
ಕುಮಟಾ : ಸಮಾಜದ ಅಭಿವೃದ್ಧಿಯ ದೃಷ್ಠಿಕೋನ ಹಾಗೂ ನೌಕರರ ಹಿತಕಾಯುವ ಸದುದ್ದೇಶದಿಂದ ಹುಟ್ಟಿಕೊಂಡ ಜಿಲ್ಲಾ ಹಾಲಕ್ಕಿ ನೌಕರರ ಸಂಘ ತನ್ನ ಸಮಾಜಮುಖಿ ಕಾರ್ಯ ಚಟುವಟಿಕೆಗಳಿಂದ ಸಮಾಜದೊಂದಿಗೆ ಬೆರೆತಿರುವುದರಲ್ಲಿ ನೌಕರರು ತಾವಷ್ಟೇ ಬೆಳೆಯದೇ ತಾವು ಹುಟ್ಟಿದ ಸಮಾಜಕ್ಕೂ ಏನನ್ನಾದರೂ ಕೊಡಲೇ ಬೇಕು ಎನ್ನುವ ನಿಸ್ವಾರ್ಥ ಮನೋಭಾವ ವ್ಯಕ್ತವಾಗಿದೆ ಎಂದು ಆದಿಚುಂಚನಗಿರಿ ಮಹಾಸಂಸ್ಥಾನ ಮಿರ್ಜಾನ್‌ಶಾಖಾಮಠದ ಬ್ರಹ್ಮಚಾರಿ ಶ್ರೀ ನಿಶ್ಚಲಾನಂದನಾಥ ಸ್ವಾಮೀಜಿರವರು ಅಭಿಪ್ರಾಯ ಪಟ್ಟರು.
ಅವರು ಕುಮಟಾದ ದೀವಗಿಯ ಹಾಲಕ್ಕಿ ಒಕ್ಕಲಿಗರ ಸಮುದಾಯ ಭವನದಲ್ಲಿ ಉತ್ತರ ಕನ್ನಡ ಜಿಲ್ಲಾ ಹಾಲಕ್ಕಿ ಒಕ್ಕಲು ನೌಕರರ ಸಂಘ ಹಮ್ಮಿಕೊಂಡ ಹಾಲಕ್ಕಿ ಸ್ಮರಣ ಸಂಚಿಕೆ-3 ರ ಬಿಡುಗಡೆ ಹಾಗೂ ಸಂಘದ ಸದಸ್ಯತ್ವ ಹೊಂದಿದ ಸೇವಾ ನಿವೃತ್ತ ನೌಕರರಿಗೆ ಸನ್ಮಾನ ಕಾರ್ಯಕ್ರಮ ದಲ್ಲಿ ದಿವ್ಯಸಾನಿಧ್ಯ ವಹಿಸಿ ಮಾತನ್ನಾಡುತ್ತಾ ಆರ್ಥಿಕವಾಗಿ ಹಿಂದುಳಿದ ಹಾಲಕ್ಕಿ ಸಮಾಜದಲ್ಲಿ ಜನಿಸಿ ವಿದ್ಯಾರ್ಜನೆ ಮಾಡಿ ನೌಕರಿ ಪಡೆದು ತಮ್ಮ ಕುಟುಂಬ ನೋಡಿಕೊಳ್ಳುವುದರ ಜೊತೆಗೆ ಸಮಾಜಕ್ಕೂ ಏನಾದರು ಕೊಡಬೇಕು ಎನ್ನುವ ಸದುದ್ದೇಶದಿಂದ ಹಾಲಕ್ಕಿ ನೌಕರರ ಸಂಘ ಕಟ್ಟಿ ಅದರ ಮೂಲಕ ಸಮಾಜದ ಮಕ್ಕಳಿಗೆ ಮಾರ್ಗದರ್ಶನ, ನೌಕರ ಬಾಂಧವರ ಸಮಸ್ಯೆಗಳಿಗೆ ಸ್ಪಂದಿಸುತ್ತಾ ಆಸರೆಯಾಗುತ್ತಾ ಸಂಘದ ಸದಸ್ಯತ್ವ ಪಡೆದು ಸೇವಾ ನಿವೃತ್ತಿಯಾದ ನೌಕರರನ್ನು ಗೌರವಿಸುವ ಕಾಯಕ ಮಾಡುತ್ತಿರುವುದು ಅಭಿಮಾನದ ಸಂಗತಿ.
ಯಾರಿಗೇ ಆಗಲಿ ಆ ವ್ಯಕ್ತಿ ಎತ್ತರಕ್ಕೆ ಬೆಳೆದಾಗ ಜಿಲ್ಲೆ, ರಾಜ್ಯ, ರಾಷ್ಟ್ರ ಮಟ್ಟದಲ್ಲಿ ಗೌರವ ಸನ್ಮಾನಗಳು ಲಭಿಸಿದರೂ ತನ್ನ ಸಮಾಜ ಸನ್ಮಾನಿಸಿದಾಗ ಹೆಚ್ಚು ಸಂತೋಷ ಪ್ರಾಪ್ತವಾಗುತ್ತದೆ. ಸಮಾಜದ ಪ್ರತಿರೂಪದಂತೆ ಮೂಡಿಬಂದಿರುವ ಹಾಲಕ್ಕಿ ಸ್ಮರಣ ಸಂಚಿಕೆ ನೌಕರ ಸಂಘದ ಕ್ರೀಯಾಶೀಲತೆ ಸಾಕ್ಷೀಕರಿಸಿದೆ. ಸಂಘ ಮತ್ತಷ್ಟು ಸಂಘಟನಾತ್ಮಕವಾಗಿ ಹಾಗೂ ಆರ್ಥಿಕವಾಗಿ ಬಲಗೊಂಡು ಸಮುದಾಯದ ಏಳ್ಗೆಗೆ ಇನ್ನಷ್ಟು ರೀತಿಯಲ್ಲಿ ಶ್ರಮಿಸುವಂತಾಗಲಿ ಎಂದು ಆಶೀರ್ವಚನ ನೀಡಿದರು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಮಂಗಳೂರು ವಿಭಾಗದ ಕೃಷಿ ಇಲಾಖೆಯ ಜಂಟಿ ನಿರ್ದೇಶಕರಾದ ಹೊನ್ನಪ್ಪ ಗೌಡರವರು ತಮ್ಮ ಸೇವೆಯ ಬಹುಪಾಲು ಸೇವಾವಧಿಯನ್ನು ಹೊರಜಿಲ್ಲೆಯಲ್ಲಿ ಕಳೆದಿದ್ದರೂ ಸಮಾಜದ ಕಾರ್ಯಕ್ಕೆ ಮನಸ್ಸು ಸದಾ ತುಡಿಯುತ್ತಿರುತ್ತದೆ. ಬಹುಶಃ ಆ ಕಾರಣಕ್ಕೆ ಇಂದು ಮಂಗಳೂರಿನಿಂದ ಇಲ್ಲಿಗೆ ಬಂದದ್ದು. ಭವಿಷ್ಯದಲ್ಲಿ ಸಂಘ ಮತ್ತಷ್ಟು ಆರ್ಥಿಕವಾಗಿ ಸಶಕ್ತವಾಗಿ ಸಮುದಾಯಕ್ಕೆ ಇನ್ನಷ್ಟು ಸಹಾಯ ಮಾಡುವಂತಾಗಲಿ ಎಂದರು.
ಹಾಲಕ್ಕಿ ಸ್ಮರಣ ಸಂಚಿಕೆ-3 ಬಿಡುಗಡೆ ಮಾಡಿದ ಕುಮಟಾ ಹಾಲಕ್ಕಿ ಒಕ್ಕಲಿಗರ ಸಂಘದ ಅಧ್ಯಕ್ಷ ಗೋವಿಂದ ಗೌಡರು ಸಂಚಿಕೆಯು ಬಹುವರ್ಣದಿಂದ ಕೂಡಿ ಅತ್ಯಂತ ಆಕರ್ಷಣೀಯವಾಗಿ ಮೂಡಿಬಂದಿದೆ. ನೌಕರರ ಭಾವಚಿತ್ರ ಸಹಿತ ಯಾದಿ, ಸಾಧಕರ ವಿವರ, ನಿವೃತ್ತರ ಮಾಹಿತಿ, ಜಾಹಿರಾತುದಾರರ ಸಚಿತ್ರ ಮತ್ತು ಮಾಹಿತಿಯ ಜೊತೆಗೆ ಸಂಘದ ಆಯವ್ಯಯ ಒಳಗೊಂಡಿರುವುದು ಅರ್ಥಪೂರ್ಣವಾಗಿದೆ. ನಮ್ಮ ಸಮಾಜದ ಪ್ರತಿ ನೌಕರರು ಈ ಸಂಘದ ಸದಸ್ಯರಾಗುವುದರ ಮೂಲಕ ಸಂಘ ಮತ್ತಷ್ಟು ಬಲಗೊಳ್ಳಲಿ ಎಂದು ನುಡಿದರು.
ಜಿಲ್ಲಾ ಹಾಲಕ್ಕಿ ಒಕ್ಕಲಿಗರ ಸಂಘದ ಅಧ್ಯಕ್ಷ ಹನುಮಂತ ಗೌಡ ಮಾತನ್ನಾಡಿ ನಮ್ಮ ಸಮಾಜದಲ್ಲಿ ಇಂದು ಶಿಕ್ಷಣ ಪಡೆದವರಿದ್ದರೂ ಅವರಿಗೆ ನೌಕರಿ ಸಿಗುತ್ತಿಲ್ಲ. ಬುಡಕಟ್ಟು ಸಂಸ್ಕೃತಿ ಹೊಂದಿರುವ ನಮ್ಮ ಹಾಲಕ್ಕಿ ಸಮಾಜ ಪರಿಶಿಷ್ಟ ಪಂಗಡಕ್ಕೆ ಸೇರಿದರೆ ನೌಕಕರಿಗೂ ಅನುಕೂಲ. ಕೇಂದ್ರದಿಂದ ಸೂಕ್ತ ತಿದ್ದುಪಡಿಗೆ ರಾಜ್ಯಕ್ಕೆ ವಾಪಸ್‌ಬಂದಿದ್ದ ನಮ್ಮ ಪ್ರಸ್ತಾವನೆ ಪುನಃ ಕೇಂದ್ರಕ್ಕೆ ಸಲ್ಲಿಕೆಯಾಗಿದೆ. ಮುಂದಿನ ದಿನಗಳಲ್ಲಿ ಕೇಂದ್ರದ ಮೇಲೆ ಒತ್ತಡ ತಂದು ನಮ್ಮ ಸಮಾಜ ಪರಿಶಿಷ್ಟ ಪಂಗಡಕ್ಕೆ ಸೇರ್ಪಡೆಯಾದರೆ ಇದರಿಂದ ನೌಕರ ವರ್ಗದವರಿಗೂ ಅನುಕೂಲವಾಗುತ್ತದೆ ಎಂದು ಅಭಿಪ್ರಾಯ ಪಟ್ಟರು.
ಸರ್ಕಾರಿ ಪಾಲಿಟೆಕ್ನಿಕ್‌ಕಾಲೇಜಿನ ಪ್ರಾಚಾರ್ಯ ವಾಸುದೇವ ಗೌಡರವರು ಬದುಕು ಕಟ್ಟಿಕೊಳ್ಳಲು ನಮ್ಮ ಸಮಾಜ ಬಾಂದವರು ಸರ್ಕಾರಿ, ಅರೆಸರ್ಕಾರಿ ಮತ್ತು ಐ.ಟಿ.ಬಿ.ಟಿ ಯಂತಹ ಖಾಸಗಿವಲಯದಲ್ಲಿ ಉದ್ಯೋಗಮಾಡುತ್ತಿದ್ದು ಅವರೆಲ್ಲರೂ ಈ ಸಂಘದಲ್ಲಿ ಸೇರ್ಪಡೆಯಾದರೆ ಸಂಘಕ್ಕೆ ಇನ್ನಷ್ಟು ಬಲ ಬರುತ್ತದೆ. ಭವಿಷ್ಯದಲ್ಲಿ ರಾಜ್ಯದ ರಾಜಧಾನಿ ಬೆಂಗಳೂರಿನಲ್ಲೂ ನಮ್ಮ ಸಂಘದ ಸಭೆಗಳು ನಡೆದಾಗ ಹೆಚ್ಚು ಪರಿಣಾಮಕಾರಿಯಾಗಿರುತ್ತದೆ ಎಂದು ಹೇಳಿದರು. ಕುಮಟಾ ಡಯಟ್ ಹಿರಿಯ ಉಪನ್ಯಾಸಕ ನಾಗರಾಜ ಗೌಡ ಸಂಘದ ಸದಸ್ಯತ್ವ ಪಡೆದ ಪ್ರತಿಯೊಬ್ಬ ಸದಸ್ಯರು ಸಂಘದ ಆಗು ಹೋಗುಗಳ ಬಗ್ಗೆ ಚಿಂತಿಸುವ ಜವಾಬ್ದಾರಿ ಅರಿತರೆ ಸಂಘವನ್ನು ಇನ್ನಷ್ಟು ಕ್ರೀಯಾಶೀಲವಾಗಿಸಲು ಸಾಧ್ಯವಾಗುತ್ತದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸಂಘದ ಅಧ್ಯಕ್ಷ ಜಂಗಾ ಗೌಡರವರು ಸಮಾಜ ನನಗೇನು ಮಾಡಿದೆ ಎನ್ನುವುದಕ್ಕಿಂತ ನಾನು ಸಮಾಜಕ್ಕೆ ಏನು ಮಾಡಿದೆ ಎಂದು ಪ್ರತಿಯೊಬ್ಬರೂ ಆತ್ಮಾವಲೋಖನ ಮಾಡಿಕೊಂಡಾಗ ಸಮಾಜಮುಖಿ ಚಿಂತನೆಗಳು ಹೊರಹೊಮ್ಮಲು ಸಾಧ್ಯವಾಗುತ್ತದೆ. ಈ ದಿಶೆಯಲ್ಲಿ ನಮ್ಮ ನೌಕರಬಾಂಧವರ ಧನಾತ್ಮಕ ವಿಚಾರ ನಮ್ಮ ಸಂಘ ಇಷ್ಟು ಪ್ರಗತಿಯಾಗಲು ಸಾಧ್ಯವಾಗಿದೆ.
ನಮ್ಮ ಸಮಾಜದ ನೌಕರರ ಸಂಘ ಹಲವು ಕಾರ್ಯಕ್ರಮ ಮಾಡಿದ್ದರೂ ಕಳೆದ ಮಳೆಗಾಲದಲ್ಲಿ ವರುಣನ ಅಬ್ಬರಕ್ಕೆ ಶಿರೂರು ಗುಡ್ಡ ಕುಸಿತದಿಂದ ನಮ್ಮ ಸಮಾಜದವರೇ ಅಧಿಕವಾಗಿರುವ ಉಳುವರೆ ಗ್ರಾಮ ಸಂತ್ರಸ್ತರಾದಾಗ ನಾವು ಸಂಘದ ಮೂಲಕ ಮಾಡಿಕೊಂಡ ಒಂದು ವಿನಂತಿಗೆ ಸುಮಾರು ಎರಡು ಲಕ್ಷ ಎಪ್ಪತ್ತಾರು ಸಾವಿರ ರೂಪಾಯಿ ಮೊತ್ತದ ಆರ್ಥಿಕ ನೆರವು ಸಂಗ್ರಹಿಸಲು ನಮ್ಮ ಎಲ್ಲಾ ನೌಕರ ಬಾಂಧವರು ಮಾಡಿದ ಸಹಾಯ ಮರೆಯುವಂತಿಲ್ಲ ಎಂದರು. ಭವಿಷ್ಯದಲ್ಲಿ ತೆರೆಮರೆಯಲ್ಲಿರುವ ನಮ್ಮ ಸಮಾಜದ ಎಲ್ಲಾ ನೌಕರ ಬಾಂಧವರು ಸಂಘದ ಮುಖ್ಯವಾಹಿನಿಯಲ್ಲಿ ತೊಡಗಿಸಿಕೊಳ್ಳಲು ಮುಂದೆ ಬರಬೇಕು ಎಂದರು.
ಕಾರವಾರ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಆರ್.ಪಿ.ಗೌಡ, ಸಂಘದ ಗೌರವಾಧ್ಯಕ್ಷ ಡಾ.ಶ್ರೀಧರ ಗೌಡ, ಅಂಕೋಲಾ ತಾಲೂಕು ಹಾಲಕ್ಕಿ ಒಕ್ಕಲಿಗರ ಸಂಘದ ಅಧ್ಯಕ್ಷ ಲಂಬೋದರ ಗೌಡ ಸಂದರ್ಭೋಚಿವಾಗಿ ಮಾತನ್ನಾಡಿದರು.
ಸಂಘದ ಕಾರ್ಯದರ್ಶಿ ಅರುಣ ಗೌಡ ಪ್ರಾಸ್ತಾವಿಕ ಮಾತನ್ನಾಡಿದರು. ಶಿಕ್ಷಕ ಗಣಪತಿ ಗೌಡ ನಿರೂಪಿಸಿದರು. ಸನ್ಮಾನ ಸ್ವೀಕರಿಸಿದ ನಿವೃತ್ತ ನೌಕರರಾದ ಕೆ.ಎಂ.ಗೌಡ, ನಾರಾಯಣ ಗೌಡ ಮತ್ತು ಜಯಶ್ರೀ ಗೌಡ ಅನಿಸಿಕೆ ವ್ಯಕ್ತಪಡಿಸಿದರು. ಕೊನೆಯಲ್ಲಿ ಕೃಷ್ಣ ಗೌಡ ವಂದಿಸಿದರು. ಮಧ್ಯಾಹ್ನ ಸಂಘದ ಮಹಾಸಭೆ ನಡೆಯಿತು.
ವಿಸ್ಮಯ ನ್ಯೂಸ್, ಕುಮಟಾ