Follow Us On

WhatsApp Group
Focus News
Trending

ಗ್ರಹಲಕ್ಷ್ಮೀ ಯೋಜನೆಗೆ ಶೇ.83 ಫಲಾನುಭವಿಗಳ ನೊಂದಣಿ : ಮಾಸಿಕ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾಹಿತಿ

ಅಂಕೋಲಾ: ಸರ್ಕಾರದ ಮಹತ್ವಪೂರ್ಣ ಯೋಜನೆಗಳ ಲಾಭದಿಂದ ಯಾವುದೇ ಫಲಾನುಭವಿಗಳು ವಂಚಿತರಾಗದಂತೆ ಸಂಬಂಧಿಸಿದ ಇಲಾಖೆಗಳ ಅಧಿಕಾರಿಗಳು ಗಮನಹರಿಸಬೇಕು ಎಂದು ತಾಲೂಕು ಪಂಚಾಯತ್ ಆಡಳಿತಾಧಿಕಾರಿ ನಾಗೇಶ ರಾಯ್ಕರ್ ಅಧಿಕಾರಿಗಳಿಗೆ ಸೂಚಿಸಿದರು. ತಾಲೂಕು ಪಂಚಾಯತ್ ಸಭಾಭವನದಲ್ಲಿ ನಡೆದ ಮಾಸಿಕ ಪ್ರಗತಿ ಪರಿಶೀಲನಾ ಸಭೆಯಲ್ಲಿ ಗೃಹಲಕ್ಷ್ಮೀ ಯೋಜನೆಯ ಕುರಿತು ಅವರು ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡರು.

ತಾಲೂಕಿನಲ್ಲಿ 83 ಪ್ರತಿಶತ ಅರ್ಹ ಫಲಾನುಭವಿಗಳು ಯೋಜನೆಗೆ ನೋಂದಣಿ ಮಾಡಿಕೊಂಡಿದ್ದು ಬಾಕಿ ಉಳಿದ ಶೇ. 17 ಪಲಾನುಭವಿಗಳ ನೋಂದಣಿಗೆ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಶಿಶು ಅಭಿವೃದ್ಧಿ ಯೋಜನೆ ಪ್ರಭಾರಿ ಅಧಿಕಾರಿ ಸವಿತಾ ಶಾಸ್ತ್ರೀಮಠ ಅವರ ಪರವಾಗಿ ಹಾಜರಿದ್ದ ಅಧಿಕಾರಿ ರೇಣುಕಾ ಮಾಹಿತಿ ನೀಡಿದರು. ಮಳೆಗಾಲದ ಸಂದರ್ಭದಲ್ಲಿ ನೀರಿನ ಮೂಲ ಕಲುಷಿತಗೊಂಡು ಸಾಂಕ್ರಾಮಿಕ ರೋಗಗಳ ಹರಡುವಿಕೆ ಸಾಧ್ಯತೆ ಇರುವುದರಿಂದ ಶಾಲಾ ಕಾಲೇಜುಗಳಿಗೆ ಮತ್ತು ಸಾರ್ವಜನಿಕ ರಿಗೆ ಪೂರೈಕೆಯಾಗುವ ಕುಡಿಯುವ ನೀರಿನ ಟ್ಯಾಂಕುಗಳ ಶುಚಿತ್ವಕ್ಕೆ ಆದ್ಯತೆ ನೀಡಬೇಕು.

ಗ್ರಾಮೀಣ ಕುಡಿಯುವ ನೀರು ಸರಬರಾಜು ಇಲಾಖೆ, ಆರೋಗ್ಯ ಇಲಾಖೆ, ಶಿಕ್ಷಣ ಇಲಾಖೆ ಮತ್ತು ಪುರಸಭೆ ಅಧಿಕಾರಿಗಳು ಈ ಕುರಿತು ಜಾಗ್ರತೆ ವಹಿಸಬೇಕು ಎಂದು ಅವರು ಅಧಿಕಾರಿಗಳಿಗೆ ಸೂಚಿಸಿದರು. ಈ ವರ್ಷ ಮಳೆಯ ಅಭಾವ ತಲೆದೋರಿದ ಕಾರಣ ಎತ್ತರದ ಪ್ರದೇಶಗಳಲ್ಲಿ ನಾಟಿ ಕೆಲಸಕ್ಕೆ ಹಿನ್ನಡೆಉಂಟಾಗಿದೆ ಎಂದು ಕೃಷಿ ಇಲಾಖೆ ಸಹಾಯಕ ನಿರ್ದೇಶಕರು ತಿಳಿಸಿದರು.

ಪಶು ಆಸ್ಪತ್ರೆಯಲ್ಲಿ ವೈದ್ಯರ ಮತ್ತು ಸಿಬ್ಬಂದಿಗಳ ಕೊರತೆ ಇದ್ದು 27 ಹುದ್ದೆ ಮಂಜೂರಿ ಇದ್ದರೂ ಕೇವಲ ಮೂರು ಸಿಬ್ಬಂದಿಗಳು ಕೆಲಸ ಮಾಡುತ್ತಿರುವುದಾಗಿ ಇಲಾಖೆಯ ಅಧಿಕಾರಿ ಅಸಹಾಯಕತೆಯನ್ನು ತೋಡಿಕೊಂಡರು. ಆರೋಗ್ಯ ಇಲಾಖೆಯಲ್ಲಿ ಕೇಂದ್ರ ಸರ್ಕಾರದ ಇಂದ್ರಧನುಷ ಯೋಜನೆಯ ಯಶಸ್ಸಿಗೆ ಕಾರ್ಯಕ್ರಮ ರೂಪಿಸಲಾಗಿದೆ, ಡಯಾಲಿಸಿಸ್ ಚಿಕಿತ್ಸೆಯಲ್ಲಿ ಯಾವುದೇ ಸಮಸ್ಯೆ ಇಲ್ಲ
ತಾಲೂಕು ಆಸ್ಪತ್ರೆಯಲ್ಲಿ ಸ್ತ್ರೀ ರೋಗ ತಜ್ಞ ವೈದ್ಯರು ಇಲ್ಲದೇ ಸಮಸ್ಯೆ ಆಗುತ್ತಿದೆ ಎಂದು ತಾಲೂಕು ವೈದ್ಯಾಧಿಕಾರಿ ಡಾ.ಜಗದೀಶ ನಾಯ್ಕ ಮತ್ತು ವೈದ್ಯಾಧಿಕಾರಿ ಡಾ.ಸಂತೋಷ ಸಭೆಯಲ್ಲಿ ತಿಳಿಸಿದರು.

ತಾಲೂಕಿನ ವಿವಿಧ ಇಲಾಖೆಗಳ ಅಧಿಕಾರಿಗಳು ಪಾಲ್ಗೊಂಡು ತಮ್ಮ ಇಲಾಖೆಯ ಯೋಜನೆ ಅನುಷ್ಠಾನದ ಕುರಿತು ಮಾಹಿತಿ ನೀಡಿದರು. ತಾ.ಪಂ ಪ್ರಭಾರಿ ಇ ಓ ಸುನೀಲ ಎಂ ಡಿ , ವಿವಿಧ ಇಲಾಖೆ ಅಧಿಕಾರಿಗಳು ಹಾಜರಿದ್ದರು. ಗೃಹಲಕ್ಷ್ಮೀ ಯೋಜನೆ ನೊಂದಣಿ ಮಾಡಿಸಿ, ಯೋಜನೆಯ ಪ್ರಯೋಜನ ಫಲಾನುಭವಿಗಳಿಗೆ ದೊರೆಯಲು ಹೆಚ್ಚಿನ ಒತ್ತು ನೀಡುವಂತೆ ತಾಲೂಕಿಗೆ ಇತ್ತೀಚೆಗೆ ಭೇಟಿ ನೀಡಿದ್ದ ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ, ಶಾಸಕ ಸತೀಶ ಸೈಲ್ ಸೂಚಿಸಿದ್ದರು.

ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ

Back to top button