ಅಂಕೋಲಾ: ಪಟ್ಟಣದ ಬಸ್ ನಿಲ್ದಾಣ ಆವರಣಕ್ಕೆ ಒಳ ಹೋಗುವ ದ್ವಾರದಲ್ಲಿ ಅಳವಡಿಸಿರುವ ಕಬ್ಬಿಣದ ಕೆಲ ಪಟ್ಟಿಗಳು ಸಡಿಲಗೊಂಡು, ತುಂಡಾಗಿ ಬಿದ್ದಿರುವುದು ಅಪಾಯಕ್ಕೆ ಆಹ್ವಾನ ನೀಡುತ್ತಿತ್ತು. ಬಸ್ ನಿಲ್ದಾಣದ ಪ್ರವೇಶ ದ್ವಾರ ಮತ್ತು ನಿರ್ಗಮನ ಗೇಟ್ ಬಳಿ ಗುಣಮಟ್ಟದ ಕೊರತೆ ಮತ್ತು ಅವೈಜ್ಞಾನಿಕ ಜೋಡಣೆಯಿಂದ ಕಬ್ಬಿಣದ ಪಟ್ಟಿಗಳು ಪದೇ ಪದೇ ಸಡಿಲಗೊಳ್ಳುವುದು, ಮುರಿದು ಹೋಗುವುದು ನಡೆಯುತ್ತಲೇ ಇದ್ದು ಇದರಿಂದ ಬಸ್ ಮತ್ತಿತರ ವಾಹನ ಚಾಲಕರು, ನಿಲ್ದಾಣಕ್ಕೆ ಬಂದು ಹೋಗುವ ಪ್ರಯಾಣಿಕರಿಗೆ ತೀವೃ ತೊಂದರೆಯಾಗುತ್ತಿತ್ತು. ನಿರ್ವಹಣೆ ಮತ್ತು ಪರಿಶೀಲನೆಯ ಕೊರತೆಯಿಂದ ಇದು ಕಳೆದ ಕೆಲ ಕಾಲದಿಂದ ಎಂದೂ ಮುಗಿಯದ ಸಮಸ್ಯೆಯಾಗಿ ಆಡಳಿತ ವ್ಯವಸ್ಥೆಯನ್ನು ಅಣಕಿಸುತ್ತಿತ್ತು.
ಪ್ರಯಾಣಿಕರು, ವಾಹನ ಚಾಲಕರು ಮತ್ತಿತರರು ಸುರಕ್ಷತೆ ದೃಷ್ಟಿಯಿಂದ ವಿಸ್ಮಯ ವಾಹಿನಿ ಇತ್ತೀಚೆಗೆ ವಿಶೇಷ ವರದಿ ಪ್ರಕಟಿಸಿತ್ತು. ಬಸ್ ನಿಲ್ದಾಣ ಆವರಣದ ಪ್ರವೇಶ ದ್ವಾರದಲ್ಲಿ ಬಾಯ್ತೆರೆದು ಕೂತ ಕಬ್ಬಿಣದ ಪಟ್ಟಿಗಳು ಎಂಬ ತಲೆಬರಹದಡಿ ವಿಸ್ಮಯ ವಾಹಿನಿ ವಿಸ್ತೃತ ವರದಿ ಪ್ರಕಟಿಸಿದ ಬೆನ್ನಿಗೇ ,ಎಚ್ಚೆತ್ತುಕೊಂಡ ಸಾರಿಗೆ ಸಂಸ್ಥೆ,ದನಕರುಗಳು ಒಳಬರುವ ವಿಚಾರ ಹಾಗಿರಲಿ, ಸದ್ಯ ಸಾರ್ವಜನಿಕ ಪ್ರತಿಭಟನೆಗೆ ಅವಕಾಶವಾಗದಂತೆ ಹಾಳಾಗಿದ್ದ ಕಬ್ಬಿಣದ ಪಟ್ಟಿ , ಮತ್ತು ಇತರೆ ಎಲ್ಲಾ ಚೌ ಪಟ್ಟಿಗಳನ್ನು ತೆಗೆದು, ಆ ಜಾಗದಲ್ಲಿ ಸಿಮೆಂಟ್ ಕಾಂಕ್ರೀಟ್ ಹಾಕಿ ನೆಲಸಮತಟ್ಟು ಗೊಳಿಸಿದಂತಿದೆ.
ಇದರಿಂದ ಕಾಂಕ್ರೀಟ್ ಪದರ ಗಟ್ಟಿಯಾದೊಡನೆ,ವಾಹನಗಳ ಸರಾಗ ಒಟಾಟಕ್ಕೆ ಮತ್ತು ನಿಲ್ದಾಣಕ್ಕೆ ಬರುವ ವೃದ್ಧರು, ಮಕ್ಕಳು, ಸೈಕಲ್ ಹಾಗೂ ದ್ವಿಚಕ್ರವಾಹನ ಸವಾರರು,ವಿಕಲಚೇತನರು ಸೇರಿದಂತೆ ಇತರರಿಗೆ,ಅನುಕೂಲವಾಗುವ ಸಾಧ್ಯತೆಗಳು ಹೆಚ್ಚಿದೆ. ಇದರಿಂದ ಸದ್ಯಕ್ಕೆ ಸಮಸ್ಯೆಗೆ ಮುಕ್ತಿ ಸಿಕ್ಕಂತಾಗಿದ್ದು,ಜನಪರ ಕಾಳಜಿಯಿಂದ ವರದಿ ಪ್ರಕಟಿಸಿದ ವಿಸ್ಮಯ ವಾಹಿನಿ ಹಾಗೂ ತಡವಾಗಿಯಾದರೂ ಎಚ್ಚೆತ್ತುಕೊಂಡ ಸಾರಿಗೆ ಸಂಸ್ಥೆಗೆ ಕೆಲ ಸಾಮಾಜಿಕ ಕಾರ್ಯಕರ್ತರು ಕೃತಜ್ಞತಾ ಪೂರ್ವಕ ಮೆಚ್ಚುಗೆ ಸಲ್ಲಿಸಿದ್ದಾರೆ .
ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ