ನಾಲ್ಕೈದು ಲಕ್ಷ ಮೌಲ್ಯದ ಚಿನ್ನ-ನಗದನ್ನು ಮಹಿಳೆಗೆ ವಾಪಸ್ ನೀಡಿ ಪ್ರಾಮಾಣಿಕತೆ ಮೆರೆದ ಆಟೋ ಚಾಲಕ: ಪ್ರಾಣಿಕತೆಗೊಂದು ಮೆಚ್ಚುಗೆ ಇರಲಿ
ಮುರುಡೇಶ್ವರ: ಇಂದಿನ ಕಾಲದಲ್ಲಿ ದುಡ್ಡು ಅಥವಾ ಬೆಲೆ ಬಾಳುವ ವಸ್ತುಗಳು ಸಿಕ್ಕಿತೆಂದರೆ ದುರುಪಯೋಗಪಡಿಸಿಕೊಳ್ಳುವವರೇ ಹೆಚ್ಚು. ಅಂತದ್ದರಲ್ಲಿ ಇಲ್ಲೊಬ್ಬ ಆಟೋ ಡ್ರೈವರ್,ಆಟೋದಲ್ಲಿ ಮಹಿಳಾ ಪ್ರಯಾಣಿಕರೊಬ್ಬರು ಬಿಟ್ಟು ಹೋಗಿದ್ದ ಚಿನ್ನಾಭರಣ ಹಾಗೂ ನಗದನ್ನು ಮಹಿಳೆಗೆ ವಾಪಸ್ ನೀಡುವ ಮೂಲಕ ಪ್ರಾಮಾಣಿಕತೆ ಮೆರೆದಿದ್ದಾರೆ. ಆಟೋ ಚಾಲಕನ ಪ್ರಾಮಾಣಿಕ ಕಾರ್ಯಕ್ಕೆ ಮೆಚ್ಚಿ ಪೊಲೀಸರು ಸನ್ಮಾನ ಮಾಡಿದ್ದಾರೆ.
ಚಿನ್ನಾಭರಣ ಮರಳಿ ನೀಡಿ ಪ್ರಾಮಾಣಿಕತೆ ಮೆರೆದ ಆಟೋ ಚಾಲಕ ಚಂದ್ರು ರಾಮ ನಾಯ್ಕ ತಾಲೂಕಿನ ಶಿರಾಣಿ ನಿವಾಸಿ. ಈತ ಬಸ್ತಿ ಕಾಯ್ಕಿಣಿಯ ದೇವಿಕಾನನಿಂದ ವಿಜಯಲಕ್ಷ್ಮಿ ಎಂಬ ಮಹಿಳೆ, ಗಂಡನ ಮನೆಯಿಂದ ಭಟ್ಕಳ ತೆಂಗಿನ ಗುಂಡಿ ತಾಯಿಯ ಮನೆಗೆ ಬರುವ ವೇಳೆ ಚಿನ್ನಾಭರಣವುಳ್ಳ ಬ್ಯಾಗ್ ನ್ನು ಆಟೋ ಹಿಂಭಾಗದಲ್ಲಿ ಬಿಟ್ಟು ತೆರಳಿದ್ದಳು.
ಈ ವೇಳೆ ಆಟೋ ಚಾಲಕ ಮರಳಿ ಮುರುಡೇಶ್ವ ಕಡೆಗೆ ಹೋಗುವ ವೇಳೆಯಲ್ಲಿ ಖಾಲಿ ಹೋಗುವ ಬದಲು ಮೂರ್ನಾಲ್ಕು ಜನ ಪ್ರಯಾಣಿಕರನ್ನು ಕರೆದುಕೊಂಡು ಬಂದಿದ್ದಾನೆ. ನಂತರ ಆಯಾ ಪ್ರಯಾಣಿಕರನ್ನು ನಿಲ್ದಾಣದಲ್ಲಿ ಬಿಟ್ಟು ನೇರವಾಗಿ ಮುರುಡೇಶ್ವಕ್ಕೆ ಬಂದಾಗ ಆಟೋ ಹಿಂಬಾಗದಲ್ಲಿ ಒಂದು ಬ್ಯಾಗ್ ಇರುವುದನ್ನು ಗಮನಿಸಿ ಬ್ಯಾಗ್ ಪರಿಶೀಲನೆ ನಡೆಸಿದ್ದಾನೆ.
ಅದರಲ್ಲಿ 5 ರಿಂದ 6 ಲಕ್ಷ ಮೌಲ್ಯದಚಿನ್ನಾಭರಣ ಹಾಗೂ 10 ಸಾವಿರ ನಗದು ಇರುವುದು ತಿಳಿದಾಗ ತಕ್ಷಣ ಆಟೋ ಚಾಲಕ ಸಂಘದ ಪ್ರಮುಖರಿಗೆ ಮಾಹಿತಿ ತಿಳಿಸುತ್ತಾನೆ. ಅಷ್ಟರಲ್ಲಾಗಲೇ ಮಹಿಳೆ ತಾನು ಆಟೋದಲ್ಲಿ ಚಿನ್ನಾಭರಣವುಳ್ಳ ಬ್ಯಾಗ್ ಕಳೆದುಕೊಂಡಿರುವುದು ನೆನಪಾಗಿ ತನ್ನ ಸಂಬoಧಿ ಆಟೋ ಚಾಲಕರಿಗೆ ಮಾಹಿತಿ ತಿಳಿದ್ದಾರೆ. ಇದರಿಂದಾಗಿ ಚಿನ್ನಾಭರಣ ಕಳೆದುಕೊಂಡ ಮಹಿಳೆ ಪತ್ತೆಯಾಗಿದ್ದಾಳೆ. ಬಳಿಕ ಮಹಿಳೆಗೆ ಮುರುಡೇಶ್ವರ ಪೊಲೀಸ್ ಠಾಣೆಗೆ ಬರಲು ಮಾಹಿತಿ ನೀಡಲಾಗಿದೆ.
ಪೊಲೀಸರ ಸಮ್ಮುಖದಲ್ಲಿ ಮಹಿಳೆಗೆ ಚಿನ್ನಾಭರಣವನ್ನು ಹಸ್ತಾಂತರಿಸಲಾಗಿದ್ದು, ಈ ವೇಳೆ ಮಹಿಳೆ ಆಟೋ ಚಾಲಕನಿಗೆ ಧನ್ಯವಾದ ತಿಳಿಸಿದ್ದಾಳೆ. ಇದೇ ವೇಳೆ, ಮುರುಡೇಶ್ವರ ಪೋಲಿಸ್ ಠಾಣೆವತಿಯಿಂದ ಆಟೋ ಚಾಲಕನಿಗೆ ಸನ್ಮಾನಿಸಿ ಗೌರವಿಸಲಾಯಿತು. ಹಾಗೂ ರಿಕ್ಷಾ ಮಾಲಕರ ಹಾಗೂ ಚಾಲಕರ ಸಂಘ ಮಾವಳ್ಳಿ, ಮುರ್ಡೇಶ್ವರದ ವತಿಯಿಂದ ಕೂಡ ಆಟೋ ಚಾಲಕನಿಗೆ ಅಭಿನಂದನೆ ಸಲ್ಲಿಸಲಾಯಿತು.
ವಿಸ್ಮಯ ನ್ಯೂಸ್, ಉದಯ್ ಎಸ್ ನಾಯ್ಕ, ಭಟ್ಕಳ