ಕಾರವಾರ: ಜಿಲ್ಲೆಯ ಕರಾವಳಿಯಲ್ಲಿ ಕಳೆದ ಎರಡು ತಿಂಗಳಿನಿoದ ಬಂದ್ ಆಗಿದ್ದ ಆಳ ಸಮುದ್ರ ಮೀನುಗಾರಿಕೆ ಆಗಸ್ಟ್ 1ರಿಂದ ಆರಂಭಗೊಳ್ಳಲಿದೆ. ಮಳೆಗಾಲದ 2 ತಿಂಗಳ ಕಾಲ ಸ್ತಬ್ಧವಾಗಿದ್ದ ಮೀನುಗಾರಿಕೆ ಪುನರರಾಂಭಿಸಲು ನಗರದ ಭೈತಖೋಲ್ ಬಂದರಿನಲ್ಲಿ ಮೀನುಗಾರರು ಅಂತಿಮ ಸಿದ್ದತೆ ನಡೆಸಿದ್ದಾರೆ. ಸರಕಾರದ ನಿಯಮಾವಳಿಗಳ ಪ್ರಕಾರ ಪ್ರತಿವರ್ಷ ಜೂನ್ 1ರಿಂದ ಅಂತ್ಯದವರೆಗೂ ಆಳಸಮುದ್ರ ಮೀನುಗಾರಿಕೆಯ ಮೇಲೆ ನಿರ್ಬಂಧ ಹೇರಲಾಗಿತ್ತು. ಮೀನುಗಳ ಸಂತಾನೋತ್ಪತ್ತಿ ದೃಷ್ಟಿಯಿಂದ ಹಾಗೂ ಮಳೆಗಾಲದ ಮೀನುಗಾರಿಕೆ ಅಪಾಯಕಾರಿಯಾಗಿರುವ ಹಿನ್ನೆಲೆಯಲ್ಲಿ ಪ್ರತಿವರ್ಷ ಹೀಗೆ ಎರಡು ತಿಂಗಳುಗಳ ಕಾಲ ನಿಷೇಧ ಹೇರಲಾಗುತ್ತದೆ. ಸದ್ಯ ನಿಷೇಧದ ಅವದಿ ಮುಗಿಯುತ್ತಿದ್ದು, ಆಗಸ್ಟ್ 1ರಿಂದ ಹೊಸ ಮೀನುಗಾರಿಕೆ ವರ್ಷದ ಮೀನುಗಾರಿಕೆ ಆರಂಭವಾಗಲಿದೆ. ಅರದ ಪೂರ್ವತಯಾರಿಯಾಗಿ ಈಗಾಗಲೇ ಮೀನುಗಾರಿಕಾ ಬಂದರುಗಳಲ್ಲಿ ಬೋಟ್‌ಗಳ ದುರಸ್ತಿ ಕಾರ್ಯ ಮುಕ್ತಾಯ ಹಂತ ತಲುಪಿದ್ದು, ತವರಿಗೆ ತೆರಳಿದ್ದ ಕಾರ್ಮಿಕರು ಬಂದರುಗಳತ್ತ ಮುಖ ಮಾಡಿದ್ದಾರೆ. ಬಲೆಗಳನ್ನು ದುರಸ್ತಿಪಡಿಸುವ, ಎರಡು ತಿಂಗಳುಗಳ ಕಾಲ ಮನೆಗಳಲ್ಲಿದ್ದ ಮೀನುಗಾರಿಕಾ ಸಲಕರಣೆ ಸಾಮಾಗ್ರಿಗಳನ್ನ ಬೋಟ್‌ಗೆ ತುಂಬಿಸುವ ಕಾರ್ಯ ನಡೆದಿದೆ.
ಅಲ್ಲದೇ ಕೆಲ ಮೀನುಗಾರರು ಶನಿವಾರ ಬೋಟ್‌ಗಳಲ್ಲಿ ಹೋಮ ನಡೆಸಿ, ಪೂಜೆ ಕೈಗೊಂಡಿದ್ದು, ಈ ಬಾರಿಯಾದರೂ ಉತ್ತಮ ಮೀನುಗಾರಿಕೆಯಾಗಲಿ ಎಂದು ಪ್ರಾರ್ಥಿಸಿಕೊಂಡಿದ್ದಾರೆ. ಎರಡು ತಿಂಗಳ ನಿಷೇಧದ ಅವದಿಯಲ್ಲಿ ಬೋಟ್‌ಗಳ ಎಂಜಿನ್ ಸರ್ವಿಸ್, ಮುರಿದು ಹೋದ ಹಲಗೆಗಳ ಬದಲಾವಣೆ, ಬಲೆಗಳ ದುರಸ್ಥಿ, ಹೊಸ ಬಲೆಗಳ ಖರೀದಿ, ಬೋಟ್‌ಗಳಿಗೆ ಬಣ್ಣ ಬಳಿದು ಸ್ವಚ್ಛಗೊಳಿಸುವುದು, ಪರವಾನಗಿ ನವೀಕರಣ, ಡೀಸೆಲ್ ಪಾಸ್ ಪುಸ್ತಕ, ಮೀನುಗಾರಿಕೆಗೆ ಆರಂಭಿಕ ಬಂಡವಾಳ ಕ್ರೂಡೀಕರಣ,ಕಾರ್ಮಿಕರನ್ನು ಒಟ್ಟು ಮಾಡುವುದು ಸೇರಿದಂತೆ ಮೀನುಗಾರಿಕೆಗೆ ಅಗತ್ಯ ಸಿದ್ಧತೆಗಳನ್ನು ಈಗಾಗಲೇ ಮಾಡಿಕೊಳ್ಳಲಾಗಿದೆ. ನಿರ್ಬಂಧದ ಅವದಿ ಮುಕ್ತಾಯವಾದರೂ ಮೀನುಗಾರಿಕೆಹೆ ಯಾವಾಗ ಹೋಗಬೇಕು ಎಂಬುದನ್ನು ಸ್ಥಳೀಯ ಮೀನುಗಾರರ ಸಂಘ ನಿರ್ಧರಿಸಲಿದ್ದು, ಈ ವರ್ಷ ಆಗಸ್ಟ್ ಮೊದಲ ವಾರದಲ್ಲಿ ಬಹುತೇಕ ಬೋಟ್‌ಗಳು ಕಡಲಿಗಿಳಿಯಲು ಸಜ್ಜಾಗಿ ಬಂದರಿನಲ್ಲಿ ಲಂಗರು ಹಾಕಿವೆ.
ಬ್ಯೂರೋ ರಿಪೋರ್ಟ, ವಿಸ್ಮಯ ನ್ಯೂಸ್