ಕುಮಟಾ: ಕಾಂಗ್ರೆಸ್ ಪಕ್ಷದ ಕಾಂಟ್ರ್ಯಾಕ್ಟರ್ ಓರ್ವರ ಮನೆಯಲ್ಲಿ ಕೋಟಿ ಕೋಟಿ ಅಕ್ರಮ ಹಣ ಐ.ಟಿ. ದಾಳಿಯ ವೇಳೆ ಸಿಕ್ಕಿದ್ದು, ಅದೇ ರೀತಿ ಸಾವಿರಾರು ಕೋಟಿ ಹಣ ಸಂಗ್ರಹ ಮಾಡಿ ಪಂಚ ರಾಜ್ಯ ಚುನಾವಣೆಯ ಕಾಂಗ್ರೆಸ್ ಖರ್ಚಿಗೆ ಕಲೆಕ್ಷನ್ ಮಾಡಲಾಗುತ್ತಿರುವ ಬಗ್ಗೆ ಖಂಡಿಸಿ ಕುಮಟಾ ಬಿ.ಜೆ.ಪಿ ಮಂಡಲದ ವತಿಯಿಂದ ಇಂದು ಕುಮಟಾ ಗುಬ್ ಸರ್ಕಲ್‌ನಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು. ಕಾಂಗ್ರೆಸ್ ವಿರುದ್ಧ ಘೋಷಣೆ ಕೂಗಿ, ರಸ್ತೆ ತಡೆ ಮಾಡಿ ಪ್ರತಿಭಟನೆ ನಡೆಸಿದರು.
ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಭಾರತೀಯ ಜನತಾ ಪಾರ್ಟಿ ಕುಮಟಾ ಮಂಡಲ ವತಿಯಿಂದ ಕುಮಟಾ-ಹೊನ್ನಾವರ ವಿಧಾನಸಭಾ ಕ್ಷೇತ್ರದ ಶಾಸಕರಾದ ದಿನಕರ ಶೆಟ್ಟಿ ಅವರ ಮುಂದಾಳತ್ವದಲ್ಲಿ ಇಂದು ಕುಮಟಾದ ಗಿಬ್ ಸರ್ಕಲ್ ನಲ್ಲಿ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು. ಈ ವೇಳೆ ಹಾಜರಿದ್ದ ಬಿ.ಜೆ.ಪಿ ಮುಖಂಡರು ಕಾಂಗ್ರೆಸ್ ಸರ್ಕಾರದ ವಿರುದ್ಧ ಘೋಷಣೆ ಕೂಗುತ್ತಾ, ರಸ್ತೆ ತಡೆ ಮಾಡಿ ಪ್ರತಿಭಟಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಶಾಸಕರು ಬೆಂಗಳೂರಿನಲ್ಲಿ ಅಂಬಿಕಾಪತಿ ಎಂಬ ಕಾಂಟ್ರ್ಯಾಕ್ಟರ್ ಮನೆಯಲ್ಲಿ 42 ಕೋಟಿ ನಗದು ಹಣ ಐ.ಟಿ. ದಾಳಿಯಲ್ಲಿ ಸಿಕ್ಕಿದ್ದು, ಈ ಹಣ ಕಮಿಷನ್ ರೂಪದಲ್ಲಿ ಬಂದಿರುವ ಹಣವಾಗಿದೆ. ಕಾಂಗ್ರೆಸ್ ಸರ್ಕಾರ ಕೊಂಟ್ರಾಕ್ಟರ್ ಗಳಿಗೆಂದು ನೀಡಿದ ಬಾಕಿ ಹಣ 650 ಕೋಟಿಗೆ ಪ್ರತಿಯಾಗಿ ಕಂಟ್ರಾಕ್ಟರ್ಗಳು ನೀಡಿದ ಕಮಿಷನ್ನೆ 42 ಕೋಟಿ ಎಂಬುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.
ಇದಲ್ಲದೆ ಇನ್ನೂ ಸಾವಿರಾರು ಕೋಟಿ ಹಣ ಸಂಗ್ರಹ ಮಾಡಿ ಪಂಚ ರಾಜ್ಯ ಚುನಾವಣೆಯ ಕಾಂಗ್ರೆಸ್ ಖರ್ಚಿಗೆ ಕಲೆಕ್ಷನ್ ಮಾಡಲಾಗುತ್ತಿದೆ ಎಂಬುವ ವಿಷಯ ಭಾರೀ ಚರ್ಚೆಯಲ್ಲಿದೆ. ಇಂಡಿಯನ್ ನ್ಯಾಷನಲ್ ಕಾಂಗ್ರೆಸ್ ಪಾಲಿಗೆ ಕರ್ನಾಟಕ ಎ.ಟಿ.ಎಮ್ ಆಗಿದೆ, ಹಾಗೂ ಕಲೆಕ್ಷನ್ ಕೇಂದ್ರವಾಗಿದೆ. ಬರಕ್ಕೆ ತುತ್ತಾಗಿರುವ ರಾಜ್ಯದ ರೈತರಿಗೆ ಕಾಂಗ್ರೆಸ್ ಸರ್ಕಾರ ಪರಿಹಾರ ನೀಡಿಲ್ಲ. ವಿದ್ಯುತ್ ಕಡಿತ ವಿಪರೀತವಾಗಿದೆ. ಸರ್ಕಾರಿ ಅಧಿಕಾರಿಗಳ ವರ್ಗಾವಣೆ ದಂಧೆ ನಡೆಯುತ್ತಿದೆ. ಅಲ್ಪಸಂಖ್ಯಾತರ ಓಲೈಕೆಯಲ್ಲಿ ಸರ್ಕಾರ ಮುಳುಗಿದೆ. ಈ ಎಲ್ಲ ಅಂಶಗಳ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಮತ್ತು ಉಪ ಮುಖ್ಯಮಂತ್ರಿಗಳ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದರು.
ಈ ವೇಳೆ ಕುಮಟಾ ಬಿ.ಜೆ.ಪಿ ಮಂಡಲಾಧ್ಯಕ್ಷರಾದ ಹೇಮಂತ ಗಾಂವಕರ್ ಅವರು ಮಾತನಾಡಿ, ಕಾಂಗ್ರೆಸ್ ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದರು. ಈ ವೇಳೆ ಬಿ.ಜೆ.ಪಿ ಜಿಲ್ಲಾ ಪ್ರಮುಖರಾದ ಡಾ. ಜಿ. ಜಿ. ಹೆಗಡೆ, ವಿನೋದ ಪ್ರಭು, ಕುಮಾರ ಮಾರ್ಕಾಂಡೆ, ರಮೇಶ ಪಂಡಿತ್, ಕೆ.ಡಿ.ಸಿ.ಸಿ. ಬ್ಯಾಂಕ್ ನಿರ್ದೇಶಕರಾದ ಗಜಾನನ ಪೈ, ಮಂಡಲ ಪ್ರಧಾನ ಕಾರ್ಯದರ್ಶಿಗಳಾದ ವಿನಾಯಕ ನಾಯ್ಕ್ ಹಾಗೂ ಜಿ. ಐ. ಹೆಗಡೆ, ಪ್ರಮುಖರಾದ ವಿಶ್ವನಾಥ್ ನಾಯ್ಕ್, ಬಾಳಾ ಡಿಸೋಜ, ಎಮ್. ಎಮ್. ಹೆಗಡೆ, ಆನಂದು ಕವರಿ, ಮಧುಸೂದನ ಹೆಗಡೆ, ಪ್ರಮುಖರಾದ ಅಶೋಕ ಪ್ರಭು, ವಿನಾಯಕ ಭಟ್ ಮುಂತಾದವರು ಹಾಜರಿದ್ದರು.
ವಿಸ್ಮಯ ನ್ಯೂಸ್, ಯೋಗೇಶ ಮಡಿವಾಳ. ಕುಮಟಾ.