ಕಾರಿಗೆ ಡಿಕ್ಕಿ ಹೊಡೆದ ಲಾರಿ: ಹೆಸ್ಕಾಂ ಸಿಬ್ಬಂದಿ ಮತ್ತು ಕುಟುಂಬಸ್ಥರಿಗೆ ಗಾಯ : ಹೆಚ್ಚಿನ ಚಿಕಿತ್ಸೆಗಾಗಿ ಹುಬ್ಬಳ್ಳಿ ಆಸ್ಪತ್ರೆಗೆ ದಾಖಲು
ಅಂಕೋಲಾ: ಲಾರಿಯೊಂದು ಕಾರಿಗೆ ಡಿಕ್ಕಿ ಹೊಡೆದ ಪರಿಣಾಮ ಕಾರು ನುಜ್ಜು ಗುಜ್ಜಾಗಿ,ಕಾರಿನಲ್ಲಿ ಪ್ರಯಾಣಿಸುತ್ತಿದ್ದ ದಂಪತಿಗೆ ತೀವ್ರ ಸ್ವರೂಪದ ಗಾಯಗಳಾದ ಘಟನೆ ಅಂಕೋಲಾ ತಾಲೂಕಿನ ಶಿರೂರು ಬಳಿ ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಸಂಭವಿಸಿತ್ತು. 112 ತುರ್ತು ವಾಹನ ಸಿಬ್ಬಂದಿಗಳು ಸ್ಥಳಕ್ಕೆ ದೌಡಾಯಿಸಿ, ಸ್ಥಳೀಯರರ ಸಹಕಾರದಲ್ಲಿ ತುರ್ತು ಕ್ರಮ ಕೈಗೊಂಡಿದ್ದರು.
ಚಾಲಕನ ನಿಯಂತ್ರಣ ತಪ್ಪಿ ಪ್ಯಾಸೆಂಜರ್ ಟೆಂಪೊ ಪಲ್ಟಿ: ಓರ್ವ ಸಾವು: 12 ಪ್ರಯಾಣಿಕರಿಗೆ ಗಾಯ
ಕುಂದಾಪುರದ ವಿದ್ಯುತ್ ಸರಬರಾಜು ಮಂಡಳಿಯ ಸಿಬ್ಬಂದಿ ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ನಿವಾಸಿ ಮಂಜುನಾಥ ಬಸವರಾಜ ಕೋಳುರು (35) ಮತ್ತು ಅವರ ಪತ್ನಿ ಅಶ್ವಿನಿ ಮಂಜುನಾಥ ಕೋಳುರು (24) ಅಪಘಾತದಲ್ಲಿ ಗಾಯಗೊಂಡವರಾಗಿದ್ದು ಅವರು ಅಕ್ಟೋಬರ್ 8 ರಂದು ಅಂಕೋಲಾದಿಂದ ಕುಂದಾಪುರ ಕಡೆ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಸಂದರ್ಭದಲ್ಲಿ ಎದುರಿನಿಂದ ಅತಿ ವೇಗವಾಗಿ ಮತ್ತು ನಿರ್ಲಕ್ಷ್ಯದಿಂದ ಲಾರಿ ಚಲಾಯಿಸಿ ಬಂದ ಲಾರಿ ಚಾಲಕ ರಸ್ತೆಯ ಬಲಬದಿಗೆ ಬಂದು ಕಾರಿಗೆ ಡಿಕ್ಕಿ ಹೊಡೆದ ಪರಿಣಾಮ ಮಂಜುನಾಥ ಅವರ ತಲೆ ಮತ್ತು ಬಲ ಕೈ ಗೆ ಗಂಭೀರ ಸ್ವರೂಪದ ಗಾಯಗಳಾಗಿದ್ದು ಅವರ ಪತ್ನಿ ಅಶ್ವಿನಿ ಅವರ ಬಲ ಭುಜಕ್ಕೆ ತೀವ್ರ ಸ್ವರೂಪದ ಗಾಯಗಳಾಗಿವೆ.
ಗಾಯಾಳುಗಳನ್ನು ಕಾರವಾರದ ಜಿಲ್ಲಾ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗೆ ಹುಬ್ಬಳ್ಳಿಗೆ ಸಾಗಿಸಲಾಗಿದ್ದು ಅಕ್ಟೋಬರ್ 11 ರಂದು ಈ ಕುರಿತು ಗಾಯಾಳು ಮಂಜುನಾಥ ಅವರ ತಂದೆ ಬಸವರಾಜ ಕೋಳುರು ಅವರು ಲಾರಿ ಚಾಲಕ ತಮಿಳುನಾಡು ನಿವಾಸಿ ನಲ್ಲಯನ್ ನಟರಾಜನ ಎನ್ನುವವರ ವಿರುದ್ಧ ದೂರು ದಾಖಲಿಸಿದ್ದು ಅಂಕೋಲಾ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.
ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ