Join Our

WhatsApp Group
Big News
Trending

ಮಳೆ ಅವಾಂತರ: ಮಣ್ಣಿನ ರಾಶಿಗೆ ನುಗ್ಗಿದ ಸಾರಿಗೆ ಬಸ್

ಅಂಕೋಲಾ: ಮಳೆಗಾಲ ಆರಂಭವಾಗುತ್ತಿರುವ ಲಕ್ಷಣಗಳ ನಡುವೆ ಮಳೆಯ ಆರ್ಭಟ ಅಥವಾ ಇತರೆ ಕಾರಣಗಳಿಂದ ಹೆದ್ದಾರಿಗಳಲ್ಲಿ ವಾಹನಗಳು ಚಾಲಕರ ನಿಯಂತ್ರಣ ತಪ್ಪುವ ಸಾಧ್ಯತೆಗಳು ಇವೆ ಎನ್ನಲಾಗಿದೆ. ಅಂಕೋಲಾದ ಒಂದೆಡೆ ಸಾರಿಗೆ ಸಂಸ್ಥೆ ಬಸ್ಸು ಹಾಗೂ ಇನ್ನೊಂದೆಡೆ ಪಿಕ್ ಅಪ್ ವಾಹನ ಚಾಲಕನ ನಿಯಂತ್ರಣ ತಪ್ಪಿ ಅವಾಂತರವಾಗಿದ್ದು, ಅದೃಷ್ಟವಶಾತ್ ಈ ಎರಡೂ ಪ್ರತ್ಯೇಕ – ಪ್ರತ್ಯೇಕ ಅಪಘಾತಗಳಲ್ಲಿ ವಾಹನಗಳಲ್ಲಿ ಇದ್ದವರಿಗಾಗಲಿ , ಇತರರಾಗಿ ಸಂಭವನೀಯ ಭಾರೀ ಅಪಾಯದಿಂದ ಪಾರಾದಂತಾಗಿದೆ.

ತಾಲೂಕಿನ ಬೆಳಸೆ ಹೈ ಸ್ಕೂಲ್ ತಿರುವಿನ ಬಳಿ ಚತುಷ್ಪಥ ಹೆದ್ದಾರಿ ಕಾಮಗಾರಿ ಅಪೂರ್ಣ ಗೊಂಡಿದ್ದು ಅಲ್ಲಿಯೇ ಸಂಭವಿಸಿದ ಹೆದ್ದಾರಿ ಅವಘಡದಲ್ಲಿ ಸಾರಿಗೆ ಸಂಸ್ಥೆಯ ಬಸ್ಸೊಂದು ಚಾಲಕನ ನಿಯಂತ್ರಣ ತಪ್ಪಿ ಹೆದ್ದಾರಿ ಅಂಚಿಗೆ ಸುರಿದಿರುವ ಮಣ್ಣು ರಾಶಿಗೆ ಗುದ್ದಿಕೊಂಡ ಪರಿಣಾಮ ಬಸ್ ನ ಮುಂಭಾಗ ಜಖಂ ಗೊಂಡಿದ್ದು , ಒಂದಿಬ್ಬರಿಗೆ ಚಿಕ್ಕಪುಟ್ಟ ಗಾಯ ನೋವುಗಳಾದರೂ ಅದೃಷ್ಟವಶಾತ್ ಬಸ್ ನಲ್ಲಿದ್ದ ಇತರರು ಸಂಭವನೀಯ ಅಪಾಯದಿಂದ ಪಾರಾಗಿದ್ದಾರೆ.

ಅಂಕೋಲಾ ಪಟ್ಟಣ ವ್ಯಾಪ್ತಿಯ ಹುಲಿದೇವರವಾಡದ ಬಳಿ ಸಂಭವಿಸಿದ ಪ್ರತ್ಯೇಕ ಇನ್ನೊಂದು ರಸ್ತೆ ಅವಘಡದಲ್ಲಿ ಪಿಕ್ ಅಪ್ ವಾಹನವೊಂದು ನಿಯಂತ್ರಣ ತಪ್ಪಿ ಹೆದ್ದಾರಿ ಡಿವೈಡರ್ ಕಾಲುವೆಯಲ್ಲಿ ಸಿಲುಕಿಕೊಂಡಿದ್ದು ಅದೃಷ್ಟವಶಾತ್ ಯಾವುದೇ ಜೀವಹಾನಿ ಸಂಭವಿಸಿಲ್ಲ. ಕಾರವಾರ ತಾಲೂಕಿನ ಮುದಗಾ ಬಳಿ ಸಂಭವಿಸಿದ ಪ್ರತ್ಯೇಕ ಇನ್ನೊಂದು ರಸ್ತೆ ಅಪಘಾತದಲ್ಲಿ ಬಿಳಿ ಬಣ್ಣದ ವಾಹನವೊಂದು ಧರೆಯಂಚಿಗೆ ಮೂತಿ ಚಚ್ಚಿಕೊಂಡಿದೆ. ಈ ಮೂರು ಕಡೆ 1033 ಎನ್ ಎಚ್ ಎ ಐ ತುರ್ತು ವಾಹನ ಸಿಬ್ಬಂದಿಗಳು ಹಾಜರಾಗಿ , ಅಪಘಾತ ಗೊಂಡ ವಾಹನಗಳ ತೆರವು ಹಾಗೂ ಇತರೆ ವಾಹನಗಳ ಸುಗಮ ಸಂಚಾರಕ್ಕೆ ಅನುಕೂಲ ಕಲ್ಪಿಸಲು ಕರ್ತವ್ಯ ನಿರ್ವಹಿಸಿದರು.

ಮಳೆಗಾಲ ಮತ್ತಿತರ ಕಾರಣದಿಂದ ಹೆದ್ದಾರಿಯಲ್ಲಿ ವಾಹನಗಳನ್ನು ವೇಗದ ಮಿತಿ ಪಾಲನೆಗೊಳಪಟ್ಟು ಮತ್ತು ಜಾಗರೂಕತೆಯೊಂದಿಗೆ ಚಲಾಯಿಸುವುದು ಅಗತ್ಯವಾಗಿದ್ದು ಸ್ವಲ್ಪ ಯಾಮಾರಿದರೂ ಅನಾಹುತಗಳಿಗೆ ಕಾರಣವಾಗುವ ಸಾಧ್ಯತೆಗಳೇ ಹೆಚ್ಚಿದೆ. ಎನ್ ಎಚ್ ಎ ಐ , ಪೊಲೀಸ್ ಮತ್ತಿತರ ಸಂಬAಧಿತ ಇಲಾಖೆಗಳು ಹಾಗೂ ಚತುಷ್ಪಥ ಗುತ್ತಿಗೆದಾರ ಐ ಆರ್ ಬಿ ಈ ಕುರಿತು ಜಾಗೃತಿ ಮೂಡಿಸಿ ಎಚ್ಚರಿಸುವ ಮತ್ತು ಹೆದ್ದಾರಿ ಸುಗಮ ಸಂಚಾರಕ್ಕೆ ಇತರೆ ಕೆಲ ತುರ್ತು ಅಗತ್ಯ ಕ್ರಮ ಕೈಗೊಳ್ಳಬೇಕಿದೆ.

ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ

Back to top button