ನಿಯಂತ್ರಣ ತಪ್ಪಿ ರಸ್ತೆಯಿಂದ ಉರುಳಿ ಬಿದ್ದ ಕಾರು: ಓಪನ್ ಆದ ಏರ್ ಬ್ಯಾಗ್‌ನಿಂದ ತಪ್ಪಿತು ಪ್ರಾಣಾಪಾಯ
ಅಂಕೋಲಾ: ರಾಷ್ಟ್ರೀಯ ಹೆದ್ದಾರಿ 66 ರ ಗೌರಿಕೆರೆ ಪ್ರದೇಶ ಮಳೆಗಾಲದ ದಿನಗಳಲ್ಲಿ ಎಕ್ಸಿಡೆಂಟ್ ಹಾಟ್ ಸ್ಪಾಟ್ ಎನ್ನುವಂತಾಗಿದ್ದು, ಮಂಗಳವಾರ ಮಧ್ಯಾಹ್ನ ನೀಲಿ ಬಣ್ಣದ ಬಲೆನೋ ಕಾರೊಂದು ತಲೆಕೆಳಗಾಗಿ ಬಿದ್ದು ಜಖಂ ಗೊಂಡಿದೆ.ಅದೃಷ್ಟವಶಾತ್ ಏರ್ ಬ್ಯಾಗ್ ಓಪನ್ ಆಗಿದ್ದರಿಂದ ಚಾಲಕ ಮತ್ತು ಇನ್ನೋರ್ವ ಯುವಕ ಪ್ರಾಣ ಪಯದಿಂದ ಪಾರಾಗಿದ್ದಾರೆ.
ಚಲಿಸುತ್ತಿದ್ದ ಕಾರೊಂದು ಚಾಲಕನ ನಿಯಂತ್ರಣ ತಪ್ಪಿ, ಹೆದ್ದಾರಿ ಅಂಚಿಗೆ ಪಲ್ಟಿಯಾದ ಘಟನೆ ಅಂಕೊಲಾ ತಾಲೂಕಿನ ರಾ.ಹೆ 66 ರ ಬಾಳೆಗುಳಿ – ಹಟ್ಟಿಕೇರಿ ಟೋಲ್ ನಾಕಾ ಮಾರ್ಗಮಧ್ಯೆ ಗೌರಿಕೆರೆ ಪ್ರದೇಶದಲ್ಲಿ ಸಂಭವಿಸಿದೆ. KA 31 N 6041 ನೊಂದಣಿ ಸಂಖ್ಯೆಯ ನೀಲಿ ಬಣ್ಣದ ಬಲೇನೋ ಕಾರ್ ಅಪಘಾತಕ್ಕೀಡಾಗಿದ್ದು, ಯಲ್ಲಾಪುರ ಉಮ್ಮಚಿಗೆ ನಿವಾಸಿಯದ್ದು ಎನ್ನಲಾಗಿದೆ.
ವಾಹನದ ಮಾಲಕ ಶ್ರೀಕಾಂತ ಭಟ್ಟ ಎನ್ನುವವರು ಕಾರವಾರದಲ್ಲಿದ್ದು, ಅವರನ್ನು ಕರೆದುಕೊಂಡು ಬರಲು ಯುವಕರಿಬ್ಬರು ಕಾರನ್ನು ತೆಗೆದುಕೊಂಡು ಅಂಕೋಲಾ ಮಾರ್ಗವಾಗಿ ಕಾರವಾರ ಕಡೆ ಹೋಗುತ್ತಿದ್ದಾಗ ದಾರಿಮಧ್ಯೆ ಗೌರಿಕೆರೆ ಪ್ರದೇಶದ ಬಳಿ , ಹೆದ್ದಾರಿಯಲ್ಲಿ ನಿಂತಿರಬಹುದಾದ ನೀರು ಇಲ್ಲವೇ ಇನ್ನಿತರೇ ಕಾರಣಗಳಿಂದ ಚಾಲಕನ ನಿಯಂತ್ರಣ ತಪ್ಪಿದ ಕಾರು ,ಹೆದ್ದಾರಿ ಅಂಚಿಗೆ ಪಲ್ಟಿಯಾಗಿ ಬೀಳುವಂತಾಯಿತು ಎನ್ನಲಾಗಿದೆ.
ಅಪಘಾತದ ರಭಸಕ್ಕೆ ವಾಹನ ತಲೆ ಕೆಳಗಾಗಿ ಬಿದ್ದು ಜಖಂ ಗೊಂಡಿದೆ. ಅದೃಷ್ಟವಶಾತ್ ಏರ್ ಬ್ಯಾಗ್ ಓಪನ್ ಆಗಿದ್ದರಿಂದ ಚಾಲಕ ಹಾಗೂ ಆತನ ಜೊತೆಗಿದ್ದ ಇನ್ನೋರ್ವ ಯುವಕ ಪ್ರಾಣಪಾಯದಿಂದ ಪಾರಾಗಿದ್ದು, ಇಬ್ಬರಿಗೂ ಚಿಕ್ಕ ಪುಟ್ಟ ಗಾಯಗಳಾಗಿದೆ. NHAI ಸುರಕ್ಷತಾ ಸಿಬ್ಬಂದಿಗಳು ಘಟನಾ ಸ್ಥಳಕ್ಕೆ ಆಗಮಿಸಿ ಕರ್ತವ್ಯ ನಿರ್ವಹಿಸಿದರು. ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಅಪಘಾತಗೊಂಡ ಕಾರನ್ನು ಮೇಲೆತ್ತಿ ಸಾಗಿಸಲಾಗಿದ್ದು , ಅಪಘಾತದ ಘಟನೆ ಕುರಿತಂತೆ ಹೆಚ್ಚಿನ ಮಾಹಿತಿಗಳು ತಿಳಿದು ಬರಬೇಕಿದೆ. ಕಳೆದ ಕೆಲ ದಿನಗಳ ಹಿಂದಷ್ಟೇ ವೈದ್ಯರೊಬ್ಬರ ಪುತ್ರ ಚಲಾಯಿಸುತ್ತಿದ್ದ ಥಾರ್ ವಾಹನ ಇದೇ ಪ್ರದೇಶದಲ್ಲಿ ಪಲ್ಟಿಯಾಗಿ ಬಿದ್ದ ಘಟನೆ ಸಂಭವಿಸತ್ತು . ಈ ಹಿಂದೆ ಇದೇ ಸ್ಥಳದಲ್ಲಿ ಸರ್ಕಾರಿ ಅಧಿಕಾರಿಗಳಿದ್ದ ವಾಹನ ಪಲ್ಟಿಯಾಗಿ ಜೀವ ಬಲಿ ಪಡೆದಿದ್ದ ಗೌರಿಕೆರೆ ಪ್ರದೇಶ ಮಳೆಗಾಲದಲ್ಲಿ ಎಕ್ಸಿಡೆಂಟ್ ಹಾಟ್ ಸ್ಪಾಟ್ ಎನ್ನಿಸುವಂತಾಗಿದ್ದು,ಸಂಬಂಧಿಸಿದವರು ಇಲ್ಲಿ ಹೆದ್ದಾರಿ ಸಂಚಾರ ಸುರಕ್ಷತೆಗೆ ಒತ್ತು ನೀಡಬೇಕಿದೆ ಎಂಬ ಮಾತು ಸಾರ್ವಜನಿಕ ವಲಯದಿಂದ ಕೇಳಿ ಬಂದಿದೆ.
ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ