮುಚ್ಚಲು 2-3 ಬಾರಿ ತಾತ್ಕಾಲಿಕ ಕ್ರಮ ಕೈಗೊಂಡು ಎಷ್ಟು ಮೊತ್ತದ ಬಿಲ್ ಪಾಸ್ ಮಾಡಿಕೊಂಡರೋ ಏನೋ ಎಂದು ಸಾರ್ವಜನಿಕರು ಆಡಿಕೊಳ್ಳುವಂತಾಗಿದೆ.
ಮಂಜಗುಣಿ ಮುಖ್ಯ ರಸ್ತೆ ಇಂದ ತಿರುವು ಪಡೆದು ಸಾಗುವ ಬಬ್ರುವಾಡದ ಮುಖ್ಯ ರಸ್ತೆಗೆ ಇಲ್ಲಿನ ಕೆಲ ಪ್ರಮುಖರು ಮತ್ತು ಸಾರ್ವಜನಿಕರು ತಮ್ಮೂರಿನ ಹೊಂಡ ಬಿದ್ದ ರಸ್ತೆಗೆ ತಮ್ಮ ಸ್ವಂತ ಖರ್ಚು ಮತ್ತು ಶ್ರಮದಾನ ಮಾಡಿ ರಸ್ತೆಯ ಹಲವು ಹೊಂಡಗಳನ್ನು ಕಾಂಕ್ರೀಟ್ ಬಳಸಿ ಮುಚ್ಚಿದ್ದು ಅದು ಸಂಚಾರ ಯೋಗ್ಯವಾಗಿದೆ. ಆದರೆ ಇದೆ ವೇಳೆ ಪಿ ಎಂ ಪ್ರೌಢಶಾಲೆ ಎದುರು ಮತ್ತು ಬಂಡಿಕಟ್ಟೆ ಬಳಿ ಮಂಜುಗುಣಿ ಮುಖ್ಯ ರಸ್ತೆಯಲ್ಲಿ ಪುರಸಭೆಯವರು ಮುಚ್ಚಿದ್ದರೆನ್ನಲಾದ ಗ್ರೀಟ್ ಪೌಡರ,ಮಣ್ಣು – ಕಲ್ಲು ಗುಂಡುಗಳು ಮಳೆ ನೀರಿಗೆ ಮತ್ತು ವಾಹನಗಳ ಟೈಯರ್ ಗಳಡಿ ಸಿಲುಕಿ, ಹೊಂಡ ತಗ್ಗುಗಳು ಇನ್ನಷ್ಟು ಹೆಚ್ಚುವಂತಾಗಿದೆ ಎನ್ನುವುದು ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ.
ಇದೇ ರಸ್ತೆಯ ಪೂಜಗೇರಿ ಹಳ್ಳದ ಕಿರು ಸೇತುವೆ ಅಕ್ಕ ಪಕ್ಕದಲ್ಲಿಯಂತೂ ಪರಿಸ್ಥಿತಿ ಹೇಳತೀರದಾಗಿದೆ. ಲೋಕೋಪಯೋಗಿ ಇಲಾಖೆ ಈ ಭಾಗದ ಜನರಿಗೆ ಸಿಹಿ ನೀರು ಇಂಗಿಸಲು ನೆರವಾಗುವಂತೆ ಇಂಗು ಗುಂಡಿ ಭಾಗ್ಯ ನೀಡುತ್ತಿದೆ ಎಂಬ ಅಣಕು ಮಾತು ಕೇಳಿ ಬರುತ್ತಿದ್ದು, ರಸ್ತೆಯ ಇಕ್ಕೆಲಗಳಲ್ಲಿ ಹೊಂಡಗಳು ನಿರ್ಮಾಣವಾಗಿ, ಜಲ್ಲಿಕಲ್ಲುಗಳೆದ್ದು ಸಂಚಾರಕ್ಕೆ ತೀವ್ರ ಸಮಸ್ಯೆ ಎದುರಾಗುತ್ತಿದೆ. ಇಲ್ಲಿ ಹಲವು ಬಾರಿ ಒಂದಲ್ಲ ಒಂದು ಅವಘಡಗಳು ಸಂಭವಿಸುತ್ತಿದ್ದು ಸೈಕಲ್ ಹಾಗೂ ವಾಹನ ಸವಾರರು,ಪಾದಾಚಾರಿಗಳು ಹರಸಾಹಸ ಪಟ್ಟು ಮುಂದೆ ಹೋಗುವಂತಾಗಿದೆ.
ಪೂಜಗೇರಿ ಸೇತುವೆಯ ರಸ್ತಿಯಂಚಿನ ಒಂದು ಬದಿಯಯಲ್ಲಿ ಬೆಳೆದ ಗಿಡಗಂಟಿಗಳಿಂದ ರಸ್ತೆ ಮತ್ತು ಸೇತುವೆ ಅಂದಾಜಿಸಲು ಕೆಲ ವಾಹನ ಚಾಲಕರಿಗೆ ಕಷ್ಟವಾಗುವ ಸಾಧ್ಯತೆ ಇದೆ. ಈ ಹಿಂದೆ ಅದಾವುದೋ ವಾಹನ ಬಡಿದು ಇಲ್ಲವೇ ಇತರೆ ಕಾರಣದಿಂದ ತುಂಡಾಗಿ ನೇತಾಡುತ್ತಿರುವ ಸೇತುವೆಯ ತಡೆಗೋಡೆ ಪಟ್ಟಿಗಳು ದಾರಿಹೋಕರ ಗಮನಕ್ಕೆ ಬಾರದೇ, ಆಯ ತಪ್ಪಿ ಹಳ್ಳದ ನೀರಿನಲ್ಲಿ ಬೀಳುವ ಸಾಧ್ಯತೆ ಸಹ ಕಂಡು ಬರುತ್ತಿದೆ. ಇಲ್ಲಿ ರಾತ್ರಿ ವೇಳೆ ಬೀದಿ ದೀಪ ಇರದೇ ಕೆಲವರು ಹಳ್ಳದ ಬದಿ ಬಿದ್ದು ಅಪಾಯದಿಂದ ಪಾರಾಗಿ ಬಂದಿದ್ದಾರೆ ಎನ್ನಲಾಗಿದೆ.
ಪೂಜಗೇರಿ ಈಗ ಕೇವಲ ಹಿಂದಿನಂತಿರದೇ ಈ ಭಾಗದಲ್ಲಿ ತಲೆಯೆತ್ತಿ ನಿಂತಿರುವ ಸರಕಾರಿ ಪ್ರಥಮ ದರ್ಜೆ ಕಾಲೇಜ್,ಹಿಮಾಲಯ ಶಿಕ್ಷಣ ಸಂಸ್ಥೆ ಮತ್ತಿತರ ಕಾರಣಗಳಿಂದ ಜನನಿಬಿಡ ಪ್ರದೇಶವಾಗಿ ಗುರುತಿಸಿಕೊಂಡಿದೆ. ಇಲ್ಲಿ ದಿನ ನಿತ್ಯ ಓಡಾಡುವ ಶಾಲಾ ವಾಹನಗಳು, ಮಂಜಗುಣಿ, ಬೆಳಂಬಾರ, ಬಾಸಗೋಡ, ಶೀಳ್ಯ, ಸೂರ್ವೆ, ಕಣಗಿಲ, ಸಿಂಗನಮಕ್ಕಿ, ಹೊನ್ನೆಬೈಲ್ ಮತ್ತಿತರ ಸುತ್ತ ಮುತ್ತಲಿನ ಹತ್ತಾರು ಹಳ್ಳಿಗರ ಸಂಪರ್ಕ ವ್ಯವಸ್ಥೆಗಾಗಿ ಓಡಾಡುವ ಸರ್ಕಾರಿ ಬಸ್ಸುಗಳು, ಖಾಸಗಿ ವಾಹನಗಳು ಸಾವಿರಾರು ಸಂಖ್ಯೆಯಲ್ಲಿ ಓಡಾಟ ನಡೆಸುತ್ತಿರುತ್ತವೆ.
ಅಂಕೋಲಾದಿಂದ ಗಂಗಾವಳಿ ನದಿ ದಾಟಿ ಗೋಕರ್ಣ ಹಾಗೂ ಸುತ್ತಮುತ್ತಲಿನ ಹತ್ತಾರು ಹಳ್ಳಿಗಳನ್ನು ಸಂಪರ್ಕಿಸಲು ಮಂಜುಗುಣಿ ರಸ್ತೆ ಬಳಸುವವರೇ ಹೆಚ್ಚಿದ್ದು ಈ ರಸ್ತೆ ಎಲ್ಲಾ ರೀತಿಯಿಂದಲೂ ಅತ್ಯಂತ ಮುಖ್ಯರಸ್ತೆಯಾಗಿ ಗುರುತಿಸಿಕೊಂಡಿದೆ.
ಶಾಸಕರ ವಿಶೇಷ ಪ್ರಯತ್ನದ ಫಲವಾಗಿ ಪೂಜಗೇರಿ ಕಿರು ಸೇತುವೆ ಹೊಸದಾಗಿ ನಿರ್ಮಾಣವಾಗುವ ಆಶಾ ಭಾವನೆ ಕೇಳಿ ಬಂದಿದೆಯಾದರೂ,ಸದ್ಯದ ಮಟ್ಟಿಗೆ ಪೂಜಗೇರಿ ಸೇತುವೆ ಅಕ್ಕ -ಪಕ್ಕದ ರಸ್ತೆ ಗುಂಡಿ ರಿಪೇರಿ ಇಲ್ಲವೇ ಮರುಡಾಂಬರಿಕರಣ ಮತ್ತು ಹಾನಿಯಾಗಿರುವ ಸೇತುವೆಯ ರಕ್ಷಣಾ ಗೋಡೆಯ ಒಂದು ಬದಿಯ ಸಿಮೆಂಟ್ ಪಟ್ಟಿ ಇದ್ದ ಸ್ಥಳದಲ್ಲಿ ಸುರಕ್ಷತೆಗೆ ಒತ್ತು ನೀಡುವಂತೆ ಸ್ಥಳೀಯರು ಆಗ್ರಹಿಸುತ್ತಿದ್ದಾರೆ.
ಒಟ್ಟಿನಲ್ಲಿ ಮಂಜುಗುಣಿ ಮುಖ್ಯ ರಸ್ತೆಯ ಸಮಸ್ಯೆಯನ್ನು ಪರಿಶೀಲಿಸಿ,ಸೂಕ್ತ ಕ್ರಮ ಕೈಗೊಳ್ಳದಿದ್ದಲ್ಲಿ ಬರುವ ಅಕ್ಟೋಬರ್ 2ರ ಗಾಂಧಿ ಜಯಂತಿಯಂದು,ಪಿಎಂ ಪ್ರೌಢಶಾಲೆ ಎದುರು,ಬಂಡಿ ಕಟ್ಟೆ ಬಳಿ,ಪೂಜಗೇರಿ ಕಿರು ಸೇತುವೆ ಅಕ್ಕ-ಪಕ್ಕಗಳಲ್ಲಿ ಗಿಡ ನೆಡುವ ಇಲ್ಲವೇ ಇನ್ನಿತರ ರೀತಿಯಲ್ಲಿ ,ಪ್ರತಿಭಟಿಸಲು ಸಾರ್ವಜನಿಕರು ಮುಂದಾದಂತಿದೆ.ಈಗಲಾದರೂ ಸಂಬಂಧಿತ ಇಲಾಖೆಗಳು ಮತ್ತು ಸ್ಥಳೀಯ ಗ್ರಾಪಂ ಹಾಗೂ ಪುರಸಭೆ ,ಹಾಗೂ ಇತರೆ ಆಡಳಿತ ವರ್ಗ ಮತ್ತು ಜನಪ್ರತಿನಿಧಿಗಳು ಎಚ್ಚೆತ್ತು ಸಮಸ್ಯೆ ಪರಿಹಾರಕ್ಕೆ ಮುಂದಾಗಬೇಕೆನ್ನುವುದು ಪ್ರಜ್ಞಾವಂತರ ಅನಿಸಿಕೆ ಆಗಿದೆ.
ಇನ್ನು ಹದಗೆಟ್ಟಿರುವ ಕೆ.ಸಿ. ರಸ್ತೆಗೆ ಕೋಟಿ ರೂಪಾಯಿ ಅನುದಾನ ಮಂಜೂರಿಯಾಗಿ ಗುದ್ದಲಿ ಪೂಜೆ ನಡೆದು ಸುಮಾರು 6 ತಿಂಗಳು ಕಳೆದಿದ್ದು, ಈ ರಸ್ತೆ ಹೊಸದಾಗಿ ನಿರ್ಮಾಣವಾಗುವವರೆಗೆ,ಆಡಳಿತ ವ್ಯವಸ್ಥೆಗೆ ಹಿಡಿ ಶಾಪ ಹಾಕುತ್ತಾ ಕಾಯಬೇಕಾದ ಅನಿವಾರ್ಯತೆ ಸಾರ್ವಜನಿಕರದ್ದಾಗಿದೆ.ಈ ಮಧ್ಯೆ ರಸ್ತೆಯಲ್ಲಿ ನಿಲ್ಲುವ ರಾಡಿ ನೀರಿನ ಅಭಿಷೇಕವನ್ನೂ ಪಾದಾಚಾರಿಗಳು ಸಹಿಸಿಕೊಳ್ಳಬೇಕಿದೆ.
ಒಟ್ಟಿನಲ್ಲಿ ಬರುವ ಅಕ್ಟೋಬರ್ 2 ರ ವರೆಗೆ ಸುಮ್ಮನಿರುವ ಸಾರ್ವಜನಿಕರ ಶಾಂತಿಯ ಮಂತ್ರಕ್ಕೆ ಆಡಳಿತ ವರ್ಗ ಸ್ಪಂದಿಸಿ ತಮ್ಮ ಜವಾಬ್ದಾರಿ ನಿಭಾಯಿಸುವರೇ ಕಾದುನೋಡಬೇಕಿದೆ.
ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ