ಈಕೆ ಕಳ್ಳ ಮಾರ್ಗದ ಮೂಲಕ ಭಾರತಕ್ಕೆ ಬಂದು ಎಂಟು ವರ್ಷಗಳೇ ಕಳೆದಿವೆ. ಕಳ್ಳ ಮಾರ್ಗದ ಮೂಲಕ ಪಾಕಿಸ್ತಾನದಿಂದ ಭಾರತಕ್ಕೆ ಆಗಮಿಸಿ, ಇಲ್ಲಿ ಆಧಾರ್ ಕಾರ್ಡ್, ಪಾನ್ ಕಾರ್ಡ್ ಸೇರಿದಂತೆ ಎಲ್ಲಾ ದಾಖಲೆ ಮಾಡಿಕೊಂಡಿದ್ದಾಳೆ. ಕೊನೆಗೂ ಈಕೆಯನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಭಟ್ಕಳ: ಪಾಕಿಸ್ತಾನದ ಈಕೆ ಕಳೆದ ಎಂಟು ವರ್ಷಗಳಿಂದ ಅಕ್ರಮವಾಗಿ ಭಟ್ಕಳದಲ್ಲಿ ನೆಲೆಸಿದ್ದಳು. ಹೌದು, ಭಟ್ಕಳದ ನವಾಯತ್ ಕಾಲೋನಿಯೊಂದರ ಮನೆಯಲ್ಲಿ ಅಕ್ರಮವಾಗಿ ವಾಸ್ತವ್ಯ ಹೂಡಿದ್ದ ಪಾಕಿಸ್ತಾನ ಮೂಲದ ಮಹಿಳೆಯನ್ನು ಪೊಲೀಸರು ಬಂಧಿಸುವಲ್ಲಿ ಯಶಸ್ಸುಕಂಡಿದ್ದಾರೆ. ಬಂಧಿತ ಮಹಿಳೆಯನ್ನು ಖತೀಜಾ ಮೆಹರಿನ್ ಎಂದು ಗುರುತಿಸಲಾಗಿದೆ.
ಆತಂಕದ ವಿಷಯ ಅಂದರೆ ಈ ಮಹಿಳೆ ಭಟ್ಕಳದಲ್ಲಿ ಸುಳ್ಳು ದಾಖಲೆಗಳನ್ನು ಸ್ಥಳೀಯ ಸಂಸ್ಥೆಗಳಿಗೆ ನೀಡಿ ಅಗತ್ಯ ದಾಖಲೆಗಳನ್ನು ಪಡೆದಿದ್ದಾಳೆ. ರೇಶನ್ ಕಾರ್ಡ್ , ಜನನ ಪ್ರಮಾಣಪತ್ರ, ಆಧಾರ್ ಕಾರ್ಡ್, ಪಾನ್ ಕಾರ್ಡ್, ಚುನಾವಣಾ ಗುರುತಿನ ಚೀಟಿ ಪಡೆದಕೊಂಡಿದ್ದಾಳೆ.
ಪೊಲೀಸರು ದಾಳಿ ವೇಳೆ ಈ ಎಲ್ಲಾ ದಾಖಲೆಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಇದೀಗ ಈಕೆಯ ವಿರುದ್ಧ ವಿದೇಶಿ ಕಾಯ್ದೆ ಉಲ್ಲಂಘನೆ ಮತ್ತು ಇತರೆ ಐಪಿಸಿ ಪ್ರಕರಣಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಪಾಕಿಸ್ತಾನದ ನಾಗರಿಕತ್ವ ಹೊಂದಿರುವ ಈ ಮಹಿಳೆ ಕಳ್ಳ ಮಾರ್ಗದ ಮೂಲಕ ಭಟ್ಕಳಕ್ಕೆ 8 ವರ್ಷಗಳ ಹಿಂದೆಯೇ ಆಗಮಿಸಿ ಅಕ್ರಮವಾಗಿ ವಾಸವಾಗಿರುವ ಬಗ್ಗೆ ಗುಪ್ತಚರ ಇಲಾಖೆಗೆ ಮಾಹಿತಿ ಸಿಕ್ಕಿತ್ತು. ಜಾವೀದ್ ಮೊಹಿದ್ದೀನ್ ರುಕ್ಕುದ್ದೀನ್ ಎಂಬಾತನನ್ನು ದುಬೈನಲ್ಲಿ ವಿವಾಹವಾಗಿದ್ದಳು.
ಅಲ್ಲದೆ, 2014ರಲ್ಲಿ 3 ತಿಂಗಳು ವಿಸಿಟಿಂಗ್ ವೀಸಾದ ಮೇಲೆ ಭಾರತಕ್ಕೆ ಬಂದು ಹಿಂತಿರುಗಿದ್ದಳು. ಆದರೆ, 2016ರಲ್ಲಿ ಪ್ರಾರಂಭದಲ್ಲಿ ಕಳ್ಳ ಮಾರ್ಗವಾಗಿ ಭಾರತಕ್ಕೆ ನುಸುಳಿ ಬಂದು 3 ಮಕ್ಕಳೊಂದಿಗೆ ವಾಸವಾಗಿದ್ದಳು.
ಮಹಿಳೆಯನ್ನು ಸ್ಥಳೀಯ ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದು, ನ್ಯಾಯಾಂಗ ಬಂಧನ ವಿಧಿಸಿಸಲಾಗಿದೆ. ಉತ್ತರಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶಿವಪ್ರಕಾಶ ದೇವರಾಜು, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಬದರಿನಾಥ ಮಾರ್ಗದರ್ಶನದಲ್ಲಿ ಡಿವೈಎಸ್ಪಿ ಬೆಳ್ಳಿಯಪ್ಪ, ಕೆ.ಯು. ಸಿಪಿಐ ದಿವಾಕರ ಪಿ.ಎಮ್, ಭಟ್ಕಳ ನಗರ ಪೊಲೀಸ್ ಠಾಣೆಯ ಪಿಎಸ್ಐ ಕುಸುಮಾ ಬಿ ಮತ್ತು ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.
ವಿಸ್ಮಯ ನ್ಯೂಸ್, ಉದಯ್ ಎಸ್ ನಾಯ್ಕ, ಭಟ್ಕಳ