ಅಡಿಕೆ ಮಾನ ಕಳೆಯುತ್ತಿದೆ ಅಗ್ಗದ ಬರ್ಮಾ ಅಡಿಕೆ! TSS ವ್ಯಾಪಾರಿ ಅಂಗಳದಲ್ಲಿ ಬರ್ಮಾ ದೇಶದ ಚಾಲಿ: ಏನಾಯ್ತು ನೋಡಿ?
ಶಿರಸಿ: ಕೊಳೆರೋಗ, ಕಾರ್ಮಿಕ ಸಮಸ್ಯೆ, ಹವಾಮಾನ ವೈಪರೀತ್ಯ, ಹೀಗೆ ಹಲವಾರು ಸಮಸ್ಯೆಗಳ ಮಧ್ಯೆ ಬರ್ಮಾ ಅಡಿಕೆ ಭೂತ, ಇದೀಗ ಅಡಿಕೆ ಬೆಳೆಗಾರರನ್ನು ಕಾಡಲಾರಂಭಿಸಿದೆ. ಕಳ್ಳಮಾರ್ಗದಲ್ಲಿ ಅಗ್ಗದ ಮತ್ತು ಕಳಪೆ ಅಡಿಕೆ ಬರುತ್ತಿರುವ ಪ್ರಕರಣ ಬೆಳಕಿಗೆ ಬರುತ್ತಿದ್ದು, ಶಿರಸಿಯಲ್ಲಿನ ಘಟನೆ ಬೆಳೆಗಾರರ ಆತಂಕವನ್ನು ಹೆಚ್ಚಿಸಿದೆ. ಶಿರಸಿಯ ಟಿ ಎಸ್‌ಎಸ್ ವ್ಯಾಪಾರಿ ಅಂಗಳದಲ್ಲಿ ಬರ್ಮಾ ದೇಶದ ಚಾಲಿ ಅಡಿಕೆಯನ್ನು ವಿಕ್ರಿಗೆ ಬಂದಿದ್ದು, ಇದು ಗಮನಕ್ಕೆ ಬಂದು ತಕ್ಷಣ ಸೊಸೈಟಿಯ ಆಡಳಿತ ಮಂಡಳಿ ಟೆಂಡರ್ ನಿಲ್ಲಿಸಿ ಕಲಬೆರಿಕೆ ಮಾಲು ಹಾಕಿದವನ ವಿರುದ್ಧ ಪೊಲೀಸ್ ದೂರು ದಾಖಲಿಸಲು ಮುಂದಾದ ಘಟನೆ ನಡೆದಿದೆ.
ಅಬ್ದುಲ್ ಮಜೀದ್ ಎಂಬುವವರು ಸ್ಥಳೀಯ ಅಡಿಕೆ ಜತೆ ವಿದೇಶದ ಅಗ್ಗದ ಬರ್ಮಾ ಅಡಿಕೆ ಬೆರಿಕೆ ಮಾಡಿ ಮಾರಾಟಕ್ಕೆ ಹಾಕಿದ್ದಾರೆ. ವ್ಯಾಪಾರಸ್ಥರು ಟೆಂಡರ್ ಬರೆಯುವಾಗ ಅನುಮಾನ ವ್ಯಕ್ತಪಡಿಸಿ, ನಮಗೆ ಮಾಹಿತಿ ನೀಡಿದ್ದಾರೆ. ಟೆಂಡರ್ ರದ್ದುಗೊಳಿಸಿ, ಕಾನೂನು ಕ್ರಮಕ್ಕೆ ಮುಂದಾಗಿದ್ದೇವೆ ಎಂದು ಟಿಎಸ್ಎಸ್ ಅಧ್ಯಕ್ಷ ಗೋಪಾಲಕೃಷ್ಣ ವೈದ್ಯ ಅವರು ಮಾಹಿತಿ ನೀಡಿದ್ದಾರೆ.
ಅಡಕೆ ದರ ಇಳಿಯುವ ಆತಂಕ?
ಸುತ್ತಮುತ್ತಲಿನ ದೇಶಗಳಿಂದ ಅವ್ಯಾಹತವಾಗಿ ಅಕ್ರಮ ಅಡಿಕೆ ಭಾರತಕ್ಕೆ ಬರುತ್ತಿದೆ ಎನ್ನಲಾಗುತ್ತಿದೆ. ಹೀಗೆ ಕಳ್ಳ ಮಾರ್ಗದಲ್ಲಿ ವಿದೇಶಿ ಅಡಿಕೆ ಮಾರುಕಟ್ಟೆಗೆ ಬರುತ್ತಿರುವುದರಿಂದ ಅಡಿಕೆ ಮಾರುಕಟ್ಟೆ ಮೇಲೆ ವ್ಯತಿರಿಕ್ತ ಪರಿಣಾಮ ಆಗುವ ಸಾಧ್ಯತೆಯಿದೆ. ದರ ಕುಸಿತ ಆಗುವ ಸಾಧ್ಯತೆಯನ್ನೂ ತಳ್ಳಿಹಾಕುವಂತಿಲ್ಲ ಎನ್ನುತ್ತಾರೆ ವ್ಯಾಪಾರಸ್ಥರು.
ಕಾಡುತ್ತಿರುವ ಬರ್ಮಾ ಅಡಿಕೆ
ಬರ್ಮಾ ಅಡಿಕೆ ಕೆ.ಜಿಗೆ 100 ರಿಂದ 140 ರೂಪಾಯಿಗೆ ಸಿಗುತ್ತದೆ. ವಿದೇಶಿ ಒಪ್ಪಂದವನ್ನು ದುರ್ಬಳಕೆ ಮಾಡಿಕೊಳ್ಳುವ ಕೆಲವರು ಅಲ್ಲಿನ ಅಡಿಕೆಯನ್ನು ಬೃಹತ್ ಪ್ರಮಾಣದಲ್ಲಿ ತರಿಸಿಕೊಂಡು, ಇದನ್ನು ಸ್ಥಳೀಯ ಗುಣಮಟ್ಟದ ಅಡಿಕೆಯೊಂದಿಗೆ ಮಿಶ್ರಣ ಮಾಡಿ, ಮಾರುವ ಆತಂಕ ಎದುರಾಗಿದೆ. ಒಂದು ಮಾಹಿತಿಯ ಪ್ರಕಾರ ಭೂತಾನ್‌ನಿಂದ ಪ್ರತಿವರ್ಷ 17 ಸಾವಿರ ಮೆಟ್ರಿಕ್ ಟನ್ ಅಡಿಕೆ ಅಧಿಕೃತವಾಗಿ ಭಾರತ ಸೇರುತ್ತಿದೆ. ಆದ್ರೆ, ಕಳ್ಳಮಾರ್ಗದಲ್ಲಿ ಬರುವ ಅಡಿಕೆಗೆ ಲೆಕ್ಕವಿಲ್ಲ.
ಬ್ಯೂರೋ ರಿಪೋರ್ಟ್ ವಿಸ್ಮಯ ನ್ಯೂಸ್