Big News
Trending

ಶಿರೂರು ಗುಡ್ಡ ಕುಸಿತ : NHAI ಮತ್ತು IRB ಕಂಪನಿ ಅಧಿಕಾರಿಗಳ ಬಂಧನಕ್ಕೆ ಆಗ್ರಹಿಸಿ ಸೆಪ್ಟೆಂಬರ್ 12 ರಂದು ಪ್ರತಿಭಟನೆ

ಗೋಕರ್ಣ: ಶಿರೂರು ಗುಡ್ಡ ಕುಸಿತ ದುರಂತದಲ್ಲಿ 8 ಜನರು ಮೃತಪಟ್ಟಿದ್ದು, ಮೂವರು ಇದುವರೆಗೂ ಪತ್ತೆಯಾಗಿಲ್ಲ. ಈ ಎಲ್ಲ ಘಟನೆಗಳಿಗೆ ಕಾರಣವಾಗಿರುವ ಎನ್‌ಎಚ್‌ಎಐ ಮತ್ತು ಐಆರ್‌ಬಿ ಕಂಪನಿಯ ಅಧಿಕಾರಿಗಳನ್ನು ಕೂಡಲೇ ಬಂಧಿಸಿ ಎಂದು ಒತ್ತಾಯಿಸಿ ಸೆ.12 ರಂದು ಬೆಳಗ್ಗೆ 10.30 ಕ್ಕೆ ಶರವಾತಿ ವೃತ್ತದಿಂದ ಪಾದಯಾತ್ರೆ ಆರಂಭಗೊAಡು ಹೊನ್ನಾವರದ ಎನ್‌ಎಚ್‌ಎಐ ಕಚೇರಿಗೆ ಮುತ್ತಿಗೆ ಹಾಕಲಾಗುವುದು ಎಂದು ನಾರಾಯಣಗುರು ಶಕ್ತಿಪೀಠದ ಶ್ರೀ ಪ್ರಣವಾನಂದ ಸ್ವಾಮೀಜಿಯವರು ತಿಳಿಸಿದ್ದಾರೆ. ಶಿರೂರಿನಲ್ಲಿ ಬಾರಿ ಪ್ರಮಾಣದಲ್ಲಿ ಗುಡ್ಡ ಕುಸಿತ ಉಂಟಾಗಿ ಒಂದೇ ಕುಟುಂಬದ ನಾಲ್ಕು ಜನ ಸೇರಿದಂತೆ ಒಟ್ಟು 8 ಜನರು ಸಾವನ್ನಪ್ಪಿದ್ದರು.

ಗುಡ್ಡ ಗಂಗಾವಳಿ ನದಿಗೆ ಬಿದ್ದ ಪರಿಣಾಮವಾಗಿ ಇನ್ನೊಂದು ದಡವಾದ ಉಳುವರೆಯ 6 ಮನೆಗಳನ್ನು ಸಂಪೂರ್ಣ ನಾಶವಾಗಿ 30ಕ್ಕೂ ಅಧಿಕ ಮನೆಗಳಿಗೆ ಭಾಗಶಃ ಹಾನಿಯಾಗಿವೆ. ಅಲ್ಲಿಯ ಕೃಷಿ ಭೂಮಿಯಲ್ಲಿ ಕಲ್ಲುಮಣ್ಣುಗಳು ಬಿದ್ದ ಪರಣಾಮ ಭತ್ತದ ಗದ್ದೆಗಳು ಸಂಪೂರ್ಣ ನಾಶವಾಗಿದೆ. ಇದೆಲ್ಲದಕ್ಕೂ ಚತುಷ್ಪಥ ಕಾಮಗಾರಿ ಕೈಗೊಂಡಿರುವ ಐಆರ್‌ಬಿ ಕಂಪನಿಯವರು ಅವೈಜ್ಞಾನಿಕವಾಗಿ ಗುಡ್ಡ ಕತ್ತರಿಸಿದ್ದರಿಂದಲೇ ಈ ಸ್ಥಿತಿ ಬಂದಿದೆ. ಮೃತರಾದ ಕುಟುಂಬಕ್ಕೆ 5 ಲಕ್ಷದಂತೆ ಹಣ ನೀಡಿ ಸರಕಾರ ಕೈತೊಳೆದುಕೊಂಡಿದೆ. ಇನ್ನು 6 ಮನೆಗಳು ಸಂಪೂರ್ಣ ನಾಶವಾಗಿದ್ದು, ಅವರಿಗೆ 1.20 ಲಕ್ಷ ನೀಡಿ ಈಗ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಮೌನಗೊಂಡಿದ್ದಾರೆ.

ಈ ದುರ್ಘಟನೆ ನಡೆದ ನಂತರ ಪ್ರಣವಾನಂದ ಸ್ವಾಮೀಜಿಯವರು ಘಟನಾ ಸ್ಥಳಕ್ಕೆ ಮತ್ತು ಮೃತರ ಮನೆಗಳಿಗೆ ಭೇಟಿ ನೀಡಿ ಸಾಂತ್ವನ ಹೇಳಿದ್ದರು. ನೊಂದ ಸಂತ್ರಸ್ತ ಕುಟುಂಬದವರು ಬೆಂಗಳೂರು ಸೇರಿದಂತೆ ದೆಹಲಿಗೂ ಕೂಡ ಕರೆದುಕೊಂಡು ಹೋಗಿ ಅಲ್ಲಿಯ ಸಂಸದರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದರು. ಅಲ್ಲಿಯೂ ಕೂಡ ಸರಿಯಾದ ಸ್ಪಂದನೆ ಸಿಗದಿದ್ದರಿಂದ ಕೆಲದಿನಗಳ ಹಿಂದೆ ಕಾರವಾರ ಜಿಲ್ಲಾಧಿಕಾರಿ ಕಚೇರಿ ಎದುರು ಸಾಂಕೇತಿಕವಾಗಿ ಪ್ರತಿಭಟನೆ ನಡೆಸಿದ್ದರು. ಈಗ ಮತ್ತೆ ಪಾದಯಾತ್ರೆ ಹಾಗೂ ಕಚೇರಿ ಮುತ್ತಿಗೆ ಹಾಕಲು ಶ್ರೀ ಪ್ರಣವಾನಂದ ಸ್ವಾಮೀಜಿ ಅವರು ಮುಂದಾಗಿದ್ದು, ಈ ಹೋರಾಟದಲ್ಲಿ ಸಂತ್ರಸ್ತ ಕುಟುಂಬದವರು ಮತ್ತು ವಿವಿಧ ಸಂಘ ಸಂಸ್ಥೆಗಳು ಆಗಮಿಸುವಂತೆ ವಿನಂತಿಸಿದ್ದಾರೆ.

ವಿಸ್ಮಯ ನ್ಯೂಸ್, ಗೋಕರ್ಣ

Back to top button