ನಾಗರಿಕರ ನಿದ್ದೆ ಗೆಡಿಸುತ್ತಿರುವ ಗೆಜ್ಜೆಯ ಝಲ್ ಝಲ್ಲ್ ಸದ್ದು! ಬಾವಿ ಜತೆ ಥಳಕು ಹಾಕಿಕೊಂಡ ಕಥೆ-ವ್ಯಥೆ
ರೆಕ್ಕೆ ಪುಕ್ಕ ಕಟ್ಟಿಕೊಂಡು ಹರಡುತ್ತಿರುವ ಅಂತೆ ಕಂತೆಗಳೇನು?
ಅಂಕೋಲಾ : ಪಟ್ಟಣ ವ್ಯಾಪ್ತಿಯ ಹುಲಿ ದೇವರವಾಡದ ಇಕ್ಕಟ್ಟಾದ ಓಣಿಯಲ್ಲಿ ಕೇಳಿ ಬರುತ್ತಿತ್ತು ಎನ್ನಲಾದ ವಿಚಿತ್ರ ಸದ್ದು, ಹತ್ತಿರದ ಬಾವಿ ವಿಚಾರಕ್ಕೆ ಥಳಕು ಹಾಕಿಕೊಂಡು,ಅಂತೆ ಕಂತೆಗಳ ರೂಪದಲ್ಲಿ ರೆಕ್ಕೆ ಪುಕ್ಕ ಕಟ್ಟಿಕೊಂಡು ಒಬ್ಬೊಬ್ಬರು ಒಂದೊಂದು ರೀತಿ ಮಾತನಾಡಿಕೊಳ್ಳುವಂತಾಗಿದ್ದು, ಹೊರಗಿವರಿಗೆ ಇದು ಕುತೂಹಲ ಮತ್ತು ತಮಾಷೆಯ ವಿಚಾರವಾದರೆ, ಬಾವಿ ಮಾಲಕರು ಮತ್ತು ಅಕ್ಕ ಪಕ್ಕದ ಕೆಲ ಕುಟುಂಬಸ್ಥರು ಮಾತ್ರ ರಾತ್ರಿ ಸರಿಯಾದ ನಿದ್ದೆ ಇಲ್ಲದೆ, ಹಗಲಿರುಳೂ ನೆಮ್ಮದಿ ಇಲ್ಲದೇ ಪರಿತಪಿಸುವಂತಾಗಿದೆ.
ಈ ಊರು ಮತ್ತು ಜನರು ಹೇಗಿದ್ದಾರೆ : ಈ ಊರಿನಲ್ಲಿ ಕಳೆದ ಅನೇಕ ವರ್ಷಗಳಿಂದ ಹಿಂದೂ – ಮುಸ್ಲಿಂ, ಇತರೆ ಜಾತಿ ಜನಾಂಗಗಳ ಜನರು ವಾಸವಿದ್ದು, ಜಾತಿ, ಧರ್ಮ, ಬೇಧ-ಭಾವವಿಲ್ಲದೇ ಎಲ್ಲರೂ ಪ್ರೀತಿ ಮತ್ತು ಸೌಹಾರ್ದತೆಯಿಂದಲೇ ಬಾಳುತ್ತಿದ್ದಾರೆ. ಇಲ್ಲಿ ಹೆಚ್ಚಾಗಿ ಶ್ರಮಿಕ ವರ್ಗದವರೇ ಇದ್ದು,ಕಷ್ಟಪಟ್ಟು ದುಡಿದು ಸಂಸಾರ ನಿಭಾಯಿಸುತ್ತಿದ್ದಾರೆ.ಅವರವರ ಆಚಾರ ವಿಚಾರಕ್ಕೆ ತಕ್ಕಂತೆ,ಧಾರ್ಮಿಕ ನಂಬಿಕೆ ಬೆಳೆಸಿಕೊಂಡು, ಹಬ್ಬ ಇತ್ಯಾದಿ ಆಚರಣೆ ನಡೆಸಿಕೊಂಡು ಬಂದಿದ್ದಾರೆ.
ನಿದ್ದೆ ಮತ್ತು ನೆಮ್ಮದಿಗೆ ಭಂಗ ಬಂದಿದ್ದು ಹೇಗೆ ಕಳೆದ ಕೆಲ ದಿನಗಳಿಂದ ರಾತ್ರಿ ವೇಳೆ ಈ ಊರಿನ ಅದೊಂದು ಓಣಿಯಲ್ಲಿ ಮಾತ್ರ ಗೆಜ್ಜೆಯ ಝಲ್ ಝಲ್ ಸಪ್ಪಳ ಕೇಳಿ ಬಂದು, ದಿನದಿಂದ ದಿನಕ್ಕೆ ಅದು ಹೆಚ್ಚಾಗುತ್ತಲೇ ಹೋಗಿ, ಅದೇ ವೇಳೆ ನಾಯಿಗಳು ಬೊಬ್ಬಿಡುತ್ತವೆ. ಆದರೆ ಮನೆಯಿಂದ ಹೊರ ಬಂದು ನೋಡಿದರೆ ಎಲ್ಲಿಯೂ ಯಾರೂ ಕಾಣಿಸದೇ ಇರುವುದು ಸ್ಥಳೀಯರ ನಿದ್ದೆಗೆಡಿಸಿತ್ತು ಎನ್ನಲಾಗಿದೆ, ಹಾಗಾದರೆ ಈ ಸದ್ದು ಕೇಳಿ ಬರುತ್ತಿರುವುದೇಕೆ ? ಇದರಿಂದ ಮುಂದೆ ಯಾರಿಗಾದರೂ ಅಪಾಯ ಕಾದಿದೆಯೇ? ಇದು ಬಾನಾಮತಿಯೇ ಎಂಬಿತ್ಯಾದಿ ಚರ್ಚೆ ಕೆಲವರಲ್ಲಿ ಆರಂಭಗೊಂಡು,ಒಬ್ಬರಿಂದ ಒಬ್ಬರಿಗೆ ಈ ಸುದ್ದಿ ಬೇಗನೆ ಹರಡಲಾರಂಭಿಸಿದೆ.
ಇದ್ದವರಲ್ಲಿಯೇ ಬುದ್ಧಿವಂತರೆನಿಸಿಕೊಂಡ ಕೆಲವರು ಜ್ಯೋತಿಷ್ಯಿಯೋ,ಮಾಂತ್ರಿಕನೋ ಇಲ್ಲವೇ ಅದಾವುದೋ ಅತಿ ಮಾನುಷನ ಮೊರೆ ಹೋಗಿ, ಗೆಜ್ಜೆ ಸದ್ದಿನಿಂದಾಗುವ ಆತಂಕ ಹಾಗೂ ಭಯ ನಿವಾರಣೆಗೆ ಪರಿಹಾರ ಹುಡುಕಿಕೊಡುವಂತೆ ಕೇಳಿದ್ದರು ಎನ್ನಲಾಗಿದ್ದು, ಜನರ ಈ ಅಸಹಾಯಕತೆ ಇಲ್ಲವೇ ಮೌಢ್ಯವನ್ನೇ ಬಂಡವಾಳವಾಗಿಸಿಕೊಂಡ ಓರ್ವ, ಹೌದೌದು, ನೀವು ನಾನು ಕೇಳಿದಷ್ಟು ಹಣ ನೀಡಿದರೆ ಸಮಸ್ಯೆ ಪರಿಹರಿಸುವ ಭರವಸೆ ನೀಡಿದ್ದನಂತೆ!
ಬಾವಿ ಜೊತೆ ಥಳಕು ಹಾಕಿಕೊಂಡಿದ್ದು ಏಕೆ? ದ್ವಿಚಕ್ರ ವಾಹನ ರಿಪೇರಿ ಮತ್ತಿತರ ರೀತಿಯಲ್ಲಿ ಕಷ್ಟಪಟ್ಟು ದುಡಿದು ತನ್ನ ಸಂಸಾರ ನಡೆಸಿಕೊಂಡಿದ್ದ ಒರ್ವ ಮನೆ ಬಳಕೆಗೆ ನಲ್ಲಿ ನೀರನ್ನೇ ನಂಬಿಕೊಳ್ಳುವಂತಾಗಿತ್ತು. ಸಮಯಕ್ಕೆ ಸರಿಯಾಗಿ ಬರದ ನಲ್ಲಿ ನೀರಿನ ಬವಣೆಯಿಂದ ಬೇಸತ್ತ ಕುಟುಂಬ, ನೀರಿನ ಸೌಲಭ್ಯಕ್ಕೆ ಸ್ವಂತ ಬಾವಿ ಇದ್ದರೆ ಒಳ್ಳೆಯದು ಎಂದು ತೀರ್ಮಾನಿಸಿ , ತಾವು ಹಿಂದಿನಿಂದಲೂ ವಾಸವಾಗಿದ್ದ ಮನೆಯ ಕಾಂಪೌಂಡ್ ಒಳಗಡೆಯೇ ಇದ್ದ ಪಾಳು ಬಿದ್ದಂತಿರುವ ಬಾವಿಯನ್ನು ಸ್ವಚ್ಛಗೊಳಿಸಿ,ಅಭಿವೃದ್ಧಿಪಡಿಸಿತ್ತು.ಅವರ ಕಷ್ಟಕ್ಕೆ ಫಲವೋ ಎಂಬಂತೆ, ಆ ಬಾವಿಯಲ್ಲಿ ನೀರು ತುಂಬಲಾರಂಭಿಸಿ, ಮನೆಯವರು ಸಂತಸದಿ ತಮ್ಮ ಕೈಲಾದ ಶುದ್ಧಿ ಹೋಮ,ಪೂಜೆ ನೆರವೇರಿಸಿ, ಆ ಬಾವಿಯ ನೀರನ್ನು ತಮ್ಮ ದಿನನಿತ್ಯದ ಬಳಕೆಗೆ ಬಳಸಲಾರಂಬಿಸಿದ್ದರು ಎನ್ನಲಾಗಿದೆ.
ಇದನ್ನು ಕಂಡು ಹೊಟ್ಟೆಕಿಚ್ಚು ಪಟ್ಟವರೋ, ಅಥವಾ ಇನ್ನಾರೋ ಕಿಡಿಗೇಡಿಗಳು,ಈ ಬಾವಿ ಸ್ವಚ್ಛಗೊಳಿಸಿದ ಮೇಲೆಯೇ ಓಣಿಯಲ್ಲಿ ಗೆಜ್ಜೆ ಸಪ್ಪಳ ಕೇಳಿ ಬರಲಾರಂಭಿಸಿದೆ ಎಂಬ ರೀತಿಯಲ್ಲಿ ಗಾಳಿ ಸುದ್ದಿ ಹರಿಬಿಟ್ಟಿರುವ ಸಾಧ್ಯತೆ ಕೇಳಿಬಂದಿದೆ. ಓಣಿಯಲ್ಲಿ ಕೇಳಿ ಬರುತ್ತಿತ್ತು ಎನ್ನಲಾದ ಅದಾವದೋ ಶಬ್ದ ಕೇಳಿ ಬರುವುದಕ್ಕೂ, ನಾಯಿ ಬೊಗಳುವುದಕ್ಕೂ, ಬಾವಿ ರಿಪೇರಿ ಕಾರ್ಯಕ್ಕೂ ಸಮಯ ಸರಿ ಸುಮಾರು ಒಂದೇ ಹೊಂದಾಣಿಕೆ ಆದಂತಿರುವುದು ಕಾಕತಾಳೀಯವೋ ಇಲ್ಲವೇ ದುರುದ್ದೇಶಪೂರ್ವಕವಾಗಿಯೇ ಯಾರೋ ಸಂಬಂಧ ಕಲ್ಪಿಸಿದರೇ ತಿಳಿದು ಬರಬೇಕಿದೆ.
ಕೆಲವರು ಗೆಜ್ಜೆ ಸಪ್ಪಳದ ತಮ್ಮ ಅನುಮಾನ ಖಚಿತಪಡಿಸಿಕೊಳ್ಳಲೋ,ಆತಂಕದಿಂದಲೋ,ಭಯದಿಂದಲೋ,ಅಥವಾ ಬೇರಾವುದೋ ಕಾರಣದಿಂದ,ಒಬ್ಬರ ಬಾಯಿಂದ ಇನ್ನೊಬ್ಬರ ಕಿವಿಗೆ ತಲುಪಿ,ಅವರ ಮೂಲಕ ಇನ್ಯಾರಿಗೋ ತಲುಪುವ ಹೊತ್ತಿಗೆ ರೆಕ್ಕೆ ಪುಕ್ಕ ಕಟ್ಟಿಕೊಂಡು, ಊರು ದಾಟಿ ಹೊರ ಬರುವಾಗ ಅಂತೆ ಕಂತೆಗಳ ಸಂತೆಯಾದಂತಿದೆ.ಈ ವಿಚಾರ ಕೆಲ ಮಾಧ್ಯಮಗಳಿಗೂ ತಲುಪಿ,ಬಾವಿ ಮತ್ತು ಗೆಜ್ಜೆ ಸಪ್ಪಳದ ಕುರಿತಾಗಿನ ಸ್ಥಳೀಯರ ಅಭಿಪ್ರಾಯ,ಎಲ್ಲೆಡೆ ವೈರಲ್ ಆಗುವಂತಾಗಿದೆ.
ಪೊಲೀಸರು ಹೇಳಿ ಹೋದದ್ದೇನು? ಈ ವಿಚಾರ ಊರಲ್ಲಿ,ಸ್ವಲ್ಪಮಟ್ಟಿನ ಭಯ,ಆತಂಕ,ಹಸಿ ಬಿಸಿ ಚರ್ಚೆ,ವಾದ ವಿವಾದಗಳಿಗೆ ಕಾರಣವಾಗಿ, 112 ತುರ್ತು ವಾಹನ ಸಂಖ್ಯೆಗೆ ಕರೆ ಮಾಡಿ,ಪೊಲೀಸರನ್ನೂ ಸ್ಥಳಕ್ಕೆ ಕರೆಸುವಷ್ಟರ ಮಟ್ಟಿಗೆ ಬೆಳೆದು ನಿಂತಿತ್ತು ಎನ್ನಲಾಗಿದ್ದು, ಸ್ಥಳಕ್ಕೆ ಆಗಮಿಸಿದ ಪೊಲೀಸರು ನಿಮ್ಮ ನಂಬಿಕೆಯಂತೆ ಗೆಜ್ಜೆ ಸಪ್ಪಳ ಕೇಳಿ ಬರುತ್ತಿದ್ದರೆ ,ನಮ್ಮಿಂದ ನಿಮ್ಮ ಸಮಸ್ಯೆಗೆ ತುರ್ತು ಪರಿಹಾರ ನೀಡಲು ಕಷ್ಟ ಸಾಧ್ಯ,ಮಾನವ ನಿರ್ಮಿತ ಕಣ್ಣಿಗೆ ಕಾಣುವ ಸಾಕ್ಷಾಧಾರ ಇದ್ದರೆ ಕೊಡಿ,ಖಂಡಿತ ಕಾನೂನು ಕ್ರಮ ಕೈಗೊಳ್ಳುತ್ತೇವೆ ಎಂಬಂತೆ ಮಾತನಾಡಿ ಹೋಗಿದ್ದರು ಎನ್ನಲಾಗಿದೆ.
ರಾತ್ರಿ ದೀಪ ಹಚ್ಚಿಟ್ಟಾಗ ಸಪ್ಪಳ ಏನಾಯ್ತು? ತನ್ನ ಮನೆ ಅಕ್ಕ ಪಕ್ಕದವರು, ಮತ್ತಿತರರು ಆರೋಪಿಸುವಂತೆ ಈ ಸದ್ದಿನ ರಹಸ್ಯ ಏನಿರಬಹುದು ನೋಡಿಯೇ ಬಿಡೋಣ ಎಂದು ಬಾವಿ ಇರುವ ಜಾಗದ ಮನೆ ಮಾಲೀಕ ಓಣಿಯಲ್ಲಿರುವ ಬೀದಿ ದೀಪದ ಹೊರತಾಗಿ, ರಾತ್ರಿ ಬೆಳಗಾಗುವ ವರೆಗೂ ತನ್ನ ಮನೆಯ ಮುಂಬದಿ (ಹೊರಗಡೆ) ದೀಪ ಆರಿಸದೇ, ತಡ ರಾತ್ರಿ ವರೆಗೂ ಗಜ್ಜೆ ಸದ್ದಿಗಾಗಿ ಕಾದು ಕುಳಿತರೆ, ಆ ದಿನ ಸಪ್ಪಳವೇ ಬರಲಿಲ್ಲವಂತೆ !!
ದೈವ ಪ್ರಶ್ನೆ ಎಂಬ ನಂಬಿಕೆಗೆ ಮೊರೆ ಹೋಗಲು ಮುಂದಾದ ಗ್ರಾಮಸ್ಥರು ಬಾವಿ ಇರುವ ಜಾಗದ ಮಾಲಕ ಹೇಳುವ ಪ್ರಕಾರ,ರಸ್ತೆಯಲ್ಲಿ ಕೇಳಿ ಬರುತ್ತದೆ ಎನ್ನಲಾದ ಅದಾವುದೋ ಸದ್ದಿಗೂ ನನ್ನ ಕುಟುಂಬಕ್ಕೂ ಸಂಬಂಧವೇ ಇಲ್ಲ ಎಂಬ ರೀತಿಯಲ್ಲಿ ವಾದಿಸ ಹೊರಟರೆ,ಅದನ್ನು ಪೂರ್ತಿಯಾಗಿ ಒಪ್ಪಿಕೊಳ್ಳದ ಅಕ್ಕಪಕ್ಕದ ಕೆಲ ನಿವಾಸಿಗಳು,ಈವರೆಗೆ ಎಂದೂ ಕೇಳಿ ಬರದ ಸದ್ದು,ಬಾವಿ ರಿಪೇರಿಯ ನಂತರವೇ ಕೇಳಿ ಬರುತ್ತಿರುವುದೇಕೆ? ಎಂದು ಪ್ರತಿವಾದಿಸುವಂಥಾಗಿತ್ತು.
ಕೊನೆಗೂ ಈ ಕುರಿತು ಗ್ರಾಮದ ಕೆಲ ಮುಖಂಡರ ಮತ್ತು ಸಾರ್ವಜನಿಕರ ಸಮ್ಮುಖದಲ್ಲಿ ದೇವರ ಮುಂದೆ ಹೋಗಿ,ಪ್ರಶ್ನೆ ಕೇಳಿ ಪರಿಹಾರ ಕಂಡುಕೊಳ್ಳುವುದು,ಇಲ್ಲದಿದ್ದರೆ ಊರಿನಲ್ಲಿ ಸಾಮರಸ್ಯ ಕೆಡುತ್ತದೆ ಎಂಬ ತೀರ್ಮಾನಕ್ಕೆ ಬರಲಾಗಿತ್ತು. ಆದರೆ ನಿಗದಿತ ಅವಧಿಗೂ ತಡವಾಗಿ ಕೆಲವರು ದೇವಸ್ಥಾನ ತಲುಪಿದ್ದರಿಂದ,ದೇವರ ಮುಂದೆ ಪ್ರಶ್ನೆ ಇಡಲು ಸಾಧ್ಯವಾಗಲಿಲ್ಲ ಎನ್ನಲಾಗಿದೆ. ಈಗ ಬಾವಿ ಮಾಲಿಕನ ಕುಟುಂಬದವರು ಹೇಳುವುದೇನು ನಾವು ದಿನನಿತ್ಯ ಕಷ್ಟಪಟ್ಟು ದುಡಿದು ಸಂಸಾರ ಸಾಗಿಸಲು ಅಲ್ಲಿ ಇಲ್ಲಿ ಹೋಗಿ ಬರಬೇಕಾಗುತ್ತದೆ.
ಹೀಗಿರುವಾಗ ದಿನ ಬೆಳಗಾದರೆ ಸಾಕು ಹೊತ್ತು ಗೊತ್ತಿಲ್ಲದೇ ಮೊಬೈಲ್ ಇಲ್ಲವೇ ಕ್ಯಾಮೆರಾ ಹಿಡಿದು ನಮ್ಮ ಮನೆಯ ಕಾಂಪೌಂಡ್ ಒಳಗೇ ಬರುವ ಕೆಲವರು, ನಮ್ಮ ಅನುಮತಿ ಇಲ್ಲದೇ ಏನೇನೋ ಚಿತ್ರೀಕರಿಸುವುದು, ನಾವು ಮನೆ ಮತ್ತು ಅಕ್ಕ ಪಕ್ಕ ಓಡಾಡುವಲ್ಲಿಯೂ ಕೆಮರ ಕಣ್ಣು ತಿರುಗಿಸುವ ಯತ್ನ ಮಾಡುವುದು, ಇಲ್ಲವೇ ಒತ್ತಾಯ ಪೂರ್ವಕವಾಗಿ ನಮ್ಮಿಂದ ಹೇಳಿಕೆ ಪಡೆಯುವುದು ಮಾಡುತ್ತಿದ್ದಾರೆ.ಅಲ್ಲದೇ ಸಾಮಾಜಿಕ ಜಾಲತಾಣಗಳು ಮತ್ತಿತರ ರೀತಿಯಲ್ಲಿ ನಮ್ಮ ಹಾಗೂ ಇತರೆ ಫೋಟೋಗಳನ್ನು ಹರಿಬಿಡುವುದರಿಂದ, ಅದನ್ನು ನೋಡುವ ಇಲ್ಲವೇ ಕೇಳಿ ತಿಳಿದ ಕೆಲ ಪರಿಚಯಸ್ಥರು,ಕುಟುಂಬದ ಹಿತೈಷಿಗಳು ಮತ್ತಿತರರು ಪದೇ ಪದೇ ಫೋನು ಮಾಡಿ ಏನಾಯಿತು? ಮುಂದೆ ಹೇಗೆ ? ಹಾಗೆ ಹೀಗೆ ಎಂದು ಎಂದು ವಿಚಾರಿಸುತ್ತಿದ್ದಾರೆ.
ಇದರಿಂದ ನಾವು ಮಾನಸಿಕವಾಗಿ ನೊಂದುಕೊಳ್ಳುವಂತಾಗಿದೆ.ಅಷ್ಟಕ್ಕೂ ನಮ್ಮ ಮನೆಯ ಹಳೆಯ ಬಾವಿಯನ್ನು ನಾವು ಸ್ವಚ್ಛಗೊಳಿಸಿಕೊಂಡದ್ದು ತಪ್ಪೇ ? ಸಾರ್ವಜನಿಕ ಓಣಿಯಲ್ಲಿ ಕೇಳಿ ಬರುವ ಅದಾವುದೋ ಸದ್ದಿಗೆ – ಸಪ್ಪಳಕ್ಕೆ ನಮ್ಮನ್ನು ಏಕೆ ಹೊಣೆಗಾರರನ್ನಾಗಿ ಮಾಡುತ್ತೀರಿ? ಮುಂದೆ ಮುಂದೆ ಬಂದ ಸ್ಥಳೀಯ ಜನಪ್ರತಿನಿಧಿಗಳು ಮತ್ತು ಪ್ರಮುಖರು ,ಇಲ್ಲವೇ ಪೊಲೀಸ್ ಇಲಾಖೆ ರಾತ್ರಿ ಗಸ್ತು ನಡೆಸಿಯಾದರೂ ಸೂಕ್ತ ಕ್ರಮ ಕೈಗೊಂಡು, ನಾವು ಮತ್ತು ಅಕ್ಕಪಕ್ಕದವರು ನೆಮ್ಮದಿಯಿಂದ ಇರಲು ಬಿಡಲಿ.ಅದು ಬಿಟ್ಟು ಯಾರ್ಯಾರೋ ನಮ್ಮ ಮನೆ ಹಾಗೂ ಕಂಪೌಂಡ್ ಜಾಗಕ್ಕೆ ಬಂದು ವಿಡಿಯೋ ಚಿತ್ರೀಕರಣ ಮಾಡುವುದು,ನಮ್ಮನ್ನೇ ತಪ್ಪಿತಸ್ಥರಂತೆ ಬಿಂಬಿಸಿ,ಮಾತನಾಡುವುದು ಸರಿಯಲ್ಲ. ಈಗಾಗಲೇ ಸಾಕಷ್ಟು ನೊಂದಿರುವ ನಮ್ಮ ಕುಟುಂಬದವರಿಗೆ ಮುಂದೆ ಏನಾದರೂ ತೊಂದರೆ, ಅನಾಹುತ ಏನಾದರೂ ಆದರೆ ಅದಕ್ಕೆ ಹೊಣೆ ಯಾರು? ಎಂದು ಅಳಲು ತೋಡಿಕೊಳ್ಳುತ್ತಿದ್ದಾರೆ.
ಅಸಲಿ ಸತ್ಯ ಏನಿರಬಹುದು? ಗುಡ್ಡದಂಚಿನ ಇಳಿಜಾರಿನ ಇಕ್ಕಟ್ಟಾದ ರಸ್ತೆ ಇಲ್ಲವೇ ಗಟಾರದ ಬಳಿ ನೀರು ಹರಿದು ಹೋಗುವಾಗಿನ, ಇಲ್ಲವೇ ಜೀರುಂಡೆ (ಕಾಡು ಜಿರಲೆ ) ಮತ್ತಿತರ ಬೇರೆ ಪ್ರಾಣಿ ಪಕ್ಷಿ, ಜೀವಿಗಳಿಂದಲೂ ಬರಬಹುದಾದ ಶಬ್ದವೇ ಇದು ಆದರೂ ಆದೀತು. ಇಲ್ಲ ಯಾವುದೋ ನಾಯಿ ಕೊರಳಿಗೆ ಕಟ್ಟಿದ ಗೆಜ್ಜೆ , ಆ ನಾಯಿ ಒಡಾಡುವ ಸ್ಥಳದಲ್ಲಿ ಕೇಳಿ ಬಂದಿರಬಹುದು. ಇದೇ ವೇಳೆ ಬೇರೆ ಬೇರೆ ನಾಯಿಗಳು ಅದನ್ನು ಕಂಡು, ಇಲ್ಲವೇ ಒಮ್ಮೊಮ್ಮೆ ನೆರಳನ್ನು ಕಂಡು ಬೊಬ್ಬಿಡುತ್ತವೆ. ಅಷ್ಟಕ್ಕೂ ಶ್ರಾವಣ ಸಮೀಪಿಸುತ್ತಿರುವ ಮಳೆಗಾಲದ ಈ ಸಮಯದಲ್ಲಿ ನಾಯಿಗಳು ಬೊಬ್ಬಿಡದ, ಜಗಳವಾಡದ ದಿನಗಳೇ ಇಲ್ಲವೇನೋ ಎನ್ನಬಹುದು.
ಆಕಸ್ಮಿಕವಾಗಿಯೂ ಕೆಲವೊಮ್ಮೆ ಕೆಲ ಶಬ್ದ ಹಾಗೂ ಭಾವನೆಗಳು,ಅವರವರ ಮನಸ್ಸು ಅಂದುಕೊಂಡ ಹಾಗೆ ಇರುವ ಸಾಧ್ಯತೆಯೂ ಇರಬಹುದು. ಇಲ್ಲ ಇವ್ಯಾವುದೇ ಶಬ್ದಗಳಲ್ಲ, ಅದು ಪಕ್ಕಾ ಗಜ್ಜೆ ಸಪ್ಪಳವೇ ಎಂದು ಕೆಲವರು ಕೇಳಿಸಿಕೊಂಡಿದ್ದು ನಿಜವಿರಬಹುದಾದರೂ, ಕಾಣದ ಕೆಲ ಕೈ-ಕಾಲುಗಳು ಗೆಜ್ಜೆ ನಾದ ಹೊರಡಿಸಿ, ಸ್ಥಳೀಯರಲ್ಲಿ ಓಡಕು ಮೂಡಿಸುವ, ಇಲ್ಲವೇ ಇತರೆ ದುರುದ್ದೇಶ ಹೊಂದಿರಲೂಬಹುದು. ಅಥವಾ ಆ ರೀತಿ ಮಾಡಿ ನಾಲ್ಕಾರು ದಿನ ತಮಾಷೆ ನೋಡಲು ಹೋಗಿ, ಅವರು ಅಂದುಕೊಂಡದ್ದಕ್ಕಿಂತ ಪರಿಸ್ಥಿತಿ ಭಿನ್ನವಾಗಿ, ಬಿಗಡಾಯಿಸಿ ಇಂದಿನ ಸ್ಥಿತಿಗೂ ಕಾರಣವಾಗಿರಬಹುದು ಎನ್ನಲಾಗಿದೆ. ಇಲ್ಲವೇ ಸ್ಥಳೀಯರ ಮೌಢ್ಯ ಅರಿತ ಕೆಲವರು ಬಾನಾಮತಿ ಮತ್ತಿತರ ಹೆಸರಲ್ಲಿ , ಅಮಾಯಕರಿಂದ ಹಣ ಯಾಮಾರಿಸುವ ಉದ್ದೇಶದಿಂದಲೂ ಹೀಗೆ ಮಾಡಿಸಿರುವ ಇಲ್ಲವೇ ಮಾಡಿರುವ ಸಾಧ್ಯತೆಗಳಿವೆ ಎಂಬಿತ್ಯಾದಿ ರೀತಿಯ ವಿಮರ್ಶಾ ರೂಪದ ಮಾತುಗಳು ಪ್ರಜ್ಞಾವಂತ ವಲಯದಿಂದ ಕೇಳಿಬಂದತಿದೆ.
ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ