ಅಂಕೋಲಾ : ಕುರಿ (ಹಿಕ್ಕೆ )ಗೊಬ್ಬರ ಸಾಗಿಸುತ್ತಿದ್ದ ವಾಹನವೊಂದು ಚಾಲಕನ ನಿಯಂತ್ರಣ ತಪ್ಪಿ, ಪಲ್ಟಿಯಾದ ಘಟನೆ ತಾಲೂಕಿನ ಡೋಂಗ್ರಿ ಗ್ರಾಪಂ ವ್ಯಾಪ್ತಿಯ ಕಲ್ಲೇಶ್ವರ – ಕೋಟೆ ಘಟ್ಟ ವ್ಯಾಪ್ತಿಯಲ್ಲಿ ಸಂಭವಿಸಿದೆ. ಗದಗ ಕಡೆಯಿಂದ ಯಲ್ಲಾಪುರ ಮಾರ್ಗವಾಗಿ ರಾ.ಹೆ ಹೆದ್ದಾರಿ 63 ರಲ್ಲಿ ಸಾಗಿ ಬಂದು ನಂತರ ಗ್ರಾಮೀಣ ಪ್ರದೇಶದ ಒಳ ರಸ್ತೆ ಮೂಲಕ ಅಂಕೋಲಾ ತಾಲೂಕಿನ ಹಳವಳ್ಳಿಯ ರೈತರೊಬ್ಬರ ತೋಟಕ್ಕೆ, ಕುರಿ (ಹಿಕ್ಕೆ) ಗೊಬ್ಬರ ಸಾಗಿಸುತ್ತಿದ್ದ ವಾಹನ, ದಾರಿ ಮಧ್ಯೆ ಕೋಟೆ ಘಟ್ಟ ಬಳಿ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಗೆ ಪಲ್ಟಿಯಾಗಿ ವಿದ್ಯುತ್ತ ಕಂಬಕ್ಕೆ ಡಿಕ್ಕಿಯಾಯಿತು ಎನ್ನಲಾಗಿದೆ.
ಇದರಿಂದ ಲಾರಿಯಲ್ಲಿದ್ದ ಕುರಿ ಹಿಕ್ಕೆ ಗೊಬ್ಬರದ ಮೂಟೆಗಳು ಚೆಲ್ಲಾಪಿಲ್ಲಿಯಾಗಿ ಬೀಳುವಂತಾಗಿದೆ. ಅದೃಷ್ಟವಶಾತ್ ಲಾರಿ ಚಾಲಕ ಮತ್ತು ಸಹಾಯಕ ಪ್ರಾಣಪಾಯದಿಂದ ಪಾರಾಗಿದ್ದಾರೆ. ಅಪಘಾತದ ಘಟನೆ ಕುರಿತಂತೆ ಸ್ಥಳೀಯರು 108 ಆಂಬುಲೆನ್ಸ್ ಗೆ ಕರೆ ಮಾಡಿದರಾದರೂ,ಅದಾವುದೋ ಕಾರಣದಿಂದ ತಕ್ಷಣಕ್ಕೆ ಆಂಬುಲೆನ್ಸ್ ಸೇವೆ ದೊರೆತಿಲ್ಲ ಎನ್ನಲಾಗಿದ್ದು, ಗಾಯಾಳು ಕ್ಲೀನರ್ ನನ್ನು ಸ್ಥಳೀಯರು ಖಾಸಗಿ ವಾಹನದ ಮೂಲಕ ರಾಮನಗುಳಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ದಾಖಲಿಸಿ ಮಾನವೀಯತೆ ಮೆರೆದಿದ್ದಾರೆ.
ಹೆಚ್ಚಿನ ಚಿಕಿತ್ಸೆಗಾಗಿ ಅವರನ್ನು ಯಲ್ಲಾಪುರ ಸರಕಾರಿ ಆಸ್ಪತ್ರೆಗೆ ಸಾಗಿಸಲಾಗುವುದು ಎನ್ನಲಾಗಿದ್ದು, ಈ ಅಪಘಾತಕ್ಕೆ ಚಾಲಕನ ಅಜಾಗರೂಕತೆ, ನಿಶ್ವಾಳಜಿತನದ ಚಾಲನೆ ಕಾರಣವೇ ಅಥವಾ ಬೇರೆ ಏನಾದರೂ ಕಾರಣಗಳಿಂದ ಅಪಘಾತ ಸಂಭವಿಸಿರಬಹುದೇ ಎನ್ನಲಾಗುತ್ತಿದ್ದು, ರಸ್ತೆ ಅಪಘಾತ ಘಟನೆ ಕುರಿತಂತೆ ಪೊಲೀಸರಿಂದ ಹೆಚ್ಚಿನ ಮತ್ತು ನಿಖರ ಮಾಹಿತಿ ತಿಳಿದು ಬರಬೇಕಿದೆ.
ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ