
ಕುಮಟಾ: ಕಳೆದ ಆರೇಳು ವರ್ಷಗಳಿಂದ ಅನೇಕ ಜನಪರ ಹಾಗೂ ಸಮಾಜಮುಖಿ ಕಾರ್ಯಗಳ ಮೂಲಕ ಜನಮನ್ನಣೆ ಪಡೆದಿರುವ ಇಲ್ಲಿನ ವಿವೇಕನಗರ ವಿಕಾಸ ಸಂಘವು ಮುಂದಿನ ಮೂರು ವರ್ಷಗಳ ಅವಧಿಗೆ ನೂತನ ಕಾರ್ಯಕಾರಿ ಸಮಿತಿಯನ್ನು ರಚಿಸಿದೆ. ಕಳೆದ ವಾರ ನಡೆದ ಸಂಘದ ಸರ್ವಸಾಧಾರಣ ಸಭೆಯಲ್ಲಿ ಹದಿನೇಳು ಸದಸ್ಯರ ಕಾರ್ಯಕಾರಿ ಮಂಡಳಿಯನ್ನು ಪುನರ್ ರಚಿಸಲಾಗಿತ್ತು.
ಇಂದು ಗುರುವಾರ ಸಂಜೆ ನಡೆದ ಕಾರ್ಯಕಾರಿ ಮಂಡಳಿಯ ಮೊದಲ ಸಭೆಯಲ್ಲಿ, ನಾಲ್ವರು ಪದಾಧಿಕಾರಿಗಳನ್ನು ಸರ್ವಾನುಮತದಿಂದ ಆಯ್ಕೆಮಾಡಲಾಯಿತು. ಸಭೆ ಶಾರದಾ ನಿಲಯ ಸರ್ಕಾರಿ ಪ್ರಾಥಮಿಕ ಶಾಲೆಯ ಆವರಣದಲ್ಲಿ ನಡೆಯಿತು. ಕಾರ್ಯಕಾರೀ ಮಂಡಳಿಯ ಹದಿನೈದು ಸದಸ್ಯರು ಇಂದಿನ ಸಭೆಯಲ್ಲಿ ಪಾಲ್ಗೊಂಡರು.
ಅಧ್ಯಕ್ಷರಾಗಿ ಡಾ. ಎಂ.ಆರ್. ನಾಯಕ ಪುನರಾಯ್ಕೆಗೊಂಡಿದ್ದು, ಕಾರ್ಯದರ್ಶಿಯಾಗಿ ಡಾ. ಡಿ.ಡಿ. ಭಟ್ಟ, ಉಪಾಧ್ಯಕ್ಷರಾಗಿ ಎಸ್.ಐ. ನಾಯ್ಕ ಪುನರಾಯ್ಕೆಗೊಂಡರು. ಖಜಾಂಚಿಯಾಗಿ ನೂತನ ಸದಸ್ಯ ಪ್ರಶಾಂತ್ ಆರ್. ರೇವಣಕರ ಅವರು ಆಯ್ಕೆಯಾದರು. ವಿವೇಕನಗರದ ಸಮಗ್ರ ಅಭಿವೃದ್ಧಿಗೆ ಗುರಿಯಾಗಿಸಿಕೊಂಡಿರುವ ಸಂಘ, ಮುಂದಿನ ದಿನಗಳಲ್ಲಿ ಇನ್ನಷ್ಟು ಸಮಾಜಮುಖಿ ಯೋಜನೆಗಳನ್ನು ರೂಪಿಸಿ, ಸ್ಥಳೀಯರ ಸಕ್ರಿಯ ಸಹಭಾಗಿತ್ವದೊಂದಿಗೆ ಜವಾಬ್ದಾರಿಯುತ ಯೋಜನೆಗಳನ್ನು ಮುಂದಕ್ಕೆ ತರುವ ನಿಟ್ಟಿನಲ್ಲಿ ನಿರ್ಧಾರ ತೆಗೆದುಕೊಂಡಿದೆ.
ವಾಸ್ತವಿಕ ಅಭಿವೃದ್ಧಿಯ ಹಾದಿಯಲ್ಲಿ ಸಂಘ ಮುನ್ನಡೆಯಲು, ನಿವಾಸಿಗಳ ಸಹಕಾರ ಹಾಗೂ ಸಹಭಾಗಿತ್ವವೇ ಪ್ರಮುಖ ಎನ್ನುವ ನಂಬಿಕೆಯಿಂದ ನೂತನ ಸಮಿತಿ ಕಾರ್ಯ ಆರಂಭಿಸಲಿದೆಯೆಂದು ಅಧ್ಯಕ್ಷ ಡಾ.ಎಮ್.ಆರ್.ನಾಯಕ ಸಂಘದ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ವಿಸ್ಮಯ ನ್ಯೂಸ್, ಕುಮಟಾ