Join Our

WhatsApp Group
Important
Trending

ರಾಜ್ಯದಾದ್ಯಂತ ಪೂರ್ವ ಮುಂಗಾರು ಮಳೆಯ ಅಬ್ಬರ : ತಗ್ಗು ಪ್ರದೇಶಗಳಿಗೆ ನುಗ್ಗಿದ ನೀರು

ಕಾರವಾರ: ರಾಜ್ಯದಾದ್ಯಂತ ಪೂರ್ವ ಮುಂಗಾರು ಮಳೆ ಅಬ್ಬರಿಸುತ್ತಿದ್ದು ರಾಜ್ಯದ ಕರಾವಳಿ ಜಿಲ್ಲೆಗಳು ಏರಿದಂತೆ 4 ಜಿಲ್ಲೆಗಳಿಗೆ ರೆಡ್ ಅಲರ್ಟ, 6 ಜಿಲ್ಲೆಗಳಿಗೆ ಆರೆಂಜ್ ಅಲರ್ಟ ಘೋಷಣೆ ಮಾಡಿ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಅರಬ್ಬಿ ಸಮುದ್ರದಲ್ಲಿ ವಾಯುಭಾರ ಕುಸಿತವಾಗಿರುವ ಹಿನ್ನೆಲೆಯಲ್ಲಿ ಕರಾವಳಿ ಜಿಲ್ಲೆಗಳಾದ ಉತ್ತರ ಕನ್ನಡ, ಉಡುಪಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆಗಳಿಗೆ ರೆಡ್ ಅಲರ್ಟ ಘೋಷಣೆ ಮಾಡಲಾಗಿದೆ.

ಕರಾವಳಿ ಹಾಗೂ ರಾಜ್ಯದ ಒಳನಾಡು ಜಿಲ್ಲೆಗಳಲ್ಲಿ ಮಳೆಯು ಅಬ್ಬರಿಸುತ್ತಿದ್ದು ಇನ್ನು ಕೆಲವು ದಿನಳು ಈ ಮಳೆಯು ಮುಂದುವರೆಯುವ ಸಾಧ್ಯತೆ ಇದೆ ಎನ್ನಲಾಗಿದೆ. ಅದೇ ರೀತಿ ಉತ್ತರ ಕನ್ನಡ ಜಿಲ್ಲೆಯಲ್ಲಿಯೂ ಸಹ ವರುಣನ ಆರ್ಭಟ ಮುಂದುವರೆದಿದ್ದು ಅನೇಕ ಕಡೆಗಳಲ್ಲಿ ತಗ್ಗು ಪ್ರದೇಶಗಳಿಗೆ ನೀರು ನುಗ್ಗಿದೆ. ರಸ್ತೆಗಳಲ್ಲಿ ನೀರು ನಿಂತು ವಾಹನ ಸವಾರರು ಮತ್ತು ಪಾದಾಚಾರಿಗಳಿಗೆ ಸಂಚರಿಸಲು ಸಾಧ್ಯವಾಗದ ಸ್ಥಿತಿ ನಿರ್ಮಾಣವಾಗಿದೆ. ಮಳೆಯ ಅಬ್ಬರಕ್ಕೆ ಕುಮಟಾ ತಾಲೂಕಿನ ಕುಮಟಾ ಸಿದ್ದಾಪುರ ರಸ್ತೆ ಸಂಪೂರ್ಣ ಜಲಾವೃತವಾಗಿದ್ದು ಈ ಭಾಗದಲ್ಲಿ ಸಂಚಾರ ಅಸ್ತವ್ಯಸ್ಥವಾಗಿದೆ. ಕುಮಟಾದಲ್ಲಿ ಕಳೆದ ಎರಡು ದಿಗಳಿಂದ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ರಸ್ತೆಯ ಪಕ್ಕದ ಚರಂಡಿ ಬ್ಲಾಕ್ ಆಗಿದ್ದು ನೀರು ಸರಾಗವಾಗಿ ಹೋಗದೇ ರಸ್ತೆ ಮೇಲೆ ನೀರು ಹರಿಯುತ್ತಿದೆ. ಈ ಭಾಗದ ವಾಲ್ಗಳ್ಳಿಯ ಬಳಿ ಮನೆ ಜಮೀನುಗಳಿಗೆ ನೀರು ನುಗ್ಗುವ ಆತಂಕ ತಂದೊಡ್ಡಿದೆ.

ರಾಷ್ಟ್ರೀಯ ಹೆದ್ದಾರಿ 66 ರ ಕುಮಟಾ ಅಳ್ವೇಕೋಡಿ ಮಾವಿನ ಮರ ಕ್ರಾಸ ಇಂದ ಅಳ್ವೆಕೋಡಿ ಹನುಮಂತ ದೇವಸ್ತಾನ ಕ್ರಾಸ ವರೆಗೆ ರಸ್ತೆಯಲ್ಲಿಯೇ ನೀರು ರಸ್ತೆಯಲ್ಲಿಯೇ ನಿಲ್ಲುತ್ತಿದ್ದು ಈ ಭಾಗದಲ್ಲಿ ಬೈಕ್, ಕಾರು ಸವಾರರು, ಪಾದಚಾರಿಗಳು ,ಶಾಲಾ ವಿದ್ಯಾರ್ಥಿಗಳು ರಸ್ತೆಯ ಬದಿಯಲ್ಲಿ ಹೋಗುವ ಬದಲು ರಸ್ತೆ ಮದ್ಯದಲ್ಲಿಯೇ ಸಂಚಾರ ಮಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಇದಕ್ಕೆಲ್ಲಾ ಮೂಲ ಕಾರಣ ಐಆರ್‌ಬಿ ಕಂಪನಿಯ ಅಸಮರ್ಪಕ ಕಾಮಗಾರಿಯೇ ಕಾರಣ ಎಂದು ಸಾರ್ವಜನಿಕರು ಅಸಮಾಧಾನ ಹೊರಹಾಕಿದ್ದಾರೆ.

ರಾಷ್ಟ್ರೀಯ ಹೆದ್ದಾರಿ 766ಇ ನಲ್ಲಿ ಹೆದ್ದಾರಿ ಕಾಮಗಾರಿ ನಡೆಯುತಿದ್ದು ಈ ಹಿಂದೆ ಗುಡ್ಡವನ್ನು ತುಂಡರಿಸಿ ರಸ್ತೆ ಮಾಡಲಾಗಿತ್ತು. ಆದರೇ ಇದೀಗ ಇದೇ ಭಾಗದಲ್ಲಿ ಗುಡ್ಡ ಕುಸಿಯುತಿದ್ದು ಇಂದು ಗುಡ್ಡ ಕುಸಿದು ಕಲ್ಲುಬಂಡೆಗಳು ಹೆದ್ದಾರಿಗೆ ಬಂದು ಬಿದ್ದಿದೆ. ಇದರಿಂದಾರಿ ಹೆದ್ದಾರಿ ಸಂಚಾರ ಬಂದ್ ಆಗಿದ್ದು ವಾಹನ ಸಂಚಾರ ನಿಷೇಧಿಸಲಾಗಿದೆ. ಇನ್ನೂಹೆಚ್ಚಿನ ಮಳೆಯಾದರೇ ಈ ಭಾಗದಲ್ಲಿ ದೊಡ್ಡ ಮಟ್ಟದ ಭೂ ಕುಸಿಯುವ ಸಾಧ್ಯತೆಗಳಿವೆ. ಕಳೆದ ವರ್ಷ ಸಹ ದೇವಿಮನೆ ಗಟ್ಟ ಭಾಗದಲ್ಲಿ ಗುಡ್ಡ ಕುಸಿದು ಸಂಚಾರ ಸಂಪೂರ್ಣ ಬಂದ್ ಆಗಿತ್ತು. ಇನ್ನು ಈ ಭಾಗದಲ್ಲಿ ಯಾವಾಗ ಬೇಕಾದರೂ ಗುಡ್ಡ ಕುಸಿತ ಆಗುವ ಸಾಧ್ಯತೆಗಳಿದ್ದು ವಾಹನ ಸವಾರರು ಎಚ್ಚರಿಕೆಯಿಂದ ಸಂಚರಿಸಬೇಕಿದೆ.

ಅರಬ್ಬಿ ಸಮುದ್ರದಲ್ಲಿ ಭಾರಿ ಗಾಳಿಮಳೆ ಸಾಧ್ಯತೆ ಹಿನ್ನೆಲೆಯಲ್ಲಿ, ಭಾರತೀಯ ಹವಾಮಾನ ಇಲಾಖೆ ನೀಡಿದ ಹವಾಮಾನ ಮಾಹಿತಿಯಂತೆ ಮೇ23 ವರೆಗೆ ಉತ್ತರ ಕನ್ನಡ ಜಿಲ್ಲೆಯ ಎಲ್ಲ ಮೀನುಗಾರರಿಗೆ ಸಮುದ್ರಕ್ಕೆ ಮೀನುಗಾರಿಕೆಗೆ ತೆರಳದಂತೆ ಎಚ್ಚರಿಕೆ ನೀಡಲಾಗಿದೆ. ಈ ಅವಧಿಯಲ್ಲಿ ಮೀನುಗಾರಿಕೆ ದೋಣಿಗಳಿಗೆ ಡೀಸೆಲ್ ವಿತರಣೆಯನ್ನು ಸ್ಥಗಿತಗೊಳಿಸಲಾಗುವುದು. ಸಾಂಪ್ರದಾಯಿಕ ಮೀನುಗಾರರು ಸಮುದ್ರ ದಡದಲ್ಲಿ ನಿಲ್ಲಿಸಿಟ್ಟಿರುವ ದೋಣಿ ಮತ್ತು ಬಲೆಗಳನ್ನು ಸುರಕ್ಷಿತವಾಗಿಟ್ಟುಕೊಳ್ಳುವಂತೆ ಮೀನುಗಾರಿಕೆ ಇಲಾಖೆಯ ಜಂಟಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಬ್ಯುರೋ ರಿಪೋರ್ಟ ವಿಸ್ಮಯ ನ್ಯೂಸ್

Back to top button