ಅಂಕೋಲಾ : ಯುವಕ ನೋರ್ವ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಪಟ್ಟಣದ ವಾಜಂತ್ರಿಕಟ್ಟೆ ಮತ್ತು ನಾರಾಯಣ ದೇವಸ್ಥಾನದ ಎದುರಿನ ಮುಖ್ಯ ರಸ್ತೆಯ ಹತ್ತಿರದ ಮನೆಗೆ ಹೊಂದಿಕೊಂಡ ಗೋಡನ (ಕಟ್ಟಡ) ಒಂದರಲ್ಲಿ ಸಂಭವಿಸಿದೆ. ನಾರಾಯಣ (ಸಂತು ) ಮಹಾಲೆ (36 ) ಮೃತ ದುರ್ದೈವಿ ಯುವಕನಾಗಿದ್ದಾನೆ.
ಕಟ್ಟಾ ಆರ್ ಎಸ್ ಎಸ್ ಹಿನ್ನಲೆಯ ಹಿರಿಯ ಸಾಮಾಜಿಕ ಕಾರ್ಯಕರ್ತ ಮತ್ತು ಪಟ್ಟಣದ ಪ್ರಮುಖ ದೇವಸ್ಥಾನ ಸೇರಿದಂತೆ ಹತ್ತಾರು ಧಾರ್ಮಿಕ ಮತ್ತಿತರ ವಿದಾಯಕ ಕಾರ್ಯಗಳಲ್ಲಿ ಸದಾ ತನ್ನನ್ನು ತೊಡಗಿಸಿಕೊಂಡು , ಇಳಿ ವಯಸ್ಸಿನಲ್ಲೂ ಇತರರಿಗೆ ಮಾದರಿಯಾಗಿರುವ ನಾರಾಯಣ ಯಾನೆ ಅಶೋಕ ಮಹಾಲೆ ಅವರು ಮೃತ ಯುವಕನ ತಂದೆಯಾಗಿದ್ದಾರೆ. ಪ್ರತಿಷ್ಠಿತ ಕುಟುಂಬದಲ್ಲಿ ಜನಸಿದ್ದ ಸಂತು ಎಂಬ ಈ ಯುವಕ ,ಪಟ್ಟಣದ ಮೀನು ಪೇಟೆ ತಿರುವಿನ ದುರ್ಗಾದೇವಿ ದೇವಸ್ಥಾನದ ಎದುರು ಹೋಟೆಲ್ ಇಟ್ಟು ಕೊಂಡಿರುವ ತನ್ನ ತಂದೆಗೆ ಸಹಾಯಕನಾಗಿ ಕೆಲಸ ನಿರ್ವಹಿಸುತ್ತಿದ್ದದಲ್ಲದೇ ,ಅಡಿಗೆ ಪಾತ್ರೆ ಟೇಬಲ್ ಕುರ್ಚಿ ಮತ್ತಿತರ ವಸ್ತುಗಳನ್ನು ಬಾಡಿಗೆಗೆ ನೀಡುವ ಮೂಲಕ ಸ್ವಂತ ಉದ್ಯೋಗ ಮಾಡಿಕೊಂಡಿದ್ದ.
ಜ 15 ರ ಬುಧವಾರ ಸಾಯಂಕಾಲ ದೇವಸ್ಥಾನಕ್ಕೂ ಹೋಗಿ ಬಂದಿದ್ದ ಅದೇ ಯುವಕ ,ತನ್ನ ಟೇಬಲ್ ಕುರ್ಚಿ ವ್ಯವಹಾರಕ್ಕೆ ಸಂಬಂಧಿಸಿದಂತೆ ಗ್ರಾಹಕರಾರೋ ಬಂದಿದ್ದಾರೆ ಎಂದು ಹೇಳಿ ,ಮನೆಗೆ ಹೊಂದಿಕೊಂಡಿರುವ ಗೋಡನ್ ನ ಚಾವಿ ತೆಗೆದುಕೊಂಡು ಹೋದವನು ,ಮನೆಯವರಿಗೆ ಅರಿವಿಗೆ ಬಾರದಂತೆ ಹಿಂಬದಿ ಬಾಗಿಲು ತೆರೆದಿಟ್ಟು , ಮಂಬದಿ ಶಟರ್ ಲಾಕ್ ಮಾಡಿ ,ಚಾವಿಯನ್ನು ಮನೆಯಲ್ಲಿ ಇಟ್ಟು ಬಂದು ತಾಯಿ ಬಳಿ ಮಾರುಕಟ್ಟೆಗೆ ಹೋಗಿ ಬರುವುದಾಗಿ ಸುಳ್ಳು ಹೇಳಿ ನಂಬಿಸಿ ಹೋದವನು ,ಹಿಂಬಾಗಿಲ ಮೂಲಕ ಒಳ ಬಂದು ಗೋಡನ್ ಒಳಗೆ ಹೋಗಿ ನೈಲಾನ್ ಹಗ್ಗದ ಒಂದು ತುದಿಯನ್ನು ಕಾಂಕ್ರೀಟ ಸ್ಲ್ಯಾಬ್ ಗೆ ಅಳವಡಿಸಿರುವ ಹು ಕ್ಕಿಗೆ ಹಾಗೂ ಇನ್ನೊಂದು ತುದಿಯನ್ನು ತನ್ನ ಕುತ್ತಿಗೆಗೆ ಕುಣಿಕೆಯಂತೆ ಮಾಡಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎನ್ನಲಾಗಿದೆ.
ಪೇಟೆಗೆ ಹೋಗಿ ಬರುತ್ತೇನೆ ಎಂದಿದ್ದ ಮಗ ಕೆಲ ಹೊತ್ತಾದರೂ ಮನೆಗೆ ಮರಳ ದಿರುವುದು ,ಫೋನ್ ಕರೆ ಮಾಡಿದರೂ ಕರೆ ಸ್ವೀಕರಿಸದಿರುವುದರಿಂದ ಆತಂಕಗೊಂಡ ತಂದೆ – ತಾಯಂದಿರು ,ಮತ್ತೆ ಮತ್ತೆ ಫೋನ್ ಮಾಡುತ್ತಾ , ಹತ್ತಿರದಲ್ಲಿ ಬೈಕ್ ಇರುವುದನ್ನು ನೋಡಿ ಮಗನಿಗಾಗಿ ಹುಡುಕಾಟ ನಡೆಸುತ್ತಿರುವಾಗ ,ಗೋಡನ್ ಒಳಗಡೆಯಿಂದ ಫೋನ್ ರಿಂಗಣ ಸದ್ದು ಕೇಳಿ , ಮತ್ತಷ್ಟು ಗಾಬರಿಗೊಂಡು ಶೆಟರ್ ಲಾಕ್ ಓಪನ್ ಮಾಡಿ ನೋಡಿದಾಗ ,ಮನೆ ಮಗ ನೇಣು ಬಿಗಿದ ಸ್ಥಿತಿಯಲ್ಲಿ ನೇತಾಡುವುದನ್ನು ನೋಡಿ , ಕ್ಷಣ ಕಾಲ ಅವಕ್ಕಾಗಿ , ಬಳಿಕ ಮಗ ಬದುಕಿರಬಹುದೆಂಬ ಕೊನೆಯ ಆಸೆಯಿಂದ ಕೂಡಲೇ ಕೆಳಗಿಳಿಸಿ , ಹಗ್ಗದ ಕುಣಿಕೆ ಸಡಿಲಿಸುವ ಯತ್ನ ಮಾಡಿದರಾದರೂ ಅವರ ಯತ್ನ ಫಲ ನೀಡಬೇ ನಿರಾಶರಾಗುವಂತಾಗಿ, ಅದಾಗಲೇ ಮನೆಮಗನ ಪ್ರಾಣಪಕ್ಷಿ ಹಾರಿಹೋಗಿತ್ತು ಎನ್ನಲಾಗಿದೆ.
ಈ ವಿಷಯ ತಿಳಿದ ಅಕ್ಕಪಕ್ಕದ ಮನೆಯವರು ಹಾಗೂ ಸ್ಥಳೀಯ ಅನೇಕ ಮುಖಂಡರು ಘಟನಾ ಸ್ಥಳದತ್ತ ದೌಡಾಯಿಸಿದ್ದಾರೆ. ಪುತ್ರ ಶೋಕದಿಂದ ಅತ್ಯಂತ ದುಃಖ ಭರಿತರಾಗಿ ಮಾತನಾಡಿದ ಅಶೋಕಣ್ಣನ ಕೆಲ ಅಂತರಾಳದ ಭಾವನೆಗಳು ,ಮಹಾಲೆ ಕುಟುಂಬದ ಆಪ್ತರ ಹಿತೈಷಿಗಳ ಹಾಗೂ ಅಲ್ಲಿ ನೆರೆದಿದ್ದವರ ಮನ ಕಲಕುವಂತಿತ್ತು. ಪಿಎಸ್ಐ ಉದ್ದಪ್ಪ ಧರಪ್ಪನವರ್ ಮತ್ತು ಸಿಬ್ಬಂದಿಗಳು ಸ್ಥಳ ಪರಿಶೀಲಿಸಿ ಕಾನೂನು ಕ್ರಮ ಮುಂದುವರಿಸಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ತಾಲೂಕ ಆಸ್ಪತ್ರೆ ಶವಾಗಾರಕ್ಕೆ ಸಾಗಿಸಲಾಗಿದ್ದು ,ಆತ್ಮಹತ್ಯೆ ಘಟನೆ ಕುರಿತಂತೆ ಮತ್ತು ಸಾವಿನ ಕಾರಣಗಳೇನಿರಬಹುದು ಎಂಬುದರ ಬಗ್ಗೆ ಹೆಚ್ಚಿನ ಮತ್ತು ನಿಖರ ಮಾಹಿತಿಗಳು ತಿಳಿದು ಬರಬೇಕಿದೆ.
ಎಲ್ಲರಿಗೂ ಉಪಕಾರಿಯಾಗಿದ್ದ ಪ್ರತಿಷ್ಠಿತ ಕುಟುಂಬದ ಕುಡಿಯೊಂದು ಈ ರೀತಿ ಆತ್ಮಹತ್ಯೆಯ ದಾರಿ ತುಳಿದಿರುವುದಕ್ಕೆ , ಸುಭಾಸ ನಾರ್ವೇಕರ ,ಭಾಸ್ಕರ್ ನಾರ್ವೇಕರ ,ವಿಜಯ್ ಕುಮಾರ್ ನಾಯ್ಕ್ , ಸುರೇಶ ವೆರ್ಣೇಕರ ಸೇರಿದಂತೆ ಪಟ್ಟಣದ ಹಲವು ಪ್ರಮುಖರು ಅತೀವ ಬೇಸರ ವ್ಯಕ್ತಪಡಿಸಿದ್ದಾರೆ . ಸಂತು ಮಹಾಲೆ ಅಕಾಲಿಕ ನಿಧನಕ್ಕೆ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಸಂತಾಪ ಸೂಚಿಸಿ ,ಶ್ರೀದೇವರು ನೊಂದ ಕುಟುಂಬಕ್ಕೆ ದುಃಖ ಮರೆಸುವ ಶಕ್ತಿ ನೀಡಲಿ ಎಂದು ಪ್ರಾರ್ಥಿಸಿದ್ದಾರೆ.
ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ