ಸರಕಾರಿ ಪ್ರೌಢ ಶಾಲೆ ಗುಮಾಸ್ತ ಅಕಾಲಿಕ ನಿಧನ: ಮನೆಯಲ್ಲಿ ಸ್ನಾನ ಮಾಡುತ್ತಿದ್ದ ವ್ಯಕ್ತಿಯೋರ್ವ ರ-ಕ್ತ ವಾಂತಿ ಮಾಡಿಕೊಂಡು ಕುಸಿದು ಬಿದ್ದು ಸಾವು
ಅಂಕೋಲಾ:ಮನೆಯಲ್ಲಿ ಸ್ನಾನ ಮಾಡುತ್ತಿದ್ದ ವ್ಯಕ್ತಿಯೋರ್ವ ರ-ಕ್ತ ವಾಂತಿ ಮಾಡಿಕೊಂಡು ಕುಸಿದು ಬಿದ್ದು ಮೃತ ಘಟನೆ ಪಟ್ಟಣದ ಕಾರವಾರ ರಸ್ತೆ ಕಣಕಣೇಶ್ವರ ದೇವಸ್ಥಾನದ ಬಳಿ ಸಂಭವಿಸಿದೆ. ಅಲಗೇರಿ ಪ್ರೌಢ ಶಾಲೆಯ ಗುಮಾಸ್ತ ಗುರುದಾಸ ವಿಷ್ಣು ನಾಯ್ಕ(53) ಮೃತ ವ್ಯಕ್ತಿಯಾಗಿದ್ದು ಕಳೆದ ಕೆಲವು ದಿನಗಳಿಂದ ಚಳಿ ಜ್ವರದಿಂದ ಬಳಲುತ್ತಿದ್ದ ಈತ ದಿನಾಂಕ 15 ಮೇ 2023 ರಂದು ತನ್ನ ಕರ್ತವ್ಯಕ್ಕೆ ರಜೆ ಪಡೆದು ಮನೆಯಲ್ಲಿ ವಿಶ್ರಾಂತಿ ಪಡೆಯುತ್ತಿದ್ದು ,ಸೋಮವಾರ ಮಧ್ಯಾಹ್ನ ಸ್ನಾನಕ್ಕೆ ತೆರಳಿದ ಸಂದರ್ಭದಲ್ಲಿ ಆರೋಗ್ಯ ತೊಂದರೆ ಇಲ್ಲವೇ ಯಾವುದೋ ಕಾರಣದಿಂದ ರಕ್ತ ವಾಂತಿ ಮಾಡಿಕೊಂಡು ಕುಸಿದು ಬಿದ್ದಿರುವುದಾಗಿ ತಿಳಿದು ಬಂದಿದೆ.
ತಕ್ಷಣ ಆತನ ಕುಟುಂಬಸ್ಥರು ಮತ್ತು ಅಕ್ಕಪಕ್ಕದ ಮನೆಯವರು ಸೇರಿ ಆಟೋ ರಿಕ್ಷಾದಲ್ಲಿ ಸರ್ಕಾರಿ ಆಸ್ಪತ್ರೆಗೆ ಸಾಗಿಸಿದರಾದರೂ, ವೈದ್ಯರು ಪರೀಕ್ಷಿಸಿ ವ್ಯಕ್ತಿ ಮೃತ ಪಟ್ಟಿರುವುದಾಗಿ ಖಚಿತಪಡಿಸಿದರು ಎಂದು ತಿಳಿದು ಬಂದಿದೆ. ಈ ಕುರಿತು ಅಂಕೋಲಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು ಪಿ.ಎಸ್. ಐ ಕುಮಾರ ಕಾಂಬಳೆ ಪ್ರಕರಣ ದಾಖಲಿಸಿದ್ದಾರೆ. ಮೃತ ಗುರುದಾಸ ಈ ಹಿಂದೆ ಅಮದಳ್ಳಿ, ಕಲ್ಲೇಶ್ವರ, ಅಂಕೋಲಾ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ, ಕುಮಟಾ ಡಯಟ್ ಸೇರಿದಂತೆ ವಿವಿಧೆಡೆ ಮೂರು ದಶಕಗಳಿಗೂ ಹೆಚ್ಚು ಕಾಲದಿಂದ ಸುದೀರ್ಘ ಸೇವೆ ಸಲ್ಲಿಸುತ್ತಿದ್ದು ಪ್ರಸ್ತುತ ಅಲಗೇರಿಯ ಸರಕಾರಿ ಪ್ರೌಢ ಶಾಲೆಯಲ್ಲಿ ಗುಮಾಸ್ತನಾಗಿ ಸೇವೆ ಸಲ್ಲಿಸುತ್ತಿದ್ದರು.
ತನ್ನ ಮೃದು ಸ್ವಭಾವ, ಹಾಸ್ಯ ಪೃವೃತ್ತಿಯ ಮೂಲಕವೂ ಅಪಾರ ಗೆಳೆಯರನ್ನು ಹೊಂದಿದ್ದ ಗುರುದಾಸ, ಇತ್ತೀಚೆಗಷ್ಟೇ ಮುಕ್ತಾಯಗೊಂಡ ಚುನಾವಣಾ ನಿಮಿತ್ತ ಕರ್ತವ್ಯವನ್ನು ನಿರ್ವಹಿಸಿದ್ದರು. ಗುರುದಾಸ ಇವರ ಅಕಾಲಿಕ ನಿಧನಕ್ಕೆ ಶಾಸಕ ಸತೀಶ ಸೈಲ್, ಅಲಗೇರಿಯ ಹಲವು ಪ್ರಮುಖರು, ಪೌಢ ಶಾಲೆಯ ಮುಖ್ಯಾಧ್ಯಾಪಕರು, ಸಹಶಿಕ್ಷಕರು , ವಿದ್ಯಾರ್ಥಿಪಾಲಕರು, ವಸಂತ ನಾಯಕ ಜಮೋಡ ಸೇರಿದಂತೆ ಹಲವು ಗಣ್ಯರು ಸಂತಾಪ ಸೂಚಿಸಿದ್ದಾರೆ.
ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ