ಗುಡ್ಡಕುಸಿತ ಪ್ರದೇಶದ ಹೆದ್ದಾರಿಯಲ್ಲಿ ಬಿದ್ದಿದೆ 60 ಮೀಟರ್ ವರೆಗೆ ನೂರಾರು ಟನ್ ಮಣ್ಣು: ತೆರವಿಗೆ ಬೇಕಿದೆ ಇನ್ನು ಮೂರ್ನಾಲ್ಕು ದಿನ
ಅಂಕೋಲಾ : ರಾ.ಹೆ. 66 ರ ಶಿರೂರು ಬಳಿ ಗುಡ್ಡ ಭಾರೀ ಪ್ರಮಾಣದಲ್ಲಿ ಕುಸಿದು ಮಹಾ ದುರಂತವೇ ಸಂಭವಿಸಿದೆ. ಈ ಅವಘಡದಲ್ಲಿ ಈಗಾಗಲೇ 6 ಮೃತ ದೇಹ ಪತ್ತೆಯಾಗಿದ್ದು, ಸುಮಾರು 15 ಜನ ಗಾಯಳುಗಳಾಗಿದ್ದಾರೆ. ಸ್ಥಳೀಯ ಒಂದಿಬ್ಬರು ಮತ್ತು ಹೆದ್ದಾರಿ ಸಂಚಾರಿಗಳು ಸೇರಿದಂತೆ ಮತ್ತೆ ಕೆಲವರು ಮಣ್ಣಿನಡಿ ಸಿಲುಕಿ ಇಲ್ಲವೇ ನೀರಿನಲ್ಲಿ ಕೊಚ್ಚಿ ಹೋಗಿರುವ ಸಾಧ್ಯತೆ ಇದ್ದು, ಎನ್ ಡಿ ಆರ್ ಎಫ್ ಮತ್ತಿತರರು ಶೋಧ ಕಾರ್ಯಚರಣೆ ಮುಂದುವರೆಸಿದ್ದಾರೆ.
ಶಿರೂರು ಗುಡ್ಡ ಕುಸಿತ ದುರಂತ: ಮತ್ತೆರಡು ಮೃತದೇಹ ಪತ್ತೆ: ಸತ್ತವರ ಸಂಖ್ಯೆ 6 ಕ್ಕೆ ಏರಿಕೆ
ಈ ನಡುವೆ ಅಂಕೋಲಾ ಕುಮಟಾ ದಾರಿಮಧ್ಯೆ ಶಿರೂರು ಹೆದ್ದಾರಿಯಲ್ಲಿಯೇ ರಾಶಿ ರಾಶಿಯಾಗಿ ಕುಸಿದು ಬಿದ್ದಿರುವ ಮಣ್ಣು ತೆರವಿಗೆ, ಘಟನೆ ಸಂಭವಿಸಿದ ಮೊದಲ ದಿನ ವಿಳಂಬ ಕಾರ್ಯಾಚರಣೆ ನಡೆಸಲಾಗಿತ್ತು.ಬಳಿಕ ಈಗ ಎರಡು ದಿನಗಳಿಂದ ಹೆದ್ದಾರಿಯ ಎರಡು ಕಡೆ,ಐದಾರು ಜೆಸಿಬಿ ಮತ್ತಿತರ ಯಂತ್ರಗಳನ್ನು ಬಳಸಿ,ಹತ್ತಾರು ಡಂಪರ್ ವಾಹನಗಳ ಮೂಲಕ ಮಣ್ಣು ತೆರವು ಕಾರ್ಯ ವೇಗ ಪಡೆದಿದೆ. ಆದರೂ ಸದ್ಯಕ್ಕೆ ಹೆದ್ದಾರಿಯಲ್ಲಿ 60 ಮೀಟರ ದೂರದವರೆಗೆ,ನೂರಾರು ಟನ್ ಮಣ್ಣು ತೆರವು ಕಾರ್ಯಾಚರಣೆ ನಡೆಸಬೇಕಿದ್ದು,ಈಗ ರಾಶಿ ಬಿದ್ದಿರುವ ಮಣ್ಣು ತೆರವಿಗೆ ಮತ್ತೆ ಕನಿಷ್ಠ 2 -3 ದಿನಗಳು ಬೇಕಾಗಬಹುದು ಎಂದು ಅಂದಾಜಿಸಲಾಗಿದೆ.
ಈ ನಡುವೆ ಮತ್ತೆ ಜೋರಾಗುತ್ತಿರುವ ಮಳೆ,ಅಕ್ಕ ಪಕ್ಕದಲ್ಲಿ ಗುಡ್ಡ ಬಿರುಕುಗೊಂಡು ಮತ್ತಷ್ಟು ಕುಸಿವ ಸಾಧ್ಯತೆ ಮತ್ತು ಆತಂಕ ಇರುವುದರಿಂದ, ಮಣ್ಣು ತೆರವು ಕಾರ್ಯಾಚರಣೆಯ ಮೇಲೆ ನೇರ ಪರಿಣಾಮ ಬೀರುವ ಸಾಧ್ಯತೆ ಇದೆ. ಸ್ಥಳೀಯ ಶಾಸಕ ಸತೀಶ ಸೈಲ್ ಅವರ ವಿಶೇಷ ಪ್ರಯತ್ನದ ಫಲವಾಗಿ,ರಾಜ್ಯಮಟ್ಟದ ಭೂ ವಿಜ್ಞಾನಿಗಳು ಈಗಾಗಲೇ ಗುಡ್ಡ ಕುಸಿತ ಪ್ರದೇಶದಲ್ಲಿ ಸರ್ವೆ ಕಾರ್ಯ ಆರಂಭಿಸಿದ್ದು, ಮಣ್ಣಿನ ಸಾಂದ್ರತೆ ಮತ್ತು ಧಾರಣ ಸಾಮರ್ಥ್ಯ,ಕುಸಿಯಬಹುದಾದ ಇತರೆ ಪ್ರದೇಶಗಳನ್ನು ಪರಿಶೀಲಿಸಿ,ವರದಿ ನೀಡಿದ ನಂತರವಷ್ಟೇ,ಹೆದ್ದಾರಿ ಸಂಚಾರ ಸುರಕ್ಷತೆ ಬಗ್ಗೆ ಸ್ಪಷ್ಟತೆ ಸಿಗುವ ಸಾಧ್ಯತೆ ಇದೆ ಎನ್ನಲಾಗಿದೆ.
ಈ ಎಲ್ಲ ಕಾರಣಗಳಿಂದ ಸದ್ಯಕ್ಕೆ ಈ ಹೆದ್ದಾರಿ ಸಂಚಾರ ಮುಕ್ತವಾಗುವುದು ಮತ್ತೆ ಕನಿಷ್ಟ 2 -3 ದಿನಗಳಿಂದ ಹಿಡಿದು ಅದಕ್ಕೂ ಹೆಚ್ಚಿನ ದಿನ ವಿಳಂಬವಾದರೂ ಆದೀತು ಎನ್ನಲಾಗಿದೆ. ಅಲ್ಲಿವರೆಗೆ ಹೆದ್ದಾರಿ ಸಂಚಾರಿಗಳು ಬದಲಿ ಮಾರ್ಗ ಬಳಸುವುದು ಮತ್ತು ಆ ಎಲ್ಲ ಕಡೆ ನಿಧಾನವಾಗಿ ರಸ್ತೆ ಸುರಕ್ಷತಾ ನಿಯಮಗಳನ್ನು ಪಾಲಿಸಿ, ಟ್ರಾಫಿಕ್ ಜಾಮ್ ಸಹ ಆಗದಂತೆ ವಾಹನ ಚಲಾಯಿಸಬೇಕಿದೆ.
ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲ