ಭಟ್ಕಳ: ಮೊದಲೆಲ್ಲಾ ಒಂದು ಹಳ್ಳಿ ಎಂದರೆ ಅಲ್ಲೊಂದಿಷ್ಟು ಆಲೆಮನೆಗಳು ಇದ್ದೆ ಇರುತ್ತಿತ್ತು. ತಂತ್ರಜ್ಞಾನ ಬೆಳೆದಂತೆ ಬೆಲ್ಲ ತಯಾರಿಸುವ ಆಲೆಮನೆಗಳು ನಿಧಾನವಾಗಿ ಕಣ್ಮರೆಯಾದವು, ಜತೆಗೆ ಕಾರ್ಖಾನೆಗಳಲ್ಲಿ ತಯಾರಾಗುವ ಬೆಲ್ಲದಲ್ಲಿ ಕಲೆಬೆರೆಕೆಗಳು ಜತೆಯಾಗಿ ಅದು ಆರೋಗ್ಯದ ಮೇಲು ಪರಿಣಾಮ ಬೀರುವಂತಾಯಿತು. ಈ ನಡುವೆ ಅಲ್ಲೊಂದು ಇಲ್ಲೊಂದರoತೆ ಸಾಂಪ್ರದಾಯಿಕವಾಗಿ ಬೆಲ್ಲ ತಯಾರಿಸುವ ಆಲೆಮನೆ ಈಗಲೂ ಕೂಡ ಕಾಣಸಿಗುತ್ತದೆ ಎನ್ನುವುದು ಸಮಾಧಾನಕರ ಸಂಗತಿ.
ಇದು ಭಟ್ಕಳ ತಾಲೂಕಿನ ಶಿರಾಲಿಯ ಹೆಗ್ಗದ್ದೆಯ ವೆಂಕಟ್ರಮಣ ನಾಯ್ಕ ಅವರಿಗೆ ಸೇರಿದ ಆಲೆಮನೆ. ಇತ್ತಿಚೀಗೆ ಆಲೆಮನೆ ಪರಿಕಲ್ಪನೆಯಲ್ಲಿ ಕೋಣಗಳು ಮರೆಯಾಗಿ ಅದರ ಬದಲಾಗಿ ಟ್ರ‍್ಯಾಕ್ಟರ್ ಬಳಕೆ ಮಾಡಲಾಗುತ್ತದೆ ಇದನ್ನೂ ಹೊರತುಪಡಿಸಿ ಮತ್ತೆಲ್ಲವೂ ಹಾಗೆಯೇ ಇದೆ. ಗಾಣದ ಮೂಲಕ ಕಬ್ಬಿನ ರಸವನ್ನು ಹಿಂಡಿ, ಆಲೆಮನೆಯ ದೊಡ್ಡದಾದ ಒಲೆಯ ಮೇಲಿಟ್ಟ ಕೊಪ್ಪರಿಗೆಯಲ್ಲಿ ಸುರಿಯಲಾಗುತ್ತದೆ.
ಸುಮಾರು ನಾಲ್ಕು ತಾಸುಗಳ ಕಾಲ ಕಬ್ಬಿನ ರಸವನ್ನು ಕಾಯಿಸಿದ ನಂತರ ನಿಧಾನವಾಗಿ ಹದಕ್ಕೆ ಬರಲು ಪ್ರಾರಂಭವಾಗುತ್ತದೆ. ಇದನ್ನು ನಿಖರವಾಗಿ ಗುರುತಿಸಲು ಕೂಡ ಒಂದಷ್ಟು ಚಾಣಾಕ್ಷತನವಿರಬೇಕು. ನಂತರ ಕೊಪ್ಪರಿಗೆಯನ್ನು ಇಳಿಸಿ ಒಂದು ಕಡೆಯಲ್ಲಿ ಇಟ್ಟುಕೊಂಡು. ಸ್ವಲ್ಪ ತಣ್ಣಗಾದ ಬಳಿಕ ಬೆಲ್ಲವನ್ನು ಉಂಡೆ ಕಟ್ಟಲು ಶುರು ಮಾಡುತ್ತಾರೆ. ಒಂದು ಬೆಲ್ಲದ ಉಂಡೆ 330 ಗ್ರಾಂ ಗಳಷ್ಟು ತೂಕವಿರುವಂತೆ ನೋಡಿಕೊಳ್ಳಲಾಗುತ್ತದೆ.
ಸದ್ಯಕ್ಕೆ ಜನರಲ್ಲಿ ಆರೋಗ್ಯದ ಕುರಿತಾದ ಜಾಗೃತಿ ಮೂಡಿರುವ ಕಾರಣಕ್ಕೆ ಈ ಸಾಂಪ್ರದಾಯಿಕವಾಗಿ ತಯಾರಾಗುವ ಬೆಲ್ಲಕ್ಕೆ ಎಲ್ಲಿಲ್ಲದ ಬೇಡಿಕೆ ಇದೆ. ಕಳೆದ ಮೂರು ವರ್ಷಗಳ ಹಿಂದೆ 60 ರೂಪಾಯಿಗೆ ಸಿಗುತ್ತಿದ್ದ ಬೆಲ್ಲದ ಉಂಡೆಗೆ ಈಗ 90 ರಿಂದ 100 ರೂಪಾಯಿವರೆಗೂ ಬೆಲೆ ಇದೆ.
ಅಂದಹಾಗೇ ಇವರು ತಯಾರಿಸುವ ಬೆಲ್ಲಗಳಿಗೆ ಮಾರುಕಟ್ಟೆಯಲ್ಲಿನ ದೊಡ್ಡ ವ್ಯಾಪಾರಿಗಳಿಂದ ಹೆಚ್ಚಿನ ಬೆಲೆಗೆ ಬೇಡಿಕೆ ಬಂದರೂ ಆದಷ್ಟು ನೇರವಾಗಿ ಮನೆಬಳಕೆಗೆ ಖರೀದಿಸುವವರಿಗೆ ಮಾರಾಟ ಮಾಡುತ್ತಾರೆ.
ಈ ಮೂಲಕ ಮನೆ ಬಳಕೆ ಉಪಯೋಗಿಸುವ ತಮ್ಮ ಸುತ್ತಮುತ್ತಲಿನವರಿಗೆ ಕಡಿಮೆ ಬೆಲೆಯಲ್ಲಿ ಬೆಲ್ಲ ಸಿಗುವಂತಾಗಲಿ ಎನ್ನುವ ಘನ ಆಶಯ ಕೂಡ ವೆಂಕಟರಮಣ ನಾಯ್ಕ ರವರದ್ದಾಗಿದೆ. ಒಟ್ಟಿನಲ್ಲಿ ಹೀಗೆ ಸಾಂಪ್ರದಾಯಿಕವಾಗಿ ತಯಾರಾಗುವ ಬೆಲ್ಲವನ್ನು ಹೆಚ್ಚಿನವರು ಬಳಸುವಂತಾದರೆ ರುಚಿ, ಆರೋಗ್ಯದೊಂದಿಗೆ ನಮ್ಮ ರೈತರೂ ಸಹ ಆರ್ಥಿಕವಾಗಿ ಸಬಲರಾಗಿ ಮುಂಬರವ ದಿನಗಳಲ್ಲಿ ಮತ್ತಷ್ಟು ರೈತರು ಇಂತಹ ಆಲೆಮನೆಳು ನಡೆಸುವ ಮನಸ್ಸು ಮಾಡಬಹುದು.
ಈಶ್ವರ ನಾಯ್ಕ , ವಿಸ್ಮಯ ನ್ಯೂಸ್, ಭಟ್ಕಳ