
ಹೊನ್ನಾವರ: ತಾಲೂಕಿನ ಚಿಕ್ಕನಕೋಡಿನ ಗೋವಿಂದಮೂರ್ತಿ ದೇವರ ವರ್ಧಂತಿ ಉತ್ಸವದ ಅಂಗವಾಗಿ ಪ್ರದರ್ಶನಗೊಂಡ “ಶ್ರೀನಿವಾಸ ಕಲ್ಯಾಣ” ಎಂಬ ಸುಂದರ ಪೌರಾಣಿಕ ನಾಟಕವು ಕಲಾಭಿಮಾನಿಗಳನ್ನು ರಂಜಿಸಿತು. ಚಿಕ್ಕನಕೋಡ ಶ್ರೀ ಗೋವಿಂದಮೂರ್ತಿ ದೇವರ ವರ್ಧಂತಿ ಉತ್ಸವದ ಅಂಗವಾಗಿ ಸ್ಥಳೀಯ “ಮಿತ್ರವೃಂದ ನಾಟಕ ಮಂಡಳಿ” ಕಲಾವಿದರಿಂದ “ಶ್ರೀನಿವಾಸ ಕಲ್ಯಾಣ” ಎಂಬ ಪೌರಾಣಿಕ ನಾಟಕ ಪ್ರದರ್ಶನ ನಡೆಯಿತು.
ಗರಿಷ್ಠ ಖರ್ಚು ಹಾಗೂ ಕಲಾವಿದರ ಕೊರತೆಯಿಂದ ಉತ್ತರ ಕನ್ನಡ ಜಿಲ್ಲೆಯಲ್ಲಿ ಪೌರಾಣಿಕ ನಾಟಕ ಪ್ರದರ್ಶನ ತೀರಾ ಅಪರೂಪವಾಗಿರುವ ಈಗಿನ ದಿನದಲ್ಲಿ, ಚಿಕ್ಕನಕೋಡಿನಲ್ಲಿ ವಿಶೇಷ ದಾನಿಗಳು ಹಾಗೂ ದೇವಾಲಯದ ಸಹಕಾರದಿಂದ ಪೌರಾಣಿಕ ನಾಟಕ ಪ್ರದರ್ಶನ ಮಾಡಿರುವುದು ಕಲಾಭಿಮಾನಿಗಳ ಪ್ರಶಂಸಗೆ ಸಾಕ್ಷಿಯಾಯಿತು. ಕಡಿಮೆ ಅವಧಿಯಲ್ಲಿ ನಾಟಕದ ಪೂರ್ವಭ್ಯಾಸ ಮಾಡಿ, ಕೊಟ್ಟ ಪಾತ್ರಕ್ಕೆ ಜೀವ ತುಂಬುವಲ್ಲಿ ಕಲಾವಿದರೆಲ್ಲ ಯಶಸ್ವಿಯಾದರು.
ಈ ನಾಟಕದಲ್ಲಿ ಬರುವ ಪ್ರಮುಖ ಪಾತ್ರಗಳಾದ ಶ್ರೀನಿವಾಸನಾಗಿ ದಯಾನಂದ ಭಟ್, ಭ್ರಗು ಮುನಿಯಾಗಿ ನಾರಾಯಣ ಭಟ್, ಪದ್ಮಾವತಿಯಾಗಿ ಕಾಂಚನ ಭಟ್, ಲಕ್ಷ್ಮೀಯಾಗಿ ಯುಕ್ತಾ ಭಟ್, ನಾರದನಾಗಿ ರಮೇಶ್ ಶಾನಭಾಗ್, ಬಹುಳದೇವಿಯಾಗಿ ರೇಣುಕಾ ಭಟ್ ಅಭಿನಯಿಸಿದ್ದರು. ಪೌರಾಣಿಕ ನಾಟಕಕ್ಕೆ ಹಿನ್ನಲೆ ಸಂಗೀತವೂ ಪ್ರಧಾನ ವಾಗಿದ್ದು, ಗಾಯನದಲ್ಲಿ ನಾರಾಯಣ ಭಟ್ ಮತ್ತು ಶ್ರಾವ್ಯ ಆಚಾರ್ಯ ಸುಮಧುರವಾಗಿ ಹಾಡಿದರು. ತಿರುಪತಿಯಿಂದ ತಂದ ಲಡ್ಡು ಪ್ರಸಾದವನ್ನು ನಾಟಕ ವೀಕ್ಷಿಸಿದ ಪ್ರತಿಯೊಬ್ಬರಿಗೂ ಶ್ರೀನಿವಾಸನ ಕಲ್ಯಾಣವಾದ ಬಳಿಕ ವಿತರಿಸಲಾಯಿತು.
ವಿಸ್ಮಯ ನ್ಯೂಸ್, ಹೊನ್ನಾವರ